ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಿಸುವ ನಿಟ್ಟಿನಲ್ಲಿ ಸಿದ್ಧತೆ ಆರಂಭವಾಗಿದೆ. ‘ಇಂದಿನ ಕನ್ನಡ ಮಕ್ಕಳೇ ಮುಂದಿನ ಕನ್ನಡ ರಕ್ಷಕರು’ ಎಂಬ ಚಿಂತನೆಯಲ್ಲಿ ಕಾರ್ಯಾಚರಿಸುವ ಈ ಸಂಸ್ಥೆಯಲ್ಲಿ ಕನ್ನಡಿಗ ಸದಸ್ಯರಿಗೆ ಉಚಿತ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ಪರಸ್ಪರ ಸಹಕಾರ ತತ್ವದಡಿಯಲ್ಲಿ ಕನ್ನಡ ಪರವಾದ ಕೆಲಸಗಳನ್ನು ನಡೆಸಲಾಗುವುದು.
ಕಾಸರಗೋಡಿನ ಕವಿಗಳಿಗೆ ಕರ್ನಾಟಕದಲ್ಲಿ ನಡೆಯುವ ಅನೇಕ ಕನ್ನಡ ಕಾರ್ಯಕ್ರಮಗಳಲ್ಲಿ ಅವಕಾಶ ಸೃಷ್ಟಿಸುವುದು, ಹಿರಿಯ ಕವಿಗಳ ಮನೆಗೆ ತೆರಳಿ ಕವಿಗೋಷ್ಠಿ ನಡೆಸಿ, ಕವಿಗಳನ್ನು ಗೌರವಿಸಲಾಗುವುದು. ಶಾಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು, ಚುಟುಕು ಸಾಹಿತ್ಯ ರಚನೆ ಸಹಿತ ಇತರ ವಿಚಾರಗಳ ಏಕದಿನ ಕಾರ್ಯಾಗಾರ ನಡೆಸುವುದು, ಶಾಲಾ ಮಕ್ಕಳಿಗೆ ಚುಟುಕು ಸಹಿತ ಸಾಹಿತ್ಯ ರಚನೆಗೆ ಅವಕಾಶ ನೀಡಿ, ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸುವುದು. ಹೊಸ ಸಾಹಿತಿಗಳಿಗೆ ಕಾರ್ಯಕ್ರಮದ ವಿವಿಧ ಹಂತಗಳನ್ನು ನಿರ್ವಹಿಸಲು ತರಬೇತಿ ನೀಡುವುದು, ಆಯ್ದ 100 ಮಂದಿ ಕವಿಗಳ ಚುಟುಕುಗಳ ಸಂಗ್ರಹಿತ ಕೃತಿ ಬಿಡುಗಡೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪರಿಷತ್ತಿನ ಘಟಕಗಳನ್ನು ಸ್ಥಾಪಿಸುವುದು, ಕಾಸರಗೋಡಿನ ಎಲ್ಲಾ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮೊದಲಾದ ಚಟುವಟಿಕೆಯನ್ನು ನಡೆಸಲು ಉದ್ದೇಶಿಸಲಾಗಿದೆ.
ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ದಿನಾಂಕ 02 ಫೆಬ್ರವರಿ 2025ರಂದು ಅಪರಾಹ್ನ 2-00 ಗಂಟೆಗೆ ಸಮಾಲೋಚನಾ ಸಭೆ ನಡೆಯಲಿದೆ. ನಂತರ ಪರಿಷತ್ತಿನ ಉದ್ಘಾಟನೆ, ಪದಗ್ರಹಣ, ಚುಟುಕು ಕವಿಗೋಷ್ಠಿ ನಡೆಯಲಿದೆ. ಕನ್ನಡ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕನ್ನಡ ಭವನ ಗ್ರಂಥಾಲಯದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.