ಕಾರ್ಕಳ : ಕಾರ್ಕಳ ಸಾಹಿತ್ಯ ಸಂಘದ ವತಿಯಿಂದ ಪ್ರೊ. ಎಂ. ರಾಮಚಂದ್ರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 05-06-2024ರಂದು ಹೊಟೇಲ್ ಪ್ರಕಾಶ್ ನಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಭಾಗವಹಿಸಿದ ಧಾರವಾಡದ ಹಿರಿಯ ಸಾಹಿತಿ ಡಾ. ರಾಘವೇಂದ್ರ ಪಾಟೀಲ ಇವರು ಮಾತನಾಡಿ “ಸಾಹಿತ್ಯ ಮತ್ತು ಸಂಗೀತ ಮಾನವನನ್ನು ಆರೋಗ್ಯವಾಗಿಡುವ ಸಾಧನ. ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಮನಸ್ಸು ಮತ್ತು ಪರಿಸರ ಸುಸ್ಥಿತಿಯಲ್ಲಿದ್ದರೆ, ನಮ್ಮ ಆಚೆಗಿನ ಪರಿಸರ ಕೂಡಾ ಚೆನ್ನಾಗಿರಲು ಸಾಧ್ಯವಾಗುತ್ತದೆ. ಪ್ರಸ್ತುತ ಆಧುನಿಕತೆಯ ಪರಿಣಾಮ, ವೈಯಕ್ತಿಕರಣದ ಕೆಲಸವಾಗುತ್ತಿದೆ. ಒಂದು ಸಮುದಾಯವಾಗಿ ಉಳಿಯುವ ಬದಲು, ಬಿಡಿ-ಬಿಡಿ ವ್ಯಕ್ತಿಗಳಾಗಿ ಒಟ್ಟಿಗೆ ಇದ್ದೇವೆ. ಸ್ವಾರ್ಥ ಎನ್ನುವುದು ಅತ್ಯಂತ ಪ್ರಖರವಾಗಿ ಹೊರಹೊಮ್ಮುತ್ತಿದೆ. ನಿಸ್ವಾರ್ಥದ ಪರಿಧಿ ಎಷ್ಟು ಸಂಕುಚಿತವಾಗಿದೆ ಎಂದರೆ, ನನ್ನದು ನನಗೆ ಎಂಬ ರೀತಿಯಲ್ಲಿದೆ. ಇವೆಲ್ಲವುಗಳ ನಡುವೆ ಆರೋಗ್ಯವಾಗಿರಲು ಸಾಹಿತ್ಯ ಮತ್ತು ಸಂಗೀತ ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಪ್ರೊ. ರಾಮಚಂದ್ರ ಅವರ ಸಂಸ್ಮರಣೆ ಬಗ್ಗೆ ಮಾತನಾಡಿ, “ಅವರು ಯುವ ಮನಸುಗಳನ್ನು ಸಿದ್ದಪಡಿಸುವ ಕೆಲಸ ನಿರ್ವಹಿಸಿದ್ದರು. ಕೇವಲ ಒಬ್ಬ ಪ್ರಾಧ್ಯಾಪಕನಾಗದೆ, ವೃತ್ತಿಯ ಜತೆಜತೆಯಾಗಿ ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಕಾರ್ಯ ಮಾಡಿದ್ದರು. ಅವರ ಮನಸ್ಸು ಪರಂಪರೆಗೆ ಹೆಚ್ಚು ಒತ್ತು ನೀಡಿತ್ತು. ಭುವನೇಂದ್ರ ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ವೇಳೆ, ಸಾಹಿತ್ಯ ಸಮ್ಮೇಳನ, ಸರ್ವಧರ್ಮ ಸಮ್ಮೇಳಗಳನ್ನು ಆಯೋಜಿಸಿ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಎಲ್ಲರನ್ನು ಪ್ರೀತಿಸುವ ಕೆಲಸ ಮಾಡಿದ್ದರು. ನಿವೃತ್ತಿಯ ಬಳಿಕ 1997ರಿಂದ ಕಾರ್ಕಳ ಸಾಹಿತ್ಯ ಸಂಘದ ಮೂಲಕ ನಿರಂತರ ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಹೆಸರಿನಲ್ಲಿ ಪ್ರತಿವರ್ಷ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದು ಸಾಹಿತಿ ಡಾ. ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.
ಇದೇ ಸಂದರ್ಭ ‘ಪ್ರೊ. ಎಂ. ರಾಮಚಂದ್ರ ಪ್ರಶಸ್ತಿ’ಯನ್ನು ಸುಧಾ ಆಡುಕಳ ಉಡುಪಿ ಇವರಿಗೆ ಪ್ರದಾನ ಮಾಡಲಾಯಿತು. ಕಾರ್ಕಳದ ವಿಶ್ರಾಂತ ಪ್ರಾಚಾರ್ಯ ಎಸ್. ಗೋವಿಂದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ರಮಾ ಸುಧೀಂದ್ರ ಕಾರ್ಕಳ ಅವರಿಂದ ‘ಭಾವಗಾನ’ ನಡೆಯಿತು. ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್, ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ, ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ, ಪ್ರೊ. ಎಂ. ರಾಮಚಂದ್ರ ಪ್ರಶಸ್ತಿ ಸಮಿತಿ ಅಧ್ಯಕ್ಷ ರಾಜೇಶ್ ರೆಂಜಾಳ ಮತ್ತು ದಿ. ರಾಮಚಂದ್ರ ಅವರ ಪುತ್ರ ಕೃಷ್ಣರಾಜ್ ಉಪಸ್ಥಿತರಿದ್ದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.