ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇದರ ವತಿಯಿಂದ ದಿನಾಂಕ 24-12-2023 ಹಾಗೂ 25-12-2023ರಂದು ಉಡುಪಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಹಮ್ಮಿಕೊಳ್ಳಲಿರುವ ಎರಡು ದಿನಗಳ ಶಾಸ್ತ್ರೀಯ ನೃತ್ಯ ಕಲಾವಿದರ ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರಾವಳಿಯ ಮೂಲದ ನೃತ್ಯ ವಿದ್ವಾಂಸ ನಾಟ್ಯಾಚಾರ್ಯ ಪ್ರೊಫೆಸರ್ ಕೆ.ರಾಮಮೂರ್ತಿ ರಾವ್ ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಯಿತು.
ಪ್ರೊ.ಕೆ.ರಾಮಮೂರ್ತಿಯವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು ನೂಪುರ ಎಂಬ ನೃತ್ಯ ಸಂಸ್ಥೆಯ ಮೂಲಕ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಒರ್ವ ಕಲಾವಿದರಾಗಿ, ಗುರುವಾಗಿ, ನೃತ್ಯ ನಿರ್ದೇಶಕರಾಗಿ, ಕಲಾ ವಿಮರ್ಶಕರಾಗಿ ಮತ್ತು ಬರಹಗಾರರಾಗಿ ನೃತ್ಯಕ್ಷೇತ್ರದಲ್ಲಿ ಅವರದ್ದು ವೈವಿಧ್ಯಮಯ ವ್ಯಕ್ತಿತ್ವ. ನಾಟ್ಯಾಚಾರ್ಯ ದಿ.ವಿಷ್ಣುದಾದಾಸ್ ಇವರಲ್ಲಿ ನೃತ್ಯಭ್ಯಾಸ ಮೈಸೂರಿನ ಆಸ್ಥಾನ ವಿದ್ವಾನ್ ಎಸ್.ಎನ್.ಮರಿಯಪ್ಪ ಮತ್ತು ಲಕ್ಷ್ಮೀಪತಿ ಭಾಗವತರಿಂದ ಸಂಗೀತಭ್ಯಾಸ ಮಾಡಿರುವರು. ನಟುವಾಂಗದಲ್ಲಿ. ವಿಶೇಷ ಪರಿಣತಿ ಹೊಂದಿರುವ ಇವರು ಭರತನಾಟ್ಯದ ಜೂನಿಯರ್ ಸೀನಿಯರ್ ವಿದ್ವತ್ ಈ ಎಲ್ಲಾ ಪರೀಕ್ಷೆಗಳಲ್ಲೂ ರಾಂಕ್ ವಿಜೇತರು. ನೃತ್ಯಕ್ಕೆ ಸಂಬಂಧಿಸಿದ ನೂರಾರು ಲೇಖನಗಳನ್ನು ಪ್ರಕಟಿಸಿರುವ ಇವರು ವಿಶೇಷವಾಗಿ ಇವರ ಸಂಪಾದಕತ್ವದ ‘ನೃತ್ಯ ದರ್ಪಣಂ ಎಂಬ ಪುಸ್ತಕವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಕಟಿಸಿರುತ್ತದೆ. ಅಲ್ಲದೆ ‘ನಾಟ್ಯ ಶಾಸ್ತ್ರ ಮಂಜರಿ’ ಎಂಬ ಪುಸ್ತಕವು ಅಕಾಡೆಮಿಯಿಂದ ವಿಶೇಷ ಬಹುಮಾನ ಪಡೆದಿರುತ್ತದೆ. ಅಕಾಡೆಮಿಯ ಪುರಸ್ಕಾರ ಅಲ್ಲದೆ ನಾಡಿನ ಹಲವಾರು ಸಂಘ-ಸಂಸ್ಥೆಗಳಿಂದ ಇವರು ಗೌರವಿಸಲ್ಪಟ್ಟಿರುತ್ತಾರೆ.