ಮಡಿಕೇರಿ : ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಶಿಶುಸಾಹಿತ್ಯದ ಪಿತಾಮಹ, ಕೊಡಗಿನ ಹುತ್ತರಿ ಹಾಡಿನ ಜನಕ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಮಡಿಕೇರಿಯಲ್ಲಿ ಆಚರಿಸುವ ಕುರಿತು ಪೂರ್ವಭಾವಿ ಸಭೆಯು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜು (ಆಗಿನ ಸೆಂಟ್ರಲ್ ಹೈಸ್ಕೂಲ್) ಇಲ್ಲಿ ದಿನಾಂಕ 23 ನವೆಂಬರ್ 2024ರಂದು ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹಾಗೂ ಶಾಲಾ-ಕಾಲೇಜು ಮುಖ್ಯೋಪಾಧ್ಯಾಯರನ್ನು ಈ ಸಭೆಗೆ ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ 22 ವರ್ಷಗಳ ಕಾಲ ಶಾಲಾ ಇನ್ಸಪೆಕ್ಟರ್, ಶಿಕ್ಷಕರಾಗಿ, ಮುಖ್ಯೋಪಾದ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ನಾಡಿಗೆ ಕೀರ್ತಿ ತಂದಿರುವ ಇವರು ಕೊಡಗಿನ ಗ್ರಾಮೀಣ ಬದುಕನ್ನು ಮತ್ತು ಪರಿಸರವನ್ನು ಅನುಭವಿಸಿ ಕಥೆ, ಕಾದಂಬರಿ, ಕವನಗಳನ್ನು ರಚಿಸಿದ್ದರು. ಅವು ಇಂದಿಗೂ ಪ್ರಸ್ತುತ. ಸಣ್ಣಕತೆಗಳ ಜನಕ ಎಂದೇ ಪ್ರಖ್ಯಾತರಾಗಿದ್ದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಆಚರಿಸುವುದು ಕೊಡಗಿನ ಎಲ್ಲ ಸಾಹಿತ್ಯ, ಶೈಕ್ಷಣಿಕ ಸಂಸ್ಥೆಗಳು, ಜಿಲ್ಲೆಯ ನಾಗರೀಕ ಸಮಾಜ ಜವಾಬ್ದಾರಿಯಾಗಿದೆ. ಅವರು ಅಂದಿನ ಕಾಲದಲ್ಲಿ ರಚಿಸಿದ ಹುತ್ತರಿ ಹಾಡು “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭೀಮ್ಮನೆ ಬಂದಳು” ಇಂದಿಗೂ ಪ್ರಸ್ತುತವಾಗಿದೆ. ಕೊಡಗಿನ ಎಲ್ಲರ ಮನೆ ಮನದಲ್ಲಿ ತುಂಬಿದೆ” ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಿ. ರಮೇಶ್ ರವರು “ಈ ಹಿಂದೆ 125ನೇ ವರ್ಷಾಚರಣೆಯನ್ನು ಆಚರಿಸಿದ ಕುರಿತು ಮಾಹಿತಿ ನೀಡಿದರು. ಕೊಡಗಿನಂತ ಗ್ರಾಮೀಣ ಪ್ರದೇಶದಲ್ಲಿದ್ದು, ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂದಿನ ಕಾಲದಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದ ಪಂಜೆ ಮಂಗೇಶರಾಯರ ಕುರಿತು ವಿವರಣೆ ಇತ್ತರು. ಪಂಜೆಯವರ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಪಂಜೆ ಅವರ ರಚಿಸಿದ ಕವನಗಳ ಗಾನ ಸ್ಪರ್ಧೆ, ಸಾಹಿತ್ಯದ ಚರ್ಚೆ ಆಗಬೇಕಿದೆ. ರಾಜ್ಯದ ಹಿರಿಯ ಸಾಹಿತಿಗಳನ್ನು ಕರೆಸಿ ಅವರಿಂದ ವಿಚಾರಗೋಷ್ಠಿ, ಪಂಜೆಯವರ ಸಾಹಿತ್ಯದ ಕುರಿತು ಚರ್ಚೆ, ವಿಮರ್ಶೆ ನಡೆಸಿ, ಪ್ರಬಂದ ಮಂಡಿಸುವುದು ಆಗಬೇಕಿದೆ” ಎಂದರು.
ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡುತ್ತಾ ಸಾಹಿತ್ಯ ಪರಿಷತ್ತು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಪಂಜೆ ಮಂಗೇಶರಾಯರ ಕುರಿತು ಕಾರ್ಯಕ್ರಮ ನಡೆಸಲು ಆಯೋಜಿಸುತ್ತಿರುವುದು ಸಂತೋಷದ ವಿಚಾರ. ತಮ್ಮ ಇಲಾಖೆಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಜನರಲ್ ತಿಮ್ಮಯ್ಯ ಶಾಲೆಯ ಅಧ್ಯಕ್ಷ ಕೆ.ಎ. ದೇವಯ್ಯರವರು ಮಾತನಾಡುತ್ತಾ ಪಂಜೆಯವರ ಕುರಿತು ವಿಚಾರಗಳು ಅವರ ಸಾಹಿತ್ಯ ಇಂದಿನ ಪೀಳಿಗೆಗೆ ತಿಳಿಯಪಡಿಸುವುದು ಅವಶ್ಯವಾಗಿದೆ. ಈ ಕಾರ್ಯಕ್ರಮಕ್ಕೆ ತಾವು ಬೆಂಬಲವಾಗಿ ನಿಲ್ಲುವುದಾಗಿ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರ ಅಭಿಪ್ರಾಯ ಪಡೆಯಲಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಥರ ಗೌಡ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಿ ವಿವಿಧ ಸಮಿತಿಗಳನ್ನು ರಚಿಸುವಂತೆಯೂ, ಸದ್ಯದಲ್ಲೇ ಇನ್ನೊಂದು ಸಭೆ ಕರೆದು ಶಾಸಕರನ್ನು ಬರುವಂತೆ ಕೋರಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನಿರ್ ಅಹಮದ್, ಶ್ರೀಮತಿ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಗೌರವ ಕಾರ್ಯದರ್ಶಿ ರಿಷಿತ್ ಮಾದಯ್ಯ, ನಿರ್ದೇಶಕರಾದ ಎಚ್.ಎಸ್. ಪ್ರೇಮ್ ಕುಮಾರ್, ಶ್ರೀಮತಿ ಸಹನಾ ಕಾಂತಬೈಲು, ಲೆಕ್ಕಪರಿಶೋಧಕರಾದ ಸಂಜೀವ್ ಜೋಶಿ, ಕೆ.ವಿ. ಉಮೇಶ್, ಹೆಬ್ಬಾಲೆ ಹೋಬಳಿ ಅಧ್ಯಕ್ಷರಾದ ಎಂ.ಎನ್. ಮೂರ್ತಿ, ಮಡಿಕೇರಿ ತಾಲೂಕು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುರಳಿಧರ್, ಕೊಡಗು ಏಲಕ್ಕಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಸೂದನ ಈರಪ್ಪ, ಮಡಿಕೇರಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಲೀಲಾ ಶೇಷಮ್ಮ, ಸ್ಕೌಟ್ಸ್ ಗೈಡ್ಸ್ ಇದರ ಜಿಲ್ಲಾ ಆಯುಕ್ತರಾದ ಕೆ.ಟಿ. ಬೇಬಿ ಮ್ಯಾಥ್ಯೂ, ಶಿಕ್ಷಕರಾದ ಕೆ.ಆರ್. ಬಿಂದು, ಪ್ರವೀಣ್ ಕುಮಾರ್, ಜಾನೆಟ್ ಐ.ಜಿ., ರೇಣುಕಾ ಉಪಸ್ಥಿತರಿದ್ದರು.