ಬೆಳ್ತಂಗಡಿ : ಸಾಹಿತಿ ಹಾಗೂ ಉದಯವಾಣಿ ಪತ್ರಿಕೆಯ ಬೆಳ್ತಂಗಡಿ ತಾಲೂಕಿನ ಬಿಡಿ ವರದಿಗಾರರಾಗಿ 30 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಪ್ರೊ. ನಾ’ವುಜಿರೆ (ಪ್ರೊ. ಎನ್. ನಾಗರಾಜ ಪೂವಣಿ ) ಅಲ್ಪಕಾಲದ ಅನಾ ರೋಗ್ಯದಿಂದ ದಿನಾಂಕ 11-03-2024ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಅವರಿಗೆ 87ವರ್ಷ ವಯಸ್ಸಾಗಿತ್ತು.
ಉಜಿರೆಯ ವಿದ್ಯಾನಗರದಲ್ಲಿ ವಾಸವಾಗಿದ್ದ ಅವರು ಎಸ್. ಡಿ. ಎಂ. ಸ್ವಾಯತ್ತ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ನಾರಾವಿ ಗ್ರಾಮದ ಹೊಸಬೆಟ್ಟಿನಲ್ಲಿ 12-02-1938ರಂದು ಜನಿಸಿದ ಅವರು ಸಿದ್ಧವನ ಗುರುಕುಲದ ವಿದ್ಯಾರ್ಥಿಯಾಗಿ ಎಸೆಸೆಲ್ಸಿ ಉತ್ತೀರ್ಣರಾದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಕನ್ನಡ ಮತ್ತು ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಉಜಿರೆಯ ಪ್ರೌಢ ಶಾಲೆಯಲ್ಲಿ ಹಿಂದಿ ಪಂಡಿತರಾಗಿ ಬಳಿಕ ಎಸ್. ಡಿ. ಎಂ. ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದರು. ಬಳಿಕ ಮಂಜುವಾಣಿ ಮಾಸಪತ್ರಿಕೆಯ ಸಹ ಸಂಪಾದಕರಾಗಿದ್ದರಲ್ಲದೇ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸಾಹಿತಿಯಾಗಿ, ಕವಿಯಾಗಿ, ಕಥೆಗಾರರಾಗಿ, ಅನುವಾದಕರಾಗಿ ಪರಿಚಿತರಾಗಿದ್ದ ಅವರ 60ಕ್ಕೂ ಮಿಕ್ಕಿ ಕಥೆಗಳು, 80ಕ್ಕೂ ಅಧಿಕ ಕವಿತೆಗಳು ಹಾಗೂ ಪ್ರಬಂಧಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1999ರಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.
38 ವರ್ಷಗಳ ಕಾಲ ಉಪನ್ಯಾಸಕರಾಗಿದ್ದರಲ್ಲದೇ ಮಂಗಳೂರು ವಿಶ್ವ ವಿದ್ಯಾನಿಲಯದ ಹಿಂದಿ ಅಧ್ಯಯನ ಮಂಡಳಿ ಅಧ್ಯಕ್ಷರಾಗಿ, ಕರ್ನಾಟಕ ಪ್ರೌಢಶಾಲಾ ಹಿಂದಿ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಶಿಕ್ಷಣ ತಜ್ಞರೂ ಆಪ್ತ ಸಲಹೆಗಾರರೂ ಆಗಿ ಸಹೋದ್ಯೋಗಿಗಳೆಲ್ಲ ಖಾಸಗಿಯಾಗಿ ಪರೀಕ್ಷೆ ಬರೆದು ಪದವಿ, ಸ್ನಾತಕೋತ್ತರ ಪದವಿ ಪಡೆಯುವಂತೆ ಪ್ರೋತ್ಸಾಹ ನೀಡುತ್ತಿದ್ದರು. ಕನ್ನಡ, ತುಳು, ಹಿಂದಿ, ಸಂಸ್ಕೃತದಲ್ಲಿ ಪ್ರಭುತ್ವ ಹೊಂದಿದ್ದು, ಸ್ನೇಹ ಜೀವಿ ಹಾಗೂ ಉತ್ತಮ ವಾಗ್ಮಿಯಾಗಿದ್ದರು.
ಇವರ ಸಾಹಿತ್ಯ ಸೇವೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರತ್ನಾಕರವರ್ಣಿ ಪುರಸ್ಕಾರ, ಜಿನವಾಣಿ ಪುರಸ್ಕಾರ, ತುಳು ಸಾಹಿತ್ಯ ಅಕಾಡೆಮಿಯಿಂದ ‘ತುಳು ಮಹನೀಯರು’ ಪುರಸ್ಕಾರ, ಅಖಿಲ ಭಾರತ ಗೋಮಟೇಶ್ವರ ವಿದ್ಯಾಪೀಠ ಪುರಸ್ಕಾರ, ದ.ಕ. ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಹಲವು ಪುರಸ್ಕಾರಗಳು ಇವರ ಸಾಧನೆಗೆ ಸಂದ ಗೌರವಗಳಾಗಿವೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಮ್ಮ ಸಂತಾಪ ಸೂಚನೆಯಲ್ಲಿ “ನಾ’ವುಜಿರೆ ಅವರು ನಮ್ಮದೇ ಉಜಿರೆಯ ಶ್ರೀ ಸಿದ್ದವನ ಗುರುಕುಲ, ಎಸ್. ಡಿ. ಎಂ. ಸೆಕೆಂಡರಿ ಶಾಲೆ (ಅಂದಿನ ಫ್ರೀ ಡಿ. ಕೆ. ವಿ. ಪ್ರೌಢಶಾಲೆ), ಎಸ್. ಡಿ. ಎಂ. ಕಾಲೇಜು ಮೊದಲಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ನಮ್ಮ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದರು. ಸರಳ ವ್ಯಕ್ತಿತ್ವದ ಅವರು ಸಂಸ್ಥೆಗಳಲ್ಲಿ ದೊರಕಿದ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಂಡರು. ‘ಮಂಜುವಾಣಿ’ ಮಾಸ ಪತ್ರಿಕೆಯ ಪ್ರಕಾಶನ ಆರಂಭಿಸಿದಾಗಲೂ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.” ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.