ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಇತಿಹಾಸ ಪ್ರಾಧ್ಯಾಪಕ, ಲೇಖಕ ಹಾಗೂ ಹಿರಿಯ ಪತ್ರಕರ್ತರಾದ ಪ್ರೊ. ಪಿ. ಕೆ. ಮೊಯ್ಲಿ ದಿನಾಂಕ 21 ನವೆಂಬರ್ 2024ರಂದು ಸ್ವಗೃಹದಲ್ಲಿ ನಿಧನರಾದರು. ಆರು ಮಂದಿ ಪುತ್ರಿಯರು, ಅಳಿಯಂದಿರು ಹಾಗೂ ಅಪಾರ ಶಿಷ್ಯ ವೃಂದವನ್ನು ಶ್ರೀಯುತರು ಅಗಲಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಮೂಲತಃ ಪಣಂಬೂರಿನವರಾದ ಪ್ರೊ. ಪಿ. ಕೆ. ಮೊಯ್ಲಿ ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯ ಮೊದಲ ತಂಡದ ವಿದ್ಯಾರ್ಥಿಯಾಗಿದ್ದರು. ಜಿಲ್ಲಾ ಬೋರ್ಡ್ ಇದರ ಆಡಳಿತಕ್ಕೊಳಪಟ್ಟ ಮೂಡಬಿದ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿ ಮುಂದೆ ಮಂಗಳೂರಿನಲ್ಲಿ ಶಿಕ್ಷಕ ತರಬೇತಿ, ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯ ರಾಷ್ಟ್ರಭಾಷಾ ಪ್ರವೀಣ ಪದವಿ, ಬಿ. ಎ. ಪದವಿ ಪಡೆದರು.
ಪಂಜದಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆಗೆ ಸೇರಿ ಮುಂದೆ ಬೈಂದೂರು, ಮುಡಿಪು, ಕಾರ್ಕಳಗಳಲ್ಲಿ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬನಾರಾಸ್ ವಿಶ್ವವಿದ್ಯಾನಿಲಯದಿಂದ ಇತಿಹಾಸ ವಿಷಯದಲ್ಲಿ ಎಂ. ಎ. ಪದವಿಯನ್ನು ಪಡೆದು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದರು.
1967ರಲ್ಲಿ ಗೋವಿಂದ ದಾಸ ಕಾಲೇಜು ಆರಂಭಗೊಂಡಾಗ ಇತಿಹಾಸ ಪ್ರಾಧ್ಯಾಪಕರಾಗಿ ಸೇರಿ ಪದೋನ್ನತಿ ಹೊಂದಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಶ್ರೀ ನಾರಾಯಣ ಗುರು ಪ್ರೌಢ ಶಾಲೆ ಹಾಗೂ ಕಾರ್ಕಳದ ಶ್ರೀ ವೆಂಕಟ್ರಮಣ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಉತ್ತಮ ಸಾಹಿತಿಯಾಗಿದ್ದ ಇವರ ವಿವಿಧ ಕಥೆಗಳು ಹಾಗೂ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ಆಕಾಶವಾಣಿಯಲ್ಲಿ ಇವರ ತುಳು ಹಾಗೂ ಕನ್ನಡ ಚಿಂತನೆ ಹಾಗೂ ಭಾಷಣಗಳು ಪ್ರಸಾರಗೊಂಡಿವೆ.
ಸಂಗೀತ, ಯಕ್ಷಗಾನ ನಾಟ್ಯಗಳಲ್ಲಿ ಒಲವು ಇರಿಸಿಕೊಂಡ ಇವರು ಮೃದಂಗ ವಾದನ ಹಾಗೂ ಭಾಗವತಿಕೆ ಅಭ್ಯಾಸ ಮಾಡಿದ್ದರು. ಯಕ್ಷಗಾನ ತಾಳ ಮದ್ದಲೆಯಲ್ಲಿ ಸಹೃದಯ ಪ್ರೇಕ್ಷಕರಾಗಿ ಹಾಗೂ ವಿಮರ್ಶಕರಾಗಿ ಜನಪ್ರಿಯರಾಗಿದ್ದರು. ಅಪಾರ ಶಿಷ್ಯವೃಂದದ ಅಭಿಮಾನಕ್ಕೆ ಪಾತ್ರರಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳು ಇವರನ್ನು ಸಮ್ಮಾನಿಸಿದ್ದವು. ಗೋವಿಂದ ದಾಸ ಕಾಲೇಜಿನಲ್ಲಿ ಪಿ. ಕೆ. ಮೊಯ್ಲಿ ಅಭಿನಂದನಾ ಸಮಿತಿ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆದಿತ್ತು. ‘ಗುರುಭ್ಯೋ ನಮಃ’ ಅಭಿನಂದನಾ ಗ್ರಂಥವನ್ನು ಮೊಯ್ಲಿಯವರಿಗೆ ಅರ್ಪಿಸಲಾಗಿತ್ತು. ಅದರಲ್ಲಿ ಅವರ ಆತ್ಮಕತೆ ‘ಬಡವಂ ಬಲ್ಲಿದನಾಗನೇ’ ಪ್ರಕಟಗೊಂಡಿದೆ.
ಇವರ ನಿಧನಕ್ಕೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಹಾಗೂ ಆಡಳಿತ ಮಂಡಳಿ, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ, ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ, ರಕ್ಷಕ ಶಿಕ್ಷಕ ಸಂಘ, ಅಲ್ಯುಮ್ನಿ ಅಸೋಸಿಯೇಶನ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿಸಂಘಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಪ್ರಾಧ್ಯಾಪಕ, ಲೇಖಕ ಹಾಗೂ ಹಿರಿಯ ಪತ್ರಕರ್ತ ಪ್ರೊ. ಪಿ. ಕೆ. ಮೊಯ್ಲಿ ನಿಧನ
Previous Articleಎಂ. ಎನ್. ಮಧ್ಯಸ್ಥರಿಗೆ ‘ಸುವರ್ಣ ಪರ್ವ ಪುರಸ್ಕಾರ’ | ನವೆಂಬರ್ 23