ಬೆಂಗಳೂರು : ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮ ಮತ್ತು ವಿವಿಧ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮವು ದಿನಾಂಕ 17 ಸೆಪ್ಟಂಬರ್ 2025ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಕಾರಣರಾದವರು. ಅವರ ಕೊಡುಗೆ ಕರ್ನಾಟಕಕ್ಕೆ ಮಾತ್ರವಲ್ಲದೆ ವಿಶ್ವಕ್ಕೇ ಸಂದಿದೆ. ಕನ್ನಡದ ಅಸ್ಮಿತೆಯನ್ನು ವಿಶ್ವಕ್ಕೇ ತೋರಿಸಿಕೊಟ್ಟರು” ಎಂದು ಪ್ರಶಂಸಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಬಗಳಲ್ಲೊಬ್ಬರಾದ ಸರ್.ಎಂ.ವಿಶ್ವೇಶ್ವರಯ್ಯನವರು ಇಡೀ ದೇಶದ ಬೆಳವಣಿಗೆಗೆ ನೀಲಿನಕ್ಷೆಯನ್ನು ಹಾಕಿದವರು ಎಂದು ವಿಶ್ಲೇಷಿಸಿದ ನಾಡೋಜ ಡಾ.ಮಹೇಶ ಜೋಶಿಯವರು ಬೆಂಗಳೂರಿನ ನಾವು ಪ್ರತಿ ಲೋಟ ನೀರು ಕುಡಿಯುವ ಮುನ್ನ ಅವರನ್ನು ಸ್ಮರಿಸಿಕೊಳ್ಳಬೇಕು. ಶಿಸ್ತು ಮತ್ತು ಪ್ರಾಮಾಣಿಕತೆಗೆ ಒಂದು ರೂಪಕದಂತಿದ್ದ ಅವರು ತಮ್ಮ ಜೀವಿತ ಕಾಲದಲ್ಲಿಯೇ ದಂತಕತೆಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಶ್ರದ್ಧೆಯಿಂದ ಸ್ಮರಿಸಿ ಕೊಳ್ಳುತ್ತಾ ಅವರು ಹಾಕಿ ಕೊಟ್ಟ ದಾರಿಯಲ್ಲಿ ಮುಂದೆ ಸಾಗಲಿದೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ದತ್ತಿ ಪುರಸ್ಕಾರಗಳನ್ನು ಇಟ್ಟವರ ಭಾವನೆಗಳು ಮುಖ್ಯ ಅದಕ್ಕೆ ಚ್ಯುತಿ ಬಾರದಂತೆ ಅರ್ಹರಿಗೆ ಪುರಸ್ಕಾರಗಳು ಸಲ್ಲುವಂತೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಯತ್ನಿಸುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತ್ಯ ದೇವಾಲಯ ಎಂದು ವರ್ಣಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀಯವರು ನಾನು ಅದರ ಆರಾಧಕ ಮತ್ತು ಕಿಂಕರ ಎಂದು ತಮ್ಮನ್ನು ಕರೆದುಕೊಂಡರು. ಸರ್ ಎಂ. ವಿಶ್ವೇಶ್ವರಯ್ಯನವನರನ್ನು ತಾವು ಕಂಡ ಘಟನೆಗಳನ್ನು ಸ್ಮರಿಸಿಕೊಂಡ ಅವರು, ಸರ್ ಎಂ.ವಿ.ಯವರ ಆತ್ಮಕತೆ ಬಂದಾಗ ಅವರ ಭಾವಚಿತ್ರ ಬಳಸಲು ಡಿ.ವಿ.