11 ಏಪ್ರಿಲ್ 2023, ಮಂಗಳೂರು: ಗಾನ ನೃತ್ಯ ಅಕಾಡೆಮಿ ಹಾಗೂ ನೃತ್ಯಾಂಗನ್ ಸಂಸ್ಥೆಗಳ ಸಹ ಆಯೋಜನೆಯಲ್ಲಿ ‘ಪ್ರೇರಣಾ–ನೃತ್ಯ ಸರಣಿ’ ಕಾರ್ಯಕ್ರಮ ದಿನಾಂಕ 07-04-2023ರಂದು ಮಂಗಳೂರಿನ ಮಾಲೆಮಾರ್ ನ ಗಾನ-ನೃತ್ಯ ಅಕಾಡೆಮಿಯ ‘ಅಭ್ಯಾಸಾಂಗಣ’ದಲ್ಲಿ ನಡೆಯಿತು.
ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಅತಿ ಸಮೀಪದಿಂದ ನೃತ್ಯ ಕಾರ್ಯಕ್ರಮ ನೋಡುವ ಅವಕಾಶ ಹಾಗೂ ಉದಯೋನ್ಮುಖ ನೃತ್ಯ ಕಲಾವಿದರಿಗೆ ವೇದಿಕೆಯ ಅವಕಾಶಗಳನ್ನು ಕಲ್ಪಿಸಿ ಪ್ರೇರಣೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ಈ ‘ಪ್ರೇರಣಾ ನೃತ್ಯ ಸರಣಿ’.
ಬೆಂಗಳೂರಿನ ಖ್ಯಾತ ಕಲಾವಿದರಾದ ವಿ. ಪಾರ್ಶ್ವನಾಥ ಉಪಾಧ್ಯ, ವಿ. ಶ್ರುತಿ ಗೋಪಾಲ್ ಹಾಗೂ ವಿ. ಆದಿತ್ಯ ಪಿ.ವಿ. ಇವರ ವಿದ್ಯಾರ್ಥಿನಿ. ಕು. ವಿಭಾ ರಾಘವೇಂದ್ರ ಇವರು ಪ್ರೇರಣಾದ ಮೊದಲ ಕಾರ್ಯಕ್ರಮದ ಪ್ರಥಮ ಕಲಾವಿದೆ. ಈಕೆ ತನ್ನ ಚುರುಕಿನ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಕೇವಲ 12 ವರ್ಷದ ಈ ಪುಟ್ಟ ಬಾಲೆ ತುಳು ಭಾಷೆಯಲ್ಲಿ ಗಣಪತಿ ಸ್ತುತಿ “ಎಂಚಿತ್ತಿ ಮಗನ್”, ಶಿವ ಸ್ತುತಿ “ನಟನಂ ಆಡಿನಾರ್” ಹಾಗೂ ದೇವರ ನಾಮ “ಹನುಮಂತ ದೇವ ನಮೋ”ಗಳನ್ನು ಆಕರ್ಷಕ ಸಂಚಾರಿ ಭಾಗ ಹಾಗೂ ಕ್ಲಿಷ್ಟಕರ ನೃತ್ಯ ಭಾಗಗಳನ್ನು ಸುಲಲಿತವಾಗಿ ಪ್ರಸ್ತುತ ಪಡಿಸಿ ಮೆಚ್ಚುಗೆ ಪಡೆದರು.
ಎರಡನೇ ಕಲಾವಿದೆ, ಗಾನ-ನೃತ್ಯ ಅಕಾಡೆಮಿಯ ಗುರು ವಿದ್ಯಾಶ್ರೀ ರಾಧಕೃಷ್ಣ ಇವರ ಶಿಷ್ಯೆ ಕು. ಸಮಾನ್ವಿತಾ ಹಂದೆ ತನ್ನ ವಯಸ್ಸಿಗೆ ಮೀರಿದ ಪ್ರೌಢಿಮೆಯ ಕಲಾಗಾರಿಕೆಯೊಂದಿಗೆ ಭೇಷ್ ಎನಣಿಸಿಕೊಂಡವರು. “ಸಿದ್ದಿ ವಿನಾಯಕಂ” ಗಣಪತಿ ಸ್ತುತಿಯಿಂದ ಆರಂಭಿಸಿ, ಶ್ರೀ ರಾಮನ ಲೀಲೆಗಳನ್ನು ಬಿಂಬಿಸುವ “ಅಭಂಗ್”ನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಿದರು. ತಾಟಕೀ ಸಂಹಾರ, ಅಹಲ್ಯಾ ಶಾಪ ವಿಮೋಚನೆ, ಸೀತಾ ಸ್ವಯಂವರದ ದ್ಯಶ್ಯಗಳನ್ನು ಕಲಾವಿದೆ ಮನ ಮುಟ್ಟುವಂತೆ ರಂಗದಲ್ಲಿ ಪ್ರಸ್ತುತ ಪಡಿಸಿದರು. “ಗುಮ್ಮನ ಕರೆಯದಿರೆ” ದೇವರ ನಾಮದ ಮೂಲಕ ಕೃಷ್ಣನ ಮುಗ್ಧ ಮಾತುಗಳನ್ನೂ ದೈವತ್ವವನ್ನೂ ಆಕರ್ಷಕವಾಗಿ ಬಿಂಬಿಸಿದರು.
