ಬೆಂಗಳೂರು : ಕನ್ನಡ ಸಾರಸ್ವತ ಲೋಕದ ವಿಮರ್ಶಕ ಎಂದು ಗುರುತಿಸಿಕೊಂಡ ವಿಶ್ರಾಂತ ಪ್ರಾಧ್ಯಾಪಕ 88 ವರ್ಷದ ಹಿರಿಯ ಸಾಹಿತಿ, ವಿದ್ವಾಂಸ ಪ್ರೊ. ಜಿ.ಎಚ್. ನಾಯಕ ಅವರು ದಿನಾಂಕ 26-05-2023ರಂದು ನಮ್ಮನ್ನು ಅಗಲಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಜಿ.ಎಚ್. ನಾಯಕ ಎಂದೇ ಚಿರಪರಿಚಿತರಾಗಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು 1935 ಸೆಪ್ಟೆಂಬರ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಅಂಕೋಲೆಯಲ್ಲಿ ತನ್ನ ಬಾಲ್ಯವನ್ನು ಕಳೆದ ಅವರಲ್ಲಿ ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯದ ಕಿಚ್ಚು ಹತ್ತಿಕೊಂಡಿತ್ತು. ಪರಿಣಾಮವಾಗಿ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದ ಪ್ರೊ. ನಾಯಕರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಅವರು ನಾಡಿನಾದ್ಯಂತ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದು ತಮ್ಮ ನೇರ ನುಡಿಯಿಂದಲೇ ಪ್ರಖ್ಯಾತರಾಗಿದ್ದರು. ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಅನೇಕ ವಿದ್ವತ್ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದರು.
ಪ್ರೊ. ಜಿ. ಎಚ್. ನಾಯಕರು ಸಮಕಾಲೀನ, ಅನಿವಾರ್ಯ, ನಿರಪೇಕ್ಷ, ನಿಜದನಿ, ವಿನಯ ವಿಮರ್ಶೆ, ಹರಿಶ್ಚಂದ್ರ ಕಾವ್ಯ, ಗುಣಗೌರವ, ಕೃತಿಸಾಕ್ಷಿ, ಸ್ಥಿತಿಪ್ರಜ್ಞ, ಮತ್ತೆ ಮತ್ತೆ ಪಂಪ, ಸಾಹಿತ್ಯ ಸಮೀಕ್ಷೆ ಮುಂತಾದ ಪ್ರಮುಖವಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದು ಮಾತ್ರವಲ್ಲದೇ ಸಂವೇದನೆ, ಕನ್ನಡ ಸಣ್ಣಕತೆಗಳು, ಹೊಸಗನ್ನಡ ಕವಿತೆ, ಶತಮಾನದ ಕನ್ನಡ ಸಾಹಿತ್ಯ ಕೃತಿಗಳನ್ನು ಸಂಪಾದಿಸಿ ಕನ್ನಡಿಗರ ಕೈಗೆ ನೀಡಿದ್ದರು. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉತ್ತಮ ಪ್ರೌಢಿಮೆ ಹೊಂದಿದ್ದು ವಿಮರ್ಶೆಗೆ ವಿನಯವಂತಿಕೆಯ ಹೊಸ ದಿಕ್ಕನ್ನು ತೋರಿಸಿಕೊಟ್ಟ ಹಿರಿಯ ಚೇತನ ಪ್ರೊ. ನಾಯಕರ ಅಗಲುವಿಕೆ ಕನ್ನಡ ನಾಡು ನುಡಿಗೆ ಭರಿಸಲಾಗದ ನಷ್ಟ.