ಜಿ. ಪ್ರಯತ್ನಿಸಿದಾಗ ಮನುಷ್ಯ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು, ಆಗುಂತಕವಾಗಿ ಬಂದ ಖ್ಯಾತಿಯ ಮೇಲಲ್ಲ ಎಂದು ಅವರ ಆಡಿದ ಮಾತನ್ನು ಸ್ಮರಿಸಿಕೊಂಡು ಇದು ನಮಗೆಲ್ಲರಿಗೂ ಮಾದರಿ ಎಂದು ವರ್ಣಿಸಿ ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವನ್ನು ನಾವು ಅನುಭವಿಸುತ್ತಿದ್ದೇವೆ” ಎಂದು ಸ್ಮರಿಸಿಕೊಂಡರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ವಕೀಲರಾದ ರವಿಯವರು ಮಾತನಾಡಿ ಕರ್ನಾಟಕಕ್ಕೆ ಬಹು ತೊಡಕಾಗಿದ್ದ ಕಾವೇರಿ ನದಿ ವಿವಾದವನ್ನು ಸರ್ ಎಂ. ವಿಶ್ವೇಶ್ವಟರಯ್ಯನವರು ಜಾಣ್ಮೆಯಿಂದ ಬಗೆ ಹರಿಸಿದರು. ಅದಕ್ಕಾಗಿ ಈ ನಾಡು ಅವರಿಗೆ ಸದಾ ಋಣಿಯಾಗಿರಬೇಕು ಎಂದರು. ಸರ್ ಎಂ. ವಿಶ್ವೇಶ್ವರಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಚಿಂತಕ ಮಂಡಗದ್ದೆ ಶ್ರೀನಿವಾಸಯ್ಯನವರು ವಿಶ್ವೇಶ್ವರಯ್ಯನವರ ಬದುಕಿನ ಪ್ರಮುಖ ಘಟನೆಗಳನ್ನು ಸ್ಮರಿಸಿಕೊಂಡು ಅವರನ್ನು ದೈವಿಕ ಪುರುಷರು ಎಂದು ವರ್ಣಿಸಿದರು.
ದತ್ತಿ ದಾನಿಗಳ ಪರವಾಗಿ ಡಾ. ಪಿ.ಎನ್. ಉದಯಚಂದ್ರ ಮತ್ತು ಪ್ರಸನ್ನ ಕರ್ಪೂರ್ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸರಾದ ಡಾ. ಬಿ.ಎಸ್. ಪ್ರಣತಾರ್ತಿಹರನ್ ಇವರಿಗೂ, ಶ್ರೀಮತಿ ಮನೋಹರಿ ಪಾರ್ಥಸಾರಥಿ ‘ಮನುಶ್ರೀ’ ದತ್ತಿ ಪುರಸ್ಕಾರವನ್ನು ಎಲ್. ಗಿರಿಜಾ ರಾವ್ ಇವರಿಗೂ ದಿ. ಟಿ. ಶ್ರೀನಿವಾಸ ಸ್ಮರಣಾರ್ಥ ಶ್ರೀ ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪುರಸ್ಕಾರವನ್ನು ಸಂಪಟೂರು ವಿಶ್ವನಾಥ್ ಮತ್ತು ಡಾ. ಶ್ರೀವತ್ಸ ಎಸ್. ವಟಿಯವರಿಗೂ, ರಾಜಸಭಾ ಭೂಷಣ ಶ್ರೀ ಕರ್ಪೂರ ಶ್ರೀನಿವಾಸರಾವ್ ದತ್ತಿ ಪುರಸ್ಕಾರವನ್ನು ವೇದಾ ಸಿ. ಬಿರಾದರ್ ಇವರಿಗೂ ಮತ್ತು ಕರ್ಪೂರ ರಾಮರಾವ್ ಜನ್ಮ ಶತಾಬ್ಧಿ ದತ್ತಿ ಪುರಸ್ಕಾರವನ್ನು ನೇತ್ರಾವತಿ ಜಿ. ಇವರಿಗೂ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ ಇನ್ನೊಬ್ಬ ಗೌರವ ಕಾರ್ಯದರ್ಶಿಗಳಾದ ಎಚ್.ಬಿ. ಮದನಗೌಡ ಸ್ವಾಗತವನ್ನು ಮತ್ತು ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ್ ಕುಮಾರ್ ವಂದನಾರ್ಪಣೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.