Subscribe to Updates

    Get the latest creative news from FooBar about art, design and business.

    What's Hot

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ಸುಗಮ ಸಂಗೀತ’ ಕಾರ್ಯಕ್ರಮ | ಮೇ 25        

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾರ್ಯಕ್ರಮ ವಿಮರ್ಶೆ – ಕಾಸರಗೋಡಿನ ಕಥಾ ಕಮ್ಮಟ | ಕಥೆಯಾದ ಕಥಾ ಶಿಬಿರ – ಪ್ರೊl ಪಿ ಎನ್ ಮೂಡಿತ್ತಾಯ
    Literature

    ಕಾರ್ಯಕ್ರಮ ವಿಮರ್ಶೆ – ಕಾಸರಗೋಡಿನ ಕಥಾ ಕಮ್ಮಟ | ಕಥೆಯಾದ ಕಥಾ ಶಿಬಿರ – ಪ್ರೊl ಪಿ ಎನ್ ಮೂಡಿತ್ತಾಯ

    October 3, 2023No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಗರ ಗಾತ್ರದ ಪ್ರಾಚೀನ ಕಥಾಸಂಪತ್ತಿದ್ದೂ ಪಾಶ್ಚಾತ್ಯ ಸಣ್ಣಕತೆಗಳ ಪ್ರವಾಹದೆದುರು ನಾವು ಕಂಗಾಲಾದೆವು. ನಮ್ಮ ದೇಶದ ಸಾಹಿತ್ಯ ಹೊರಗಿನಿಂದ ಬಂದದ್ದೆಂದೂ ಅದು ನಡೆಯದ ನಾಣ್ಯವೆಂದೂ ಆಕ್ರಮಣಕಾರರು ಘೋಷಿಸಿದ್ದರು. ಅಷ್ಟೊಂದು ಮೋಡಿ ಮಾಡುವ ಶಕ್ತಿ ಪಾಶ್ಚಾತ್ಯ ಸಾಹಿತ್ಯಕ್ಕೆ ಸಿಕ್ಕಿದ್ದೂ ಸತ್ಯ. ಅದಕ್ಕೆ ಕಾರಣಗಳೂ ಇವೆ.
    ರಾಜಕೀಯ, ಶೈಕ್ಷಣಿಕ, ಸಾಮಾಜಿಕ ವಲಯಗಳಲ್ಲಿ ತಾವು ಆಕ್ರಮಿಸಿದ ದೇಶಗಳಲ್ಲಿ ಸುಧಾರಣೆಗಳನ್ನು ತರುವುದಕ್ಕೆ ಶ್ರಮಿಸಿದ ಬ್ರಿಟಿಷರು ನಮಗಿಂತ ಮೊದಲೇ ಯಂತ್ರಗಳ ಬಳಕೆಯನ್ನು ಆರಂಭಿಸಿದ್ದರು. ಮುದ್ರಣ ಯಂತ್ರಗಳ ಮೂಲಕ ಅವರು ಪತ್ರಿಕೆಗಳನ್ನು ಬಳಕೆಗೆ ತಂದರು. ಸಾರಿಗೆ ಸೌಕರ್ಯವನ್ನು ಅಭಿವೃದ್ಧಿಪಡಿಸಿಕೊಂಡು ನಮಗಿಂತ ಮೊದಲೇ ನಾಗರಿಕರೆನಿಸಿಕೊಂಡರು.
    ಬರೆದ ತಕ್ಷಣ ಸಾಹಿತ್ಯ ಕೃತಿಗಳನ್ನು ಓದುಗರಿಗೆ ತಲುಪಿಸುವುದಕ್ಕೆ ಸಾಧ್ಯವಾದಂದಿನಿಂದ ನಮ್ಮ ದೇಶದಲ್ಲೂ ಕಥಾ ರಚನೆಗೆ ವೇಗ ಸಿಕ್ಕಿತು. ಆಧುನಿಕ ಕಥಾ ಸಾಹಿತ್ಯಕ್ಕೂ ಚಾಲನೆ ದೊರಕಿತು. ಭಾರತೀಯ ಸಾಹಿತ್ಯಲೋಕದಲ್ಲಿ ಆಧುನಿಕ ಸಣ್ಣಕತೆ ದೇಶದಾದ್ಯಂತ ಚಿಗುರೊಡೆಯಿತು. ಸಾಹಿತ್ಯ ರಚನೆಗಳಲ್ಲಿ ರೈಲು, ಬಸ್ಸು, ಕಾರು, ಅಫೀಮು, ಕೋರ್ಟು ಕಛೇರಿ, ಬ್ಯಾಡ್ಮಿಂಟನ್, ಸೊಳ್ಳೆ ಬಲೆ, ಸಾಬೂನು, ಕ್ವಿನೀನು ಇದ್ದುವು. ಮುಕ್ತ ಪ್ರೇಮ ಕಾಮ ಸಂಪ್ರದಾಯವಾದಿಗಳನ್ನು ದಂಗುಬಡಿಸಿತು. ಇಂಥ ಕತೆಗಳ ಉಗಮ, ವಿಕಾಸ, ವೈವಿಧ್ಯಗಳ ಬಗ್ಗೆ ಸಂವಾದ ಮಾಡಲು ಎರಡು ದಿನಗಳು ಸಾಕೆ?
