ಉಡುಪಿ : ತಾಳ್ತಜೆ ಕೇಶವ ಭಟ್ಟರ ಹೆಸರಿನಲ್ಲಿ ನೀಡುವ ಕೇಶವ ಪ್ರಶಸ್ತಿ ಹಾಗೂ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ ದಿನಾಂಕ 31 ಆಗಸ್ಟ್ 2024ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಪ್ರಾರ್ಥನೆಯಿಂದ ಆರಂಭವಾದ ಈ ಸಮಾರಂಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ತಾಳ್ತಜೆ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತರ ಡಾ. ಯು. ಮಹೇಶ್ವರಿ ಹಾಗೂ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಇವರಿಗೆ ಕ್ರಮವಾಗಿ ‘ಕೇಶವ ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಡಾ. ಯು. ಮಹೇಶ್ವರಿಯವರ ಕುರಿತು ಶಂಕರನಾರಾಯಣ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಉದಯಕುಮಾರ್ ಶೆಟ್ಟಿ ಹಾಗೂ ಶೈಲೇಶ್ ಕುಮಾರ್ ಶಿವಕುಮಾರ್ ಇವರ ಕುರಿತು ಹಾಗೂ ಅವರ ಕವನ ಸಂಕಲನದ ಕುರಿತು ಆರ್.ಆರ್.ಸಿ.ಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್. ಅಭಿನಂದನಾಪೂರ್ವಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸಾಯನ್ಸ್ ಇದರ ನಿರ್ದೇಶಕ ಡಾ. ವರದೇಶ್ ಹಿರೇಗಂಗೆಯವರು ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರ ‘ಅನುವಾದವೆಂಬೋ ಸಂಬಂಧ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ “ಸಾಹಿತ್ಯ ಕ್ಷೇತ್ರದಲ್ಲಿ ಇಂಗ್ಲೀಷ್ ಭಾಷೆ ಪ್ರಭುತ್ವ ಸಾಧಿಸಿದೆ. ಪ್ರಾದೇಶಿಕ ಭಾಷೆಯಲ್ಲಿ ಸಾಹಿತ್ಯದ ಕೃಷಿ ಸಾಧ್ಯವಾಗಬೇಕು. ಇದರಿಂದ ಜ್ಞಾನದ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ” ಎಂದರು.
ಈ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸಕರಾದ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರು ‘ಕನ್ನಡ ಕಾವ್ಯಗಳಲ್ಲಿ ಕಾವ್ಯ ಚಿಂತನ’ ಎಂಬ ವಿಷಯದ ಕುರಿತು ಮಾತನಾಡಿ “ಭಾರತೀಯ ಕಾವ್ಯ ಮೀಮಾಂಸೆಯು ಸಂಸ್ಕೃತಕ್ಕೆ ಸೀಮಿತವಾಗಿರುವುದರಿಂದ ಕನ್ನಡ ಕಾವ್ಯ ಮೀಮಾಂಸೆಯನ್ನು ರೂಪಿಸಬೇಕೆಂಬ ಚಿಂತನೆಗಳೂ ನಡೆದಿದ್ದವು. ಆದಿಕವಿ ಪಂಪನು ಮಾರ್ಗ ಮತ್ತು ದೇಶಿಯನ್ನು ಸಮನ್ವಯಗೊಳಿಸಿ ಕಾವ್ಯ ರಚಿಸಿದ್ದಾನೆ. ಹೀಗಾಗಿ ಅವನು ಕನ್ನಡದ ಮಾರ್ಗ ಪ್ರವರ್ತಕನೆನಿಸಿಕೊಂಡಿದ್ದಾನೆ” ಎಂದರು.
ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಂದಿಸಿದರು. ವೈಕುಂಠ ಬಾಳಿಗಾ ಲಾ ಕಾಲೇಜಿನ ವಿದ್ಯಾರ್ಥಿ ಗಣೇಶ್ ಕಲ್ಯಾ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಪ್ರೊ. ವರದೇಶ್ ಹಿರೇಗಂಗೆಯವರನ್ನು ಕೇಂದ್ರದ ಪರವಾಗಿ ಸಮ್ಮಾನಿಸಲಾಯಿತು.