ಮಂಗಳೂರು: ಸಂಗೀತ, ನೃತ್ಯ, ತಾಳವಾದ್ಯ ಸಂಸ್ಥೆಗಳು ಹಾಗೂ ಶಿಕ್ಷಕರ ಜತೆ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ನಡೆಸಿದ ಸಂವಾದ ಕಾರ್ಯಕ್ರಮವು ದಿನಾಂಕ 15-07-2023ರಂದು ಮಂಗಳೂರಿನ ಹಂಪನಕಟ್ಟೆ ವಿವಿ ಕಾಲೇಜು ಸಭಾಂಗಣದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯನ್ನು ಈ ಬಾರಿ ಹಿಂದಿನಂತೆಯೇ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಸುವಂತೆ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಪದಾಧಿಕಾರಿಗಳು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ನಾಗೇಶ್ ಬೆಟ್ಟಕೋಟೆಯವರನ್ನು ವಿನಂತಿಸಿದ್ದಾರೆ.
ಕರ್ನಾಟಕ ಸೆಕೆಂಡರಿ ಎಜುಕೇಶನ್ ಬೋರ್ಡ್ ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳನ್ನು ನಡೆಸುತ್ತಿತ್ತು. ಈ ವರ್ಷದಿಂದ ಈ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಡಾ.ಗಂಗೂಬಾಯಿ ಹಾನಗಲ್ ವಿವಿಗೆ ಸರ್ಕಾರ ವಹಿಸಿದೆ.ಈ ಹಿನ್ನೆಲೆಯಲ್ಲಿ ಈ ಬಾರಿಯ ಪರೀಕ್ಷೆಯನ್ನು ಸುಗಮ ಹಾಗೂ ಸುಸೂತ್ರವಾಗಿ ನಡೆಸುವ ಸಲುವಾಗಿ ಕಲಾ ಸಂಸ್ಥೆ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ವರ್ಷ ಪರೀಕ್ಷೆಗಳು ಸೆಕೆಂಡರಿ ಎಜುಕೇಶನ್ ಬೋರ್ಡ್‌ನ ಪಠ್ಯಕ್ರಮದಲ್ಲೇ ನಡೆಯಲಿದೆ. ಮುಂದಿನ ವರ್ಷದಿಂದ ವಿವಿ ನಿಯಮಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ಸೀನಿಯರ್, ಜೂನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಪರೀಕ್ಷೆಗಳಿಗೆ ಅಳವಡಿಸಬೇಕಾಗುತ್ತದೆ. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ಪಠ್ಯಗಳ ಬದಲಾವಣೆ ಮಾಡಲಾಗುವುದು. ಇದು ವಿವಿ ನಡೆಸುವ ಪರೀಕ್ಷೆಯಾದ ಕಾರಣ ಇದಕ್ಕೆ ಎಲ್ಲ ಕಡೆಯೂ ಮಹತ್ವ ಇದೆ ಎಂದರು.
ಈ ಬಗ್ಗೆ ಉಳಿದ ವಿಭಾಗಗಳಲ್ಲೂ ಚರ್ಚೆ, ಸಂವಾದ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಪ್ರೊ.ನಾಗೇಶ್ ಬೆಟ್ಟಕೋಟೆ ಭರವಸೆ ನೀಡಿದರು.ನೃತ್ಯಕಲಾ ಪರಿಷತ್ ಅಧ್ಯಕ್ಷ ವಿದ್ವಾನ್ ಯು.ಕೆ.ಪ್ರವೀಣ್ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರಾದ ವಿದುಷಿ ರಾಜಶ್ರೀ ಉಳ್ಳಾಲ್ ಸ್ವಾಗತಿಸಿ, ವಿದ್ವಾನ್ ಚಂದ್ರಶೇಖರ ನಾವಡ ವಂದಿಸಿದರು.