    ಕಾಸರಗೋಡು ಜಿಲ್ಲೆಯ ಉಪ್ಪಳಕ್ಕೆ ಸಮೀಪವಾಗಿರುವ ಬಾಯಿಕಟ್ಟೆಯ ಶ್ರೀ ಲಕ್ಷ್ಮೀ ಮಿಲ್ಸ್ ಸಭಾಂಗಣದಲ್ಲಿ ಬೆಂಗಳೂರಿನ ವೀರಲೋಕ ಪ್ರಕಾಶನ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಥಾ ಕಮ್ಮಟ ನಡೆಯಿತು. ಉದ್ಘಾಟಿಸಿ ಮಾತನಾಡಿದ ಡಾ.ಪ್ರಮೀಳಾ ಮಾಧವ್ ಅವರ ಮಾತುಗಳು ಗಮನಾರ್ಹವಾಗಿವೆ. “ಮಕ್ಕಳಿಂದ ಮುದುಕರು ಎಲ್ಲರೂ ಕಥೆಗಳನ್ನು ಇಷ್ಟಪಡುತ್ತಾರೆ. ಅದರ ರಚನೆಯ ಕುರಿತು ಮಾತು ಬಂದಾಗ ಹಲವು ಪ್ರಶ್ನೆಗಳು ಏಳುತ್ತವೆ. ಪ್ರಕೃತಿಯಲ್ಲಿ ಜೀವೋದ್ಭವವಾದಲ್ಲಿಂದ ಕಥೆಯೂ ಹೊರಟಿತು. ಕನ್ನಡದ ಕಥಾ ಗುಚ್ಛವೆಂದು ಸಾವಿರ ವರ್ಷಗಳ ಹಿಂದೆಯೇ ವಡ್ಡಾರಾಧನೆಯನ್ನು ಗುರುತಿಸುತ್ತೇವೆ. ಮಹಾ ಕಾವ್ಯಗಳ ಒಳಗೂ ಕಥೆಗಳೇ ತುಂಬಿವೆ. ರುದ್ರಭಟ್ಟ ‘ಕಥೆಯಂ ಕೇಳೆಲೆ ಕಂದ’ ಎನ್ನುತ್ತಾ ಕಾವ್ಯ ರಚನೆಗೆ ತೊಡಗುತ್ತಾನೆ .
    ಇವತ್ತಿನ ಕತೆಗೆ ಹೆಚ್ಚು ಕಡಿಮೆ ನೂರು ವರ್ಷವಾಯಿತಷ್ಟೆ. ‘ನನ್ನ ಚಿಕ್ಕ ತಾಯಿ’ , ‘ನನ್ನ ಚಿಕ್ಕ ತಂದೆ’ ಮುಂತಾದ ಕತೆಗಳಿಂದ ಪಂಜೆ ಮಂಗೇಶ ರಾಯರು ಮುನ್ನೆಲೆಗೆ ಬಂದ ಬೆನ್ನಲ್ಲೇ ಸಣ್ಣ ಕಥೆಗಳ ಜನಕ ಮಾಸ್ತಿಯವರೂ ತೊಡಗಿ ಇಂತಹ ರಚನೆಗಳು ಚಾಲ್ತಿಗೆ ಬಂದು ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಚಳುವಳಿಗಳ ಮೂಲಕ ವೇಗವನ್ನು ಪಡೆಯಿತು. ಅವರವರ ನಿಲುವು, ವೈಚಾರಿಕತೆಗಳು ಮುಖ್ಯವಾದುವು.
    ಸೃಜನ, ಸೃಜನೇತರ ಎಂಬ ಸ್ವಭಾವಗಳು ಸಾಹಿತ್ಯಕ್ಕಿವೆ. ಸಣ್ಣ ಕಥೆಗಳು ಸಮಾಜ ಸನ್ಮಾರ್ಗವನ್ನು ಹಿಡಿವಂತೆ ಮಾಡುವ ಇಚ್ಛೆ ಹೊಂದಿದ್ದುವು. ತಕ್ಷಣದ ಪ್ರತಿಕ್ರಿಯೆ ಎಂದಿಗೂ ತೃಪ್ತಿಯನ್ನು ಕೊಡಲಾರದು. ಪ್ರತಿಭೆ ಸ್ಫೂರ್ತಿಗಳ ಸಂಗಮವಾಗಿದ್ದರೆ ಕತೆ ಪರಿಣಮಿಸೀತು. ಈ ನಿಟ್ಟಿನಲ್ಲಿ ನಿಮ್ಮನ್ನು ಪ್ರಚೋದಿಸುವುದಕ್ಕೆ ಇಂತಹ ಶಿಬಿರ ಸಹಕಾರಿಯಾದೀತು.”

    ಸಂಪನ್ಮೂಲ ವ್ಯಕ್ತಿ ಡಾ.ಮೋಹನ ಕುಂಟಾರು :
    ಯಾಕೆ ಬರೆಯಬೇಕೆನ್ನುವುದಕ್ಕೆ ಉತ್ತರವಿಲ್ಲ. ಹೇಗೆ ಬರೆಯಬೇಕನ್ನುವುದಕ್ಕೆ ಉತ್ತರಗಳಿವೆ ಎಂದು ಮಾತಿಗೆ ಮೊದಲು ಮಾಡಿದ ಮೋಹನ ಕುಂಟಾರ್ ಅವರು ‘ಎಲ್ಲ ಚಟುವಟಿಕೆಗಳ ಉಗಮ ಸ್ಥಾನ ಮನಸ್ಸು’ ಎಂದು ಸೂಚಿಸುತ್ತಾ “ನೆನಪು ಸಂವೇದನೆಯ ಭಾಗವಾಗಿರಬೇಕು. ಸಮಾಜ- ಕುಟುಂಬಗಳೇ ಕತೆಗೆ ಪಠ್ಯ. ಬರೆಯಬೇಕೆಂಬ ಮನಃಸ್ಥಿತಿ ಇದ್ದರೆ ಮಾತ್ರ ತೊಡಗಬಹುದು. ಮಹಾಭಾರತದಿಂದ ತೊಡಗಿ ಕತೆಗಳೆಲ್ಲಾ ಕಟ್ಟು ಕಥೆಗಳೇ. ಆಮೇಲೆ ಅವುಗಳು ಜೀವನ ಸತ್ಯಗಳಾಗುತ್ತವೆ. ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಬರವಣಿಗೆ ಅಗತ್ಯ. ಕಾಲದ ನಿರ್ಬಂಧಗಳಿಲ್ಲದ ಘಟನೆಗಳಾಗಿ ಅವುಗಳು ಮರು ನಿರೂಪಣೆಗೊಳ್ಳುತ್ತವೆ. ತಂತ್ರಗಾರಿಕೆಯಲ್ಲಿ ಕತೆಯ ಜೀವ ಇರುತ್ತದೆ. ಜೊತೆಗೆ ಸ್ವಂತಿಕೆಯ ಪ್ರದರ್ಶನ ಸೇರುತ್ತದೆ. ದೃಶ್ಯಗಳನ್ನು ಕಟ್ಟಿಕೊಡುವಾಗ ಹೆಚ್ಚು ಮಾತುಗಳು ಬೇಕಿಲ್ಲ. ಮಾತುಗಳ ನಡುವಿನ ಮೌನಕ್ಕೂ ಮಹತ್ವವಿದೆ. ವಿಸ್ಮಯ ಜಗತ್ತೊಂದನ್ನು ಕಥೆಯ ಮೂಲಕ ಚಿತ್ರಿಸುವುದು ಸಾಧ್ಯ” ಎಂದು ವಿಶ್ಲೇಷಿಸುವುದರೊಂದಿಗೆ ಕತೆಗಾರನೊಬ್ಬನು ಹಂತ ಹಂತವಾಗಿ ರೂಪು ತಾಳುವ ರೀತಿಗಳನ್ನು ಪ್ರಸ್ತಾಪಿಸಿದರು.
    ತಮ್ಮ ಮಕ್ಕಳು ಕತೆಗಾರರಾಗಬೇಕೆಂದು ಯಾವ ಹೆತ್ತವರೂ ಬಯಸುವುದಿಲ್ಲವೆಂಬ ವಾಸ್ತವವನ್ನು ಮುಂದಿಟ್ಟ ಕುಂಟಾರ್ ಮಲೆಯಾಳದ ಮಹಾಸಾಹಿತಿ ಎಂ.ಟಿ ವಾಸುದೇವನ್ ನಾಯರ್ ಅವರ ಬಾಲ್ಯವನ್ನು ಉದಾಹರಿಸಿದರು. “ತನ್ನ ಶಾಲಾದಿನಗಳಲ್ಲಿ ಕತೆಗಾರನಾಗಬೇಕೆಂಬ ಅದಮ್ಯ ಹಂಬಲವಿತ್ತು. ಎಸ್ಸೆಸ್ಸೆಲ್ಸಿ ಕಳೆದು ಒಂದು ವರ್ಷ ಮನೆಯಲ್ಲಿ ಕೂತ ವೇಳೆಯಲ್ಲಿ ಬರೆದು ಕಳುಹಿಸಿದ್ದೆಲ್ಲ ಹಿಂದಕ್ಕೆ ಬರತೊಡಗಿತು. ಅದು ಯಾರಿಗೂ ತಿಳಿಯಬಾರದೆಂದು ಅಂಚೆ ಕಚೇರಿಗೆ ಅಂಚೆಕಟ್ಟು ತಲುಪುವ ವೇಳೆ ಹಾಜರಿರತೊಡಗಿದರು. ಹಿಂದೆ ಬರಲಿಲ್ಲವಾದರೆ ಪ್ರಕಟವಾದೀತೇ ಎಂಬ ಆಸೆ ಮೂಡುತ್ತಿತ್ತು. ಮಗನ ಪರಿಸ್ಥಿತಿಯನ್ನು ಸಹಿಸದಿದ್ದ ಅಪ್ಪ ಹಂಗಿಸಿದ್ದೂ ಆಯಿತು . ಒಂದು ದಿನ ಅವರು ಎರಡು ರೂಪಾಯಿ ಹಿಡಿದುಕೊಂಡು ರೈಲು ಹತ್ತಿ , ಟ್ಯುಟೋರಿಯಲ್ ಒಂದಕ್ಕೆ ಸೇರಿ … ”
    ಬರೆಯಬೇಕೆಂಬ ಅಪೇಕ್ಷೆ ನಮ್ಮಲ್ಲಿ ಇರಬೇಕು. ಕೆಲವರ ಬದುಕಿಗೆ ಅದೇ ಆಧಾರ. ಕತೆ ಹೇಳಲು, ಬರೆಯಲು ಮಾನಸಿಕ ಸಿದ್ಧತೆ ಬೇಕು. ಯಾವುದೋ ಸಂದರ್ಭದ ಅನುಭವಗಳು ಮಾತಿನ ಮೂಲಕ ಎಂದೋ ಹೊರಬರಬಹುದು ಎಂಬ ಕಿವಿಮಾತುಗಳ ಮೂಲಕ ಒಂದು ದಿನದ ತರಬೇತಿಯನ್ನು ನೀಡಿದರು.

    ಅಧ್ಯಕ್ಷರ ಮಾತುಗಳಲ್ಲಿ ಕಾಸರಗೋಡಿನ ಕಥಾಸಾಹಿತ್ಯ
    ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕವಿ , ಪತ್ರಕರ್ತ, ಅಂಕಣ ಲೇಖಕ ರಾಧಾಕೃಷ್ಣ ಉಳಿಯತ್ತಡ್ಕ ಅವರು ಕಾಸರಗೋಡಿನ ಶ್ರೀಮಂತ ಕಥಾಸಾಹಿತ್ಯದ ಪರಿಚಯವನ್ನು ಮಾಡಿಕೊಡುತ್ತ ಬೇಕಲ ರಾಮನಾಯಕರಿಂದ ತೊಡಗಿ ಇಲ್ಲಿ ಇತಿಹಾಸ, ಜನಪದ, ಸಮಕಾಲೀನತೆ , ಪುರಾಣಗಳು, ಸಿರಿಬಾಗಿಲು ವೆಂಕಪ್ಪಯ್ಯ, ಕಯ್ಯಾರರು , ಜೀ.ಶಂ.ಪೆರ್ಲ, ಕಳ್ಳಿಗೆ, ಕೆ.ವಿ.ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಅನುಪಮಾ ಪ್ರಸಾದ್ ಹೀಗೆ ನೂರಾರು ಕಥಾಸಾಹಿತಿಗಳ ದುಡಿಮೆಯಲ್ಲಿ ಬದುಕು ಮರುಸೃಷ್ಟಿಗೊಂಡ ಬಗೆಯನ್ನು ಸ್ಮರಿಸಿದರು .
    “ಕಥನ ಸಾಹಿತ್ಯಕ್ಕೆ ಸಂಬಂಧಿಸಿ ಇಲ್ಲಿ ಗಂಭೀರವಾದ ದುಡಿಮೆ ಸಂದಿದೆ. ಈಶ್ವರಯ್ಯ , ಕೆ.ಟಿ ಶ್ರೀಧರ್, ನಿತ್ಯಾನಂದ ಪಡ್ರೆ, ಪಿ.ಎನ್.ಮೂಡಿತ್ತಾಯರಂಥವರು ಕಾರ್ಯಾಗಾರ, ತರಬೇತಿಗಳ ಮೂಲಕ ಕಿರಿಯರಿಗೆ ಪ್ರೇರಣೆಯನ್ನು ನೀಡಿದರು. ಈ ಶಿಬಿರದ ಮೂಲಕ ಕಥೆ ಓದುವ, ಅವುಗಳನ್ನು ಆಸ್ವಾದಿಸಿ ಚರ್ಚಿಸುವ, ಚಿಂತಿಸಿ ಆಲೋಚನೆಗಳನ್ನು ಹಂಚುವ ಕೆಲಸ ನಡೆಯಬೇಕು. ಕೇರಳ ಲೈಬ್ರೆರಿ ಕೌನ್ಸಿಲಿನಂಥ ಟಿ.ವಿ ಗ್ರಂಥಾಲಯಗಳು ಈ ಬಗೆಯ ಕೆಲಸಗಳನ್ನು ನಡೆಸುವುದೂ ಮಾದರಿ ಆಗಬೇಕು” ಎಂದರು.