ಕೊನೆಯ ಕಲಾವಿದೆ ನ್ಯವ್ಯ ಮೈತ್ರಿ ಕೊಂಡ ಅಮೇರಿಕಾ ನಿವಾಸಿಯಾಗಿದ್ದರೂ ಭಾರತೀಯತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾವ ಪರವಶತೆಯಿಂದ, ಆದರ-ಭಕ್ತಿಯಿಂದ ಪ್ರದರ್ಶಿಸಿದ ನೃತ್ಯಗಳು ಎಲ್ಲರೂ ತಲೆದೂಗುವಂತೆ ಮಾಡಿತು. ಖ್ಯಾತ ಯುವ ಕಲಾವಿದೆ, ಚೆನ್ನೈಯ ಶ್ವೇತಾ ಪ್ರಚಂಡೆಯವರ ಶಿಷ್ಯೆ ನವ್ಯಾ ಕ್ಲಿಷ್ಟಕರ ಅಲರಿಪುವಿನಿಂದ ಕಾರ್ಯಕ್ರಮ ಆರಂಭಿಸಿ, ಸಾಂಪ್ರದಾಯಿಕ ನೃತ್ಯ ಬಂಧ ಆನಂದ ಭೈರವಿಯ ಪದವರ್ಣವನ್ನು ಭಾವಪೂರ್ಣವಾಗಿ ಬಿಂಬಿಸಿದರು. ನೃತ್ಯ ಭಾಗದಲ್ಲಿ ತಮಗಿದ್ದ ಪ್ರೌಢಿಮೆ, ತಾಳ-ಲಯಗಳ ಹಿಡಿತ, ರೇಖೆ-ಭಂಗಿಗಳಲ್ಲಿದ್ದ ಪುಷ್ಟತೆ, ಅಭಿನಯದಲ್ಲಿದ್ದ ತಲ್ಲೀನತೆ ಅವರ ಸಾಧನೆಯೆಂಬ ತಪಸ್ಸಿಗೆ ನಿದರ್ಶನವಾಗಿತ್ತು. ಕೊನೆಯಲ್ಲಿ ಅಭಿಸಾರಿಕಾ ನಾಯಿಕೆಯನ್ನು ಬಿಂಬಿಸುವ ಪದಂ ‘ಚೂಡರೇ’ ಹಾಸ್ಯ-ಶೃಂಗಾರ ರಸಗಳಿಂದ ತುಂಬಿ ನೋಡುಗರಿಗೆ ಉಲ್ಲಾಸ ತಂದಿತು.
ಒಟ್ಟಿನಲ್ಲಿ ಮೂರೂ ಕಲಾವಿದೆಯರು ತಮ್ಮ ತಮ್ಮ ನೆಲೆಗಳಲ್ಲಿ ಪ್ರೌಢಿಮೆ ಕಾರ್ಯಕ್ರಮ ನೀಡುವ ಮೂಲಕ ‘ಪ್ರೇರಣಾ’ದ ಪ್ರಥಮ ಸರಣಿಯನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಉದ್ಘಾಟಕಿಯಾಗಿ ಆಗಮಿಸಿದ್ದ ಮಂಗಳೂರಿನ ಹೆಸರಾಂತ ಕಲಾವಿದೆ ಗುರು ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್, ಆಯೋಜಕರನ್ನೂ, ಕಲಾವಿದೆಯನ್ನೂ ಶ್ಲಾಘಿಸಿದರು. ಗಾನ-ನೃತ್ಯ ಅಕಾಡೆಮಿಯ ನಿರ್ದೇಶಕರಾದ ವಿದ್ಯಾಶ್ರೀ ರಾಧಕೃಷ್ಣ ಹಾಗೂ ರಾಧಕೃಷ್ಣ ಭಟ್ ಮತ್ತು ನೃತ್ಯಾಂಗನ್ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು.