ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಐಗೂರು ಗ್ರಾಮದ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ದಿನಾಂಕ 01 ಡಿಸೆಂಬರ್ 2025ರಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲಿ ಸೋಮವಾರಪೇಟೆ ಕಸಬಾ ಹೋಬಳಿ ಐಗೂರು ಕೇಂದ್ರದಲ್ಲಿ ಊರಿನ ಜನರ, ಸಂಘ-ಸಂಸ್ಥೆಗಳ, ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ತಾಲೂಕು ಸಮ್ಮೇಳನ ನಡೆಸಲು ಅನುಮತಿ ಪಡೆಯಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಮ್ಮೇಳನದ ರೂಪುರೇಷೆ, ಸ್ವಾಗತ ಸಮಿತಿಯ ಮತ್ತು ಉಪ ಸಮಿತಿಗಳ ವಿವರ ನೀಡಿದರು. ಸಮ್ಮೇಳನವು ಬೆಳಗಿನ ಜಾವ ಎಂಟು ಗಂಟೆಗೆ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜದ ಆರೋಹಣದೊಂದಿಗೆ ಪ್ರಾರಂಭವಾಗಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರಗೋಷ್ಠಿ, ಬಹಿರಂಗ ಅಧಿವೇಶನ, ತಾಲೂಕಿನ ಸಾಧಕರಿಗೆ ಸನ್ಮಾನ, ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ ಐಗೂರಿನ ಮತ್ತು ಸುತ್ತುವತ್ತಲ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ಮರೆಯಾದ ಹಿರಿಯ ಗಣ್ಯರನ್ನು ಗುರುತಿಸಿ ಅವರ ನೆನಪಿಗಾಗಿ 9 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಸಮ್ಮೇಳನದ ಸವಿನೆನಪಿಗಾಗಿ ಸಂಗ್ರಹ ಯೋಗ್ಯ ಸ್ಮರಣ ಸಂಚಿಕೆಯನ್ನು ಹೊರತರುವ ಬಗ್ಗೆ ಚರ್ಚಿಸಲಾಯಿತು.
ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡರವರನ್ನು ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ರವರನ್ನು ಆರಿಸಲಾಯಿತು. ಸಮ್ಮೇಳನದ ಮಹಾಪೋಷಕರಾಗಿ ಮಾಜಿ ಸಚಿವರಾದ ಬಿ.ಎ.ಜೀ. ವಿಜಯ, ಎಂ.ಪಿ. ಅಪಚ್ಚು ರಂಜನ್, ಮಾಜಿ ವಿಧಾನಸಭಾ ಸದಸ್ಯರಾದ ಎಸ್.ಜಿ. ಮೇದಪ್ಪ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಡಿ. ವಿಜೇತ್, ಪ್ರಧಾನ ಕಾರ್ಯದರ್ಶಿಯಾಗಿ ಐಗೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್, ಪ್ರದಾನ ಕಾರ್ಯದರ್ಶಿಯಾಗಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ.ಕೆ. ವಿನೋದ್ ಇವರುಗಳನ್ನು ಆರಿಸಲಾಯಿತು.
ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಡಿ. ವಿಜೇತ್ ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್ ಸಂಘಟನಾ ಕಾರ್ಯದರ್ಶಿ ವಾಸು ರೈ ತಾಲೂಕು ಗೌರವ ಕಾರ್ಯದರ್ಶಿ ವಿ.ಎ. ವೀರರಾಜ್, ಅರುಣ್ ಕೋಶಾಧ್ಯಕ್ಷ ಕೆ.ಪಿ. ದಿನೇಶ್ ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್. ನಾಗರಾಜ್ ಗ್ರಾಮ ಪಂಚಾಯಿತಿಯ ಪಿ.ಡಿ.ಒ. ಪೂರ್ಣ ಕುಮಾರ್ ಟಿ.ಸಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಆರ್. ಜ್ಯೋತಿ ಅರುಣ್ ರವರು ನಿರೂಪಿಸಿ. ಸ್ವಾಗತಿಸಿ, ಹೋಬಳಿ ಐಗೂರು ಹೋಬಳಿ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಟಿ. ಸರಳಾ ಕುಮಾರಿ ವಂದಿಸಿದರು.