    ಚುರುಕಾದ ಶಿಬಿರಾರ್ಥಿಗಳು
    ಬೆಂಗಳೂರಿನ ವೀರಲೋಕ ಪ್ರಕಾಶನ ಕಾಸರಗೋಡು ಜಿಲ್ಲೆಯ 17 ರಿಂದ 40 ವರ್ಷ ವಯಸ್ಸಿನ ಆಸಕ್ತರಿಗಾಗಿ ಏರ್ಪಡಿಸಿದ್ದ ಈ ಶಿಬಿರಕ್ಕೆ ಬಹು ಸಂಖ್ಯೆಯಲ್ಲಿ ಆಗಮಿಸಿದ ಶಿಬಿರಾರ್ಥಿಗಳು ತಾವು ರಚಿಸಿದ್ದ ಸಣ್ಣಕತೆಗಳನ್ನು ಮಂಡಿಸಿದರು. ಬೆಂಗಳೂರಿನಿಂದ ಬಂದಿದ್ದ ಪ್ರಾಧ್ಯಾಪಕ ಡಾ .ಎಸ್.ಎಲ್ ಮಂಜುನಾಥ್ ಅವುಗಳ ವಿಮರ್ಶೆಯನ್ನು ಮಾಡಿ ಅಗತ್ಯದ ಸಲಹೆ ಸೂಚನೆಗಳನ್ನು ಕೊಟ್ಟದ್ದು ಪರಿಣಾಮಕಾರಿಯೆನಿಸಿತು. ಹಿಂದಿನ ದಿನ ತಾವು ರಚಿಸಿದ್ದ “ಉಪ್ಪಿಟ್ಟು” ಎಂಬ ಕಥೆಯನ್ನು ಪ್ರಸ್ತುತಪಡಿಸಿ, ಒಂದು ಪುಟ್ಟ ವಸ್ತು ಕಥಾ ಪ್ರಕಾರವಾಗಿ ಹೊಮ್ಮುವಲ್ಲಿ ಭಾಷೆಯ ಪಾತ್ರ ಮತ್ತು ಪರಿಣಾಮ ಬೀರುವ ಬಗೆಯನ್ನು ವಿವರಿಸಿದರು.
    ‘ಮಗ್ಗ’ ಮತ್ತು ‘ಆಮೆ’ ಎಂಬ ಎರಡು ಕಥಾಸಂಕಲನಗಳನ್ನು ಹೊರತಂದ ಸ್ನೇಹಲತಾ ದಿವಾಕರ್ ತಮ್ಮ ಅನುಭವ ಕಥನದ ಮೂಲಕ ಗಮನ ಸೆಳೆದರು. “ಕಣ್ಣಾರೆ ಕಂಡ ಶೋಷಣೆಯ ವಿರುದ್ಧ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ದೊರಕುವ ಹೊರದಾರಿ ಕಥಾರಚನೆ ಒಂದೇ. ಇದಕ್ಕೆ ಧೈರ್ಯ ಬೇಕು. ಕೆಲವು ದಶಕಗಳ ಕಾಲ ಕಾದು ಕೊನೆಗೂ ಕೆಲವು ಕತೆಗಳನ್ನು ಬರೆದ ಅನುಭವ ನನ್ನದು. ಕೆಟ್ಟ ನೆನಪುಗಳನ್ನು ನನ್ನಂತೆ ಹೆಚ್ಚು ಕಾಲ ಬಚ್ಚಿಟ್ಟುಕೊಂಡವರೆಷ್ಟು ಜನರಿದ್ದಾರೋ. ನನಗಂತೂ ಅನ್ಯಾಯಗಳ ವಿರುದ್ಧ ಹೇಳುವುದಕ್ಕೆ ತುಂಬ ಇದೆ. ಅದರಲ್ಲೂ ಹದಿಹರೆಯದ ಹೆಣ್ಣುಮಕ್ಕಳ ವಿರುದ್ಧ ನಡೆಯುವ ಅನ್ಯಾಯ ಅತಿಯಾದ ಸಂಕಟವನ್ನು ಉಂಟುಮಾಡುತ್ತದೆ” ಎಂದರು.
    ಹಿರಿಯ ಪ್ರಾಧ್ಯಾಪಕಿ ಹಾಗೂ ಸಂಶೋಧಕಿ ಡಾ.ಯು.ಮಹೇಶ್ವರಿ, ಲೇಖಕ ಮತ್ತು ವಿಮರ್ಶಕ ಡಾ.ಕಿಶೋರ್ ಕುಮಾರ್ ರೈ ಶೇಣಿ, ಕತೆಗಾರ ಸುಂದರ ಬಾರಡ್ಕ , ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಪದ್ಯಾಣ, ನಿವೃತ್ತ ಅಧ್ಯಾಪಕ ಶೀನ ಬಂಗೇರ ಅವರೊಂದಿಗೆ ಸಂವಾದ ನಡೆಯಿತು.

