ವಿದ್ಯಾಗಿರಿ : ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ವಿಭಾಗ ಹಾಗೂ ಗ್ರಂಥಾಲಯದ ಸಹಯೋಗದಲ್ಲಿ ‘ಪ್ರೊ. ನಾಗರಾಜ ಜವಳಿ ಅವರ ಗ್ರಂಥಗಳ ಸ್ವೀಕಾರ ಸಮಾರಂಭ’ವು ದಿನಾಂಕ 24-04-2024ರಂದು ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ “ನಮಗೆ ಸಮಯವಿಲ್ಲ ಎಂಬ ನೆಪ ಹೇಳದೆ ಓದಬೇಕು. ಓದುವ ಜೊತೆ ಇತರರು ಓದುವಂತೆ ಮಾಡಬೇಕು. ಪುಸ್ತಕಗಳು ಕೇವಲ ಅಲಂಕಾರಕ್ಕೆ ಇಡಲು ಅಲ್ಲ, ಅದು ಅಧ್ಯಯನಕ್ಕೆ. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಇಳಿಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಓದಿಸುವ ನಿಟ್ಟಿನಲ್ಲಿ ಗಮನ ಸೆಳೆಯುವ ಚಟುವಟಿಕೆಯನ್ನು ಮಾಡಬೇಕು. ನಾಗರಾಜ ಜವಳಿ ಅವರು ಸಂಗ್ರಹ ಮಾಡಿದ ಪುಸ್ತಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವುದೇ ವಿಚಾರದ ಪುಸ್ತಕವಾದರೂ, ಕಾಪಾಡುವುದು ಮುಖ್ಯ. ತುಳುನಾಡಿನಲ್ಲಿ 11 ವರ್ಷಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಅರ್ಥಪೂರ್ಣಗೊಳಿಸಿದ್ದರಲ್ಲಿ ಜವಳಿ ಹಾಗೂ ಅವರ ಸ್ನೇಹಿತರ ‘ದಾಸಜನ’ ಕೂಟ ಮುಖ್ಯ ಪಾತ್ರ ವಹಿಸಿದೆ” ಎಂದರು.
ಪ್ರೊ. ನಾಗರಾಜ ಜವಳಿ ಅವರ ಪುತ್ರ ಅರ್ಜುನ ಜವಳಿ ಮಾತನಾಡಿ, “ಪುಸ್ತಕಗಳು ಕಪಾಟಿನಲ್ಲೇ ಉಳಿದು ವ್ಯರ್ಥವಾಗಬಾರದು. ಹೆಚ್ಚಿನ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಿಗಬೇಕು ಎಂಬ ಕಾರಣಕ್ಕೆ ಆಳ್ವಾಸ್ ಕಾಲೇಜಿಗೆ ಕೊಡುಗೆ ನೀಡಲಾಗಿದೆ. ಓದುವ ಮೂಲಕ ಎಲ್ಲರೂ ಈ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದರು.
ರಂಗಕರ್ಮಿ, ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಮಾತನಾಡಿ, “ಓದಿನಿಂದಲೇ ನಮ್ಮ ಅನುಭವ ವಿಸ್ತಾರವಾಗುತ್ತದೆ. ಕೇವಲ ನೋಡುವುದರಿಂದ ಹೆಚ್ಚಿನ ಅನುಭವ ಪ್ರಾಪ್ತಿಯಾಗುವುದಿಲ್ಲ. ಹೆಚ್ಚಿನ ಓದು ಉನ್ನತ ಸ್ಥಾನಕ್ಕೆ ತಲುಪಿಸುತ್ತದೆ. ಓದಿದ ಪುಸ್ತಕವೇ ನಮ್ಮನ್ನು ಶಾಶ್ವತವಾಗಿ ಜೀವನದಲ್ಲಿ ಎದ್ದು ನಿಲ್ಲುವಂತೆ ಮಾಡುತ್ತದೆ. ಜವಳಿಯವರಲ್ಲಿ ಅಡಗಿದ್ದ ವಿದ್ಯೆಯನ್ನು ಅರ್ಜಿಸುವ ಬಯಕೆ ನಮ್ಮ ಸ್ನೇಹತ್ವವನ್ನು ಗಟ್ಟಿಗೊಳಿಸಿತ್ತು. ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ಹೆಚ್ಚು ಆಸ್ಥೆ ಹೊಂದಿದ್ದ ಅವರು ಸಮಕಾಲೀನ ಜ್ಞಾನವನ್ನು ತನ್ನಲ್ಲಿ ತುಂಬಿಕೊಂಡ ಒಂಟಿ ಸಲಗವಾಗಿದ್ದರು” ಎಂದು ತಿಳಿಸಿದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ, ಮಂಗಳೂರಿನ ಆರ್. ನರಸಿಂಹ ಮೂರ್ತಿ ಮಾತನಾಡಿ, “ಬೋಧನಾ ವೃತ್ತಿಯಲ್ಲಿ ಇರುವವರು ತಮ್ಮ ಸ್ವಂತಕ್ಕಾಗಿ ಗ್ರಂಥಾಲಯವನ್ನು ನಿರ್ಮಾಣ ಮಾಡಬೇಕು. ಪುಸ್ತಕ ಸರ್ವರಿಗೂ ಓದಲು ಸಿಗುವಂತಾಗಬೇಕು” ಎಂದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಮಂಗಳೂರಿನ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿ, “ಜವಳಿಯವರ ಸರಳ ವ್ಯಕ್ತಿತ್ವದವರು ಮತ್ತು ಅವರು ನಿವೃತ್ತಿ ನಂತರದ ದಿನಗಳಲ್ಲೂ ತಾನು ಪುಸ್ತಕ ಓದಿ, ಇತರರನ್ನು ಓದುವಂತೆ ಹುರಿದುಂಬಿಸುತ್ತಿದ್ದರು.” ಎನ್ನುತ್ತಾ ಜವಳಿ ಅವರ ಕೊಡುಗೆ ಹಾಗೂ ದಾಸಜನ ಕೂಟದ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಪ್ರೊ. ನಾಗರಾಜ ಜವಳಿ ಅವರ ಪುತ್ರ ಅರ್ಜುನ ಜವಳಿಯವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಆಳ್ವಾಸ್ ಕಾಲೇಜಿನ ಗ್ರಂಥ ಪಾಲಕಿ ಶ್ಯಾಮಲತಾ ಸ್ವಾಗತಿಸಿ, ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಹರೀಶ್ ಟಿ.ಜಿ. ವಂದಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಾಗರಾಜ ಜವಳಿ ಅವರು ಆಳ್ವಾಸ್ ಕಾಲೇಜಿಗೆ ಕೊಡುಗೆಯಾಗಿ ನೀಡಿದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಅನಾವರಣ ಮಾಡಲಾಯಿತು.