ಕಾಸರಗೋಡು : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಗ್ರಾಮದ ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ನಡೆಸಿದ ಸ್ವಾತಂತ್ರ್ಯೋತ್ಸವ-2024ರ ಕಾಸರಗೋಡು ಜಿಲ್ಲಾ ಪ್ರೌಢಶಾಲಾ ಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ವಿತರಿಸಲಾಯಿತು. ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಇವರು ವಿಜೇತರಿಗೆ ಬಹುಮಾನ ವಿತರಿಸಿದರು.
ಸಭೆಯಲ್ಲಿ ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಹಾಸನದ ಸ್ಪಂದನ ಸಿರಿ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಜಿ.ಎಸ್. ಕಲಾವತಿ ಮಧುಸೂದನ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಶಿಕ್ಷಕಿ ಕೆ.ಟಿ. ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಪ್ರೋ. ಶ್ರೀನಾಥ, ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ಕೆ. ವಾಮನ್ ರಾವ್ ಬೇಕಲ್, ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಸಾಹಿತಿ ಪ್ರಶಾಂತ ರಾಜ ವಿ. ತಂತ್ರಿ ಇವರುಗಳು ಉಪಸ್ಥಿತರಿದ್ದರು.
ಈ ಕವನ ರಚನಾ ಸ್ಪರ್ಧೆಯಲ್ಲಿ ಮುಳ್ಳೇರಿಯದ ಜಿ.ವಿ.ಎಚ್.ಎಸ್. ಶಾಲೆಯ ಸಿಂಚನ ಎ. ಮುಳ್ಳೇರಿಯ ಪ್ರಥಮ ಸ್ಥಾನ, ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದ ಕವನ ದ್ವಿತೀಯ ಸ್ಥಾನ, ಕಾರಡ್ಕ ಜಿ.ವಿ.ಎಚ್.ಎಸ್. ಶಾಲೆಯ ಕೀರ್ತನ ಕೆ. ತೃತೀಯ ಹಾಗೂ ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯ ಕೆ. ಕವನ ಪ್ರೋತ್ಸಾಹಕ ಬಹುಮಾನ ಪಡೆದಿದ್ದರು.