ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವತಿಯಿಂದ ಆಶಾ ಮತ್ತು ಅಶೋಕ್ ಕುತ್ಯಾರು ಪ್ರಾಯೋಜಿತ ಪ್ರೊ. ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 21 ಜೂನ್ 2025 ರಂದು ಉಡುಪಿಯ ಟಿ.ಮೋಹನದಾಸ ಪೈ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ “ಯಕ್ಷಗಾನ, ಭೂತಕೋಲ ಸೇರಿದಂತೆ ಉಡುಪಿ ಪ್ರದೇಶದ ಜಾನಪದ ಕಲಾ ಪ್ರಕಾರಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರು ಪ್ರೊ. ಕು. ಶಿ. ಹರಿದಾಸ ಭಟ್. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಪುಸ್ತಕ ಪ್ರಕಟಿಸುವುದು ಸವಾಲಿನ ಕೆಲಸ. ಆದರೂ ಹರಿದಾಸ ಭಟ್ ಅವರ ‘ಲೋಕಾಭಿರಾಮ’ ಕೃತಿಯ ಆರು ಸಂಪುಟಗಳನ್ನು ಸಮಗ್ರ ಕೃತಿಯಾಗಿ ಪ್ರಕಟಿಸಬೇಕು. ಗೋವಿಂದ ಪೈ ಸಂಶೋಧನ ಕೇಂದ್ರ ಅದಕ್ಕೆ ಮುಂದಾಗಬೇಕು. ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಕೆಲಸ ಮಾಡಿದ್ದರೂ ಹರಿದಾಸ ಭಟ್ ಅವರ ಅರ್ಹತೆಗೆ ಅನುಗುಣವಾಗಿ ಅವರನ್ನು ಗುರುತಿಸುವ ಕೆಲಸ ನಡೆದಿಲ್ಲ. ಅವರ ವ್ಯಕ್ತಿತ್ವವನ್ನು ಹೆಚ್ಚು ಹೆಚ್ಚು ಅರ್ಥೈಸಿಕೊಳ್ಳುವ ಕೆಲಸವಾಗಬೇಕು. ಸರ್ವಾಧಿಕಾರದ ವಿರುದ್ದ ನಡೆದ ಹೋರಾಟದ ಕಥನಗಳಿದ್ದ ಕೃತಿಗಳನ್ನೇ ಆಯ್ಕೆ ಮಾಡಿ ಹರಿದಾಸ ಭಟ್ ಅವರು ಅನುವಾದಿಸಿ ಕನ್ನಡದ ಓದುಗರಿಗೆ ನೀಡಿದ್ದಾರೆ. ಇಂದು ಯಾವ ಜಗತ್ತು ಶಾಂತಿಯ ಕಡೆಗೆ ಚಲಿಸಬೇಕಿತ್ತೋ ಅದು ಅಶಾಂತಿಯ ಕಡೆಗೆ ಚಲಿಸುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಸಂಘರ್ಷ ನಡೆದಿತ್ತು. ಈ ಎಲ್ಲಾ ಬೆಳವಣಿಗೆಗಳು ಹರಿದಾಸ ಭಟ್ ಅವರ ಕೃತಿಗಳನ್ನು ನೆನಪಿಸುತ್ತಿವೆ. ಜಾನಪದ ಪಳೆಯುಳಿಕೆ ಮಾತ್ರವಲ್ಲ, ಅದಕ್ಕೆ ಹೊಸ ಮುಖವೂ ಇದೆ ಎಂದು ತೋರಿಸಿಕೊಟ್ಟವರು ವಿಜಯಶ್ರೀ ಸಬರದ. ಅದೇ ರೀತಿ ಜಾನಪದ ಕ್ಷೇತ್ರಕ್ಕೆ ಡಿ. ಕೆ. ರಾಜೇಂದ್ರ ಅವರ ಕೊಡುಗೆಯೂ ಅಪಾರ. ಈ ಇಬ್ಬರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ” ಎಂದರು.
ಡಿ. ಕೆ.ರಾಜೇಂದ್ರ ಮತ್ತು ಸಾಹಿತಿ ವಿಜಯಶ್ರೀ ಸಬರದ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ, ಎಂ. ಜಿ. ಎಂ. ಕಾಲೇಜು ಇದರ ಪ್ರಾಂಶುಪಾಲೆಯಾದ ವನಿತಾ ಮಯ್ಯ, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಲೋಲಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ತುಂಗ ನಿರೂಪಿಸಿದರು.

