ಉಳ್ಳಾಲ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ತುಳು ಹಾಡುಗಳ ಕಲಿಕಾ ಕಾರ್ಯಾಗಾರ, ಹಾಡುಗಳ ಪ್ರಸ್ತುತಿ ‘ಡೆನ್ನ ಡೆನ್ನಾನ – ಪದ ಪನ್ಕನ’ ಕಾರ್ಯಕ್ರಮವು ದಿನಾಂಕ 22 ಆಗಸ್ಟ್ 2025ರಂದು ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಕಾಡೆಮಿ ಕಚೇರಿಯಲ್ಲಿ ‘ತುಳು ಓದುಗ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಕಾಡೆಮಿಯಲ್ಲಿ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ, ವಿವಿಧ ಸಾಹಿತ್ಯ ಪ್ರಕಾರಗಳು ಸಹಿತ ಸುಮಾರು 5 ಸಾವಿರ ತುಳು ಗ್ರಂಥಗಳ ಭಂಡಾರವಿದೆ. ಇಲ್ಲಿಗೆ ತುಳು ಓದಲು ಬರುವ ವಿದ್ಯಾರ್ಥಿಗಳಿಗೆ ಲಘು ಉಪಹಾರ, ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶಾಲಾ-ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಕಾಡೆಮಿಗೆ ಕಳುಹಿಸಿ ಕೊಡುವುದರ ಮೂಲಕ ತುಳು ಉಳಿಸುವ ಅಭಿಯಾನಕ್ಕೆ ಕೈಜೋಡಿಸಬೇಕಿದೆ” ಎಂದರು.
ಈ ಕಾರ್ಯಕ್ರಮವನ್ನು ಸಿನಿಮಾ, ನಾಟಕ ಕಲಾವಿದೆ ರೂಪಶ್ರೀ ವರ್ಕಾಡಿ ಉದ್ಘಾಟಿಸಿದರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಮತ್ತು ಗಾಯಕಿ ವಾಣಿ ಸಪ್ರೆ ಸಂಪನ್ಮೂಲ ಕಲಾವಿದರಾಗಿದ್ದರು. ದಿನೇಶ್ ಅತ್ತಾವರ ನಿರ್ದೇಶನದ ‘ಜಾಗ್ ರ್ತೆ..!?’ ತುಳು ನಾಟಕ ಪ್ರದರ್ಶನ ನಡೆಯಿತು. ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ, ಕೊಲ್ಯ ಶಾರದಾ ಸೇವಾ ಟ್ರಸ್ಟಿನ ಅಧ್ಯಕ್ಷ ಮೋಹನ್ ಶೆಟ್ಟಿ, ಕುಸುಮಾಕರ ಕುಂಪಲ, ಮುಖ್ಯೋಪಾಧ್ಯಾಯ ಗುರುಮೂರ್ತಿ ಪಿ. ಇವರುಗಳು ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಸ್ವಾಗತಿಸಿ, ಶ್ರೀನಿವಾಸ್ ಶೆಣೈ ವಂದಿಸಿ, ಗಣೇಶ್ ಕೆ. ನಿರೂಪಿಸಿದರು.