ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 16 ನವೆಂಬರ್ 2024ರಂದು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಲಿದ್ದು, ಆ ಪ್ರಯುಕ್ತ ಸಮ್ಮೇಳನದ ಸಿದ್ಧತಾ ಪೂರ್ವಭಾವಿ ಸಭೆಯು ದಿನಾಂಕ 27 ಸೆಪ್ಟೆಂಬರ್ 2024ರಂದು ಕ.ಸಾ.ಪ. ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆಯವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ “ಕಾಪು ತಾಲೂಕು ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ವಿಶಿಷ್ಠ ಪರಂಪರೆಯನ್ನು ಹೊಂದಿದ ತಾಲೂಕು ಆಗಿದೆ. ಕಾಪು ನೂತನ ತಾಲೂಕು ಆಗಿ ರಚನೆಯಾದಂದಿನಿಂದ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯದ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಈ ತಾಲೂಕು ಹೊಂದಿದ್ದು 6ನೇ ಸಮ್ಮೇಳನಕ್ಕೆ ಸಿದ್ಧತೆಯಲ್ಲಿರುವುದು ಅಭಿನಂದನೀಯ” ಎಂದರು.
ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ ನುಡಿಜಾತ್ರೆಯಾಗಿದ್ದು, ತಾಯಿ ಭುವನೇಶ್ವರೀಯ ಶೋಭಾಯಾತ್ರೆಯೊಂದಿಗೆ ಪ್ರಾರಂಭವಾಗಿ ಸಮಾರೋಪದವರೆಗೆ ಜರುಗುವ ವಿವಿಧ ಕಾರ್ಯಕ್ರಮಗಳು, ವ್ಯವಸ್ಥಿತವಾಗಿ ನಡೆಸಲು ಪೂರಕ ಉಪಸಮಿತಿಗಳು ಹಾಗೂ ಸಮಿತಿಯ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರು, ಉಪ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಸಮಾಜ ಸೇವಕರು, ಶಾಲಾ ಹಳೆವಿದ್ಯಾರ್ಥಿಗಳಾದ ಲಕ್ಷ್ಮಣ ಶೆಟ್ಟಿ ನಂದಿಕೂರು, ಪಲಿಮಾರು ಇಗರ್ಜಿಯ ಧರ್ಮಗುರುಗಳಾದ ವಂದನೀಯ ಜೆರಾಲ್ಡ್ ಡಿ’ಮೆಲ್ಲೋ ಮಾತನಾಡಿ ಪಲಿಮಾರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಒದಗಿ ಬಂದುದು ಊರಿಗೆ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ಸೇರಿ ಯಶಸ್ವಿಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕ.ಸಾ.ಪ. ಜಿಲ್ಲಾಕೋಶಾಧ್ಯಕ್ಷ ಮನೋಹರ್ ಪಿ., ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ದೇವದಾಸ್ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮೇಲ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ ವೇದಿಕೆಯಲ್ಲಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಸುಜಾತಾ ಸಭೆಯಲ್ಲಿ ಉಪಸ್ಥಿರಿದ್ದರು.
ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಧರ್ ಆಚಾರ್ಯ, ಗ್ರಾ.ಪಂ. ಸದಸ್ಯರುಗಳಾದ ಗಾಯತ್ರಿ ಡಿ.ಪ್ರಭು, ಸುಜಾತಾ, ಶ್ರೀ ಪ್ರವೀಣ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಸುವರ್ಣ, ಹೊಯ್ಗೆ ಫ್ರಂಡ್ಸ್ ಹೊಯ್ಗೆ (ರಿ.) ಇದರ ಅಧ್ಯಕ್ಷ ರಿತೇಶ್ ದೇವಾಡಿಗ, ಶ್ರೀದೇವಿ ಫ್ರೆಂಡ್ಸ್ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ, ಹಳೆ ವಿದ್ಯಾರ್ಥಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಿರೀಶ್ ಪಲಿಮಾರು, ಮಧುಕರ್ ನಾಯಕ್, ಸುರೇಶ್, ಸ್ಟ್ಯಾನಿ ಕ್ವಾಡ್ರಸ್, ಕ.ಸಾ.ಪ. ಜಿಲ್ಲಾ ಸಮಿತಿಯ ನರಸಿಂಹಮೂರ್ತಿ, ಕ.ಸಾ.ಪ. ಕಾಪು ತಾಲೂಕು ಸಮಿತಿಯ ಗೌರವ ಕಾರ್ಯದರ್ಶಿ ಆಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಸದಸ್ಯರಾದ ಕೃಷ್ಣಕುಮಾರ್ ರಾವ್ ಮಟ್ಟು, ಅನಂತ ಮೂಡಿತ್ತಾಯ, ಸತ್ಯಸಾಯಿ ಪ್ರಸಾದ್, ರಮಾಕಾಂತ್ ರಾವ್ ಪಡುಬಿದ್ರಿ, ಆಹ್ವಾನಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿ, ಪ್ರೌಢ ಶಾಲಾ ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ ಧನ್ಯವಾದವಿತ್ತರು. ಪಲಿಮಾರು ಕ.ಸಾ.ಪ. ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಿಸೃತ ಮಾಹಿತಿ ನೀಡಿದರು.