    ಶಿಬಿರಾರ್ಥಿಗಳು:
    ಕಮ್ಮಟವನ್ನು ಜೀವ ಸೆಲೆ ತುಂಬಿದ ಕಾರ್ಯಾಗಾರವಾಗುವಂತೆ ಮಾಡಿದ ಶಿಬಿರಾರ್ಥಿಗಳ ಪಾತ್ರ ಮಹತ್ವದ್ದು. ತುಳು ಕತೆಗಳನ್ನು ಬರೆಯುವ ತೇಜಶ್ರೀಯಿಂದ ತೊಡಗಿ ರಂಜಿತಾ, ಸ್ವಾತಿ, ಶ್ವೇತಾ, ಸೌಮ್ಯ, ಅನನ್ಯ ಬೇಕಲ, ಪಲ್ಲವಿ, ದೀಪ್ತಿ ಎಂ, ಶರಣ್ಯ, ನವ್ಯಶ್ರೀ, ಪ್ರಕೃತಿ, ವನಜಾಕ್ಷಿ ಚಂಬ್ರಕಾನ, ದೇವಿಕಾ, ನವ್ಯ, ಜ್ಯೋತಿರ್ಲಕ್ಷ್ಮಿ, ದಿಲ್ ದಾರ್ ಸುಲ್ತಾನ, ಗುರು ಪ್ರಸಾದ್, ಸುಮನ್ ಮಿಲಿಂದ್ ಮತ್ತಿತರರು ಬರೆದ ಕತೆ ಮತ್ತು ಪ್ರತಿಕ್ರಿಯೆಗಳು ಹೊಸ ಭಾವನೆ ಮತ್ತು ದೃಷ್ಟಿ ಕೋನಗಳನ್ನು ಒದಗಿಸಿದವು.

