20 ಮಾರ್ಚ್ 2023, ಧಾರವಾಡ: ಕಲ್ಯಾಣನಗರದ ಶರಣ ಲಿಟರೇಚರ್ ಪಬ್ಲಿಶರ್ಸ್ ಹಾಗೂ ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಲೇಖಕ ಡಾ. ಎನ್.ಜಿ.ಮಹಾದೇವಪ್ಪನವರ “ಪ್ರೈಮರ್ ಆಫ್ ಲಿಂಗಾಯತಿಸಂ” ಪ್ರಸ್ತಕ ಬಿಡುಗಡೆ ಸಮಾರಂಭ ದಿನಾಂಕ 14-03-2023ರಂದು ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಅತ್ಯಂತ ಸರಳವಾಗಿ, ಖಚಿತವಾಗಿ ಮತ್ತು ಸಮಗ್ರವಾಗಿ ಲಿಂಗಾಯತ ಧರ್ಮದ ತತ್ವವನ್ನು ಸಾರುವ ಸಂದೇಶಗಳನ್ನು ‘ಪ್ರೈಮರ್ ಆಫ್ ಲಿಂಗಾಯತಿಸಂ’ ಕೃತಿಯು ಒಳಗೊಂಡಿದೆ. ಇದು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಪ್ರತಿವಾದಿಸುವ ಅಧಿಕೃತವಾದ ಆಧಾರ ಗ್ರಂಥವಾಗಿದೆ ಎಂದರು.
“ಡಾ. ಎನ್.ಜಿ.ಮಹಾದೇವಪ್ಪನವರು ಆರಂಭದಲ್ಲಿ ಬರೆದ “ಲಿಂಗಾಯತರು ಹಿಂದುಗಳಲ್ಲ” ಎಂಬ ಕೃತಿಯು ಅಂದಿನ ಸಮಾಜದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿತು. ಅಲ್ಲಿಯವರೆಗೂ ಲಿಂಗಾಯತರು ಮತ್ತು ವೀರಶೈವರು ಒಂದೇ ಎನ್ನುವ ತಪ್ಪು ಗ್ರಹಿಕೆಯನ್ನು ಬದಲಿಸುವ ಹೊಸ ಆಲೋಚನಾ ಕ್ರಮವನ್ನೇ ಹುಟ್ಟುಹಾಕಿತು. ಅತ್ಯಲ್ಪ ಅವಧಿಯಲ್ಲಿಯೇ ಆ ಕೃತಿಯು ಹಿಂದಿ, ಮರಾಠಿ, ತಲುಗು ಭಾಷೆಗಳಿಗೂ ಅನುವಾದಗೊಂಡು ರಾಷ್ಟ್ರದಾದ್ಯಂತ ಪ್ರಚಾರ ಪಡೆಯುವಂತಾಯಿತು. ಅವರು ಕನ್ನಡದಲ್ಲಿ ಬರೆದ ಬಿಡಿ ಲೇಖನಗಳ ಸಾರವನ್ನು ಹೊಸ ಅಧ್ಯಯನ ಕ್ರಮಕ್ಕೆ ಅನ್ವಯಿಸಿಕೊಂಡು ಇ೦ಗ್ಲಿಷ್ ಭಾಷೆಯಲ್ಲಿ ಬರೆದ ಅತ್ಯಂತ ಮೌಲಿಕ ಕೃತಿಯಾಗಿದೆ” ಎಂದು ಹೇಳಿದರು.
ಪುಸ್ತಕವನ್ನು ಪರಿಚಯಿಸಿದ ಕ.ವಿ.ವಿ. ಗಾಂಧಿ ಅಧ್ಯಯನ ವಿಶ್ರಾಂತ ಪ್ರಾಧ್ಯಾಪಕ ಡಾ. ಶಿವಾನಂದ ಶೆಟ್ಟರ ಮಾತನಾಡಿ, “ಲಿಂಗಾಯತ ಧರ್ಮವನ್ನು ಹೊಸ ತಲೆಮಾರಿಗೆ ತಿಳಿಸುವ ಮಾದರಿ ಕೃತಿಯಾಗಿದೆ. ಹದಿಮೂರು ಅಧ್ಯಾಯಗಳಲ್ಲಿ ರಚನೆಗೊಂಡ ಈ ಕೃತಿಯು ಸಂಶೋಧನೆ ಮತ್ತು ವಿದ್ವತ್ತನ್ನು ಒಳಗೊಂಡು ನಮ್ಮ ನಂತರದ ತಲೆಮಾರಿಗೆ ಮಾದರಿಯಾಗಬಲ್ಲ ಕೃತಿಯಾಗಿದೆ. ಕೃತಿಯ ಆರಂಭದಲ್ಲಿ ಲಿಂಗಾಯತ ಧರ್ಮವು ಹಿಂದೂ ಮತ್ತು ವೀರಶೈವ ಧರ್ಮಗಳಿಗಿಂತಲೂ ಹೇಗೆ ಭಿನ್ನವಾಗಿದ್ದು ಸ್ವತಂತ್ರ ಧರ್ಮವಾಗಿದೆ ಎಂಬುದನ್ನು ಅನೇಕ ದಾಖಲೆಗಳ ಮೂಲಕ ವಿವರಿಸಿದ್ದಾರೆ” ಎಂದರು.
ಕೃತಿಯ ಲೇಖಕ ಡಾ. ಎನ್.ಜಿ. ಮಹಾದೇವಪ್ಪ ಮಾತನಾಡಿ, “ಲಿಂಗಾಯತ ಧರ್ಮದ ಕುರಿತು ನಾನು ಬರೆದ ಈ ಕೃತಿಯು ಕನ್ನಡ ಬಾರದಿರುವ ವಿದೇಶಗಳಲ್ಲಿ ವಾಸಿಸುತ್ತಿರುವ ಅನೇಕ ಓದುಗರಿಗೆ ಸಹಾಯವಾಗಲಿದೆ” ಎಂದು ಹೇಳಿದರು.
ಪ್ರೊ. ಜಿ.ಬಿ. ಹಳ್ಯಾಳ ಪಾಸ್ತಾವಿಕ ಮಾತುಗಳನ್ನಾಡಿದರು. ಪ್ರಕಾಶ ಹನಗಂಡಿ ಪ್ರಾರ್ಥಿಸಿ, ಪ್ರೊ. ಶಶಿಧರ ತೋಡಕರ ಸ್ವಾಗತಿಸಿ, ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ. ಕೆ.ಆರ್. ದುರ್ಗಾದಾಸ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಮಲ್ಲಿಕಾರ್ಜುನ ಪಾಟೀಲ, ಡಾ. ಸಿ.ಎಂ. ಕುಂದಗೋಳ, ಡಾ. ಕುಮಾರ ಹಿರೇಮಠ, ಹಿರೇಮಲ್ಲೂರ ಈಶ್ವರನ್ ಕಾಲೇಜು ಹಾಗೂ ಶ್ರೀ ಸಿದ್ದರಾಮೇಶ್ವರ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.