    ಡಾ.ಸುಭಾಷ್ ಪಟ್ಟಾಜೆ:
    ಸೃಜನಶೀಲತೆ ರೂಪ ತಳೆಯುವ ಬಗೆಯು ಅನನ್ಯವೂ ಅಸಾಧಾರಣವೂ ಆಗಿದೆ. ಅದು ಬರಹಗಾರರ ಗ್ರಹಣ ಶಕ್ತಿ, ಸಂವೇದನೆ, ಅಭಿವ್ಯಕ್ತಿ ಸಾಮರ್ಥ್ಯ, ಸಾಮಾಜಿಕ ಧೋರಣೆ ಮತ್ತು ಕಾಳಜಿಗಳನ್ನು ಅವಲಂಬಿಸಿದೆ. ಬದುಕಿನಿಂದ ಗ್ರಹಿಸಿದ ವಾಸ್ತವವನ್ನು ಬುದ್ಧಿಯ ಬಲದಿಂದ ತೂಗಿ, ಸಮರ್ಥ ಭಾಷೆ ಮತ್ತು ಕಲ್ಪನೆಗಳ ಮೂಲಕ ಪುನರ್ ಸೃಷ್ಟಿಸುವುದೇ ಸಾಹಿತ್ಯ ಎನ್ನುವ ಪಟ್ಟಾಜೆ ಈ ಕಾರ್ಯಾಗಾರದ ಹಿಂದಿದ್ದ ಶಕ್ತಿ. ಕಮ್ಮಟದ ನಿರ್ದೇಶಕರಾಗಿ ಅವರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸಿದ್ದರು. ಶಿಬಿರಾರ್ಥಿಗಳ ಕತೆಗಳಿಗೆ ವಿಮರ್ಶಾತ್ಮಕ ಚೌಕಟ್ಟು ನೀಡುವ ಮೂಲಕ ಅವರನ್ನು ಭರವಸೆಯ ಬರಹಗಾರರನ್ನಾಗಿ ಅರಳಿಸುವ ಪ್ರಾಮಾಣಿಕ ಶ್ರಮ ಎದ್ದು ಕಾಣುತ್ತಿತ್ತು. ಅವರ ನಿಷ್ಪಕ್ಷಪಾತ ನಡೆ ನುಡಿ ಅಭಿನಂದನೀಯ.

    ಮರೆಯಲಾಗದ ಕತೆ :
    ಸಹಯೋಗವನ್ನು ಒದಗಿಸಿದ ಜಿಲ್ಲಾ ಕನ್ನಡ ಲೇಖಕ ಸಂಘದ ಕಾರ್ಯಾಧ್ಯಕ್ಷ ಪಿ.ಎನ್ ಮೂಡಿತ್ತಾಯ ಸಮಾರೋಪ ಭಾಷಣವನ್ನು ಮಾಡಿದರು.

    ಮರೆಯಲಾಗದ ಕತೆಗಳ ಕತೆ ರೋಚಕವೆನಿಸಿತು .
    ಭಾರತೀಯ ಕಥಾಪರಂಪರೆ ವೇದ ಪುರಾಣ ಉಪನಿಷತ್ತುಗಳ ಮರುಸೃಷ್ಟಿ ಎಂಬ ವಾದವನ್ನು ಒಪ್ಪುವುದಾದರೆ ಈಗೇನು ನಡೆಯುತ್ತಿದೆ? ಪಂಪನ ಲೌಕಿಕ , ಜನ್ನನ ಮನೋವೈಜ್ಞಾನಿಕ ವಿಶ್ಲೇಷಣೆ, ರನ್ನನ ಸಿಂಹಾವಲೋಕನ, ನಾಗವರ್ಮನ ಫ್ಲಾಶ್ ಬ್ಯಾಕ್ ತಂತ್ರ, ಮುದ್ದಣನ ಸಮಕಾಲೀನ ನೋವುಗಳ ಅನಾವರಣಗಳ ತನಕದ ಸಾಹಸಗಳನ್ನಾದರೂ ಹಿಂದಿಕ್ಕುವ ಸಾಮರ್ಥ್ಯ ಇಂದಿನವರಿಗೆ ಏಕಿಲ್ಲ? ಕತೆಗಳಲ್ಲಿ ನೀತಿ ಮುಖ್ಯವಾಗಿತ್ತು ಅನ್ನುವವರು ಅನೈತಿಕ ನಡೆಯು ಹೊಸ ಸ್ವಾತಂತ್ರ್ಯ ಎಂದು ಬೀಗುವುದೇಕೆ? ಪುರಾಣಗಳು ಸುಳ್ಳಾಗಿದ್ದರೆ ಅವುಗಳಲ್ಲಿನ ಕೆಲವೇ ಪಾತ್ರಗಳು ನಿಜ ಎಂಬ ಪ್ರತಿಪಾದನೆ ಯಾಕೆ? ಇಂದಿನ ಕಥಾಸಾಹಿತ್ಯ ಹೆಮ್ಮೆ ತಾಳುವಂತಿದೆ ನಿಜ. ಅದೇ ವೇಳೆ ನಾಣ್ಯದ ಇನ್ನೊಂದು ಮುಖವನ್ನು ಮರೆಯದೆ ಇಂದಿನ ಕತೆಗಾರ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕಡಿಮೆ ಮಾತಿನಲ್ಲಿ ಸಾಹಿತ್ಯಸೃಷ್ಟಿಯಾಗುವುದು ಇಂದಿನ ಅನಿವಾರ್ಯತೆ. ಹಾಗೆಂದು ಕಲ್ಪನೆ, ಭಾವನೆಗಳು ಸಾಯಲೂಬಾರದು.


    ಪ್ರೊl ಪಿ ಎನ್ ಮೂಡಿತ್ತಾಯ
    ವಿಶ್ರಾಂತ. ಪ್ರಾಂಶುಪಾಲರು ಭೂತಪೂರ್ವ ಅಧ್ಯಕ್ಷ , ಪಿ ಜಿ , ರಿಸರ್ಚ್ ಸೆಂಟರ್ . ಸ. ಕಾಲೇಜು. , ಕಾಸರಗೋಡು
    ಶ್ರೀ ಲಕ್ಷ್ಮೀ, ಅಂಚೆ ಕಯ್ಯಾರು , ಉಪ್ಪಳ 671322 .

    ಪ್ರೊl ಪಿ ಎನ್ ಮೂಡಿತ್ತಾಯರು ಏಳು ವರ್ಷ ಆಕಾಶವಾಣಿ ಸಲಹೆಗಾರನಾಗಿಯೂ ಒಂದು ವರ್ಷ ತಲಚ್ಚೇರಿಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿರುವ ಇವರು ‘ದೇವರ ಕ್ಷಮೆ ಕೋರಿ’, ‘ಕಾರ್ಟೂನು ಬರೆಹಗಳು’, ‘ಮಿಸ್ಕಾಲು’ ಹೀಗೆ ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ‘ಗೋವು ಮತ್ತು ಸಾವಯವ ಬದುಕು’ ಹಾಗೂ ‘ಹಸಿರುವಾಣಿ’ ಎಂಬ ಎರಡು ಪ್ರಕೃತಿ ಪರಿಸರ ಕೃತಿಗಳನ್ನು ರಚಿಸಿದ್ದಾರೆ. ಗೋಪಕುಮಾರ್.ವಿ ಇವರ ಜೊತೆ ಸೇರಿ ಕಾರಂತರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸುಗಳು’ ಹಾಗೂ ‘ಒಡಿಯೂರಿಲೆ ಅವಧೂತನ್’ ಹೀಗೆ ಆರು ಕೃತಿಗಳನ್ನು ಕನ್ನಡದಿಂದ ಮಲಯಾಳಕ್ಕೆ, ‘ಜ್ಞಾನಪ್ಪಾನ’, ‘ಚಟ್ಟಂಬಿ ಸ್ವಾಮಿಗಳು’, ‘ವ್ಯಾಸ ಭಾರತದ ದ್ರೌಪದಿ‌’ ಇತ್ಯಾದಿ ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಕವನ ಸಂಕಲನ ‘ಬೇರೆ ಶಬ್ದಗಳಿಲ್ಲ’ ಎಂಬ ಸ್ವರಚಿತ ಕವನ ಸಂಕಲನ ಮತ್ತು ಓರೆಗೆರೆ ಬರಹ ( ಕಾರ್ಟೂನ್) ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

    ವೀರಲೋಕ ದೇಸೀ ಜಗಲಿ ಬಳಗ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದಿಂದ ಜಿಲ್ಲಾ ಮಟ್ಟದ ಕಥಾ ಕಮ್ಮಟ – Roovari

    Share. Facebook Twitter Pinterest LinkedIn Tumblr WhatsApp Email
    Previous Articleಬಂಡಾಯ ಸಾಹಿತ್ಯ ಸಂಘಟನೆಯ ತಿಂಗಳ ಕಾರ್ಯಕ್ರಮ | ಅಕ್ಟೋಬರ್ 6ರಂದು 
    Next Article ಮೂಲ್ಕಿಯಲ್ಲಿ ಕಸಾಪ ಘಟಕದಿಂದ ದೀಪದ ಬೆಳಕಿನಲ್ಲಿ ಸಾಹಿತ್ಯದ ಮಾತು ಹಾಗೂ ಬೆಳಕಿನ ಹಾಡುಗಳ ಕಾರ್ಯಕ್ರಮ 
    roovari

    Add Comment Cancel Reply


    Related Posts

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರ

    May 21, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.