ಪುತ್ತೂರು : ಹಿರಿಯ ವಿದ್ವಾಂಸರು, ವಿಮರ್ಶಕರೂ ಆಗಿರುವ ಶ್ರೀ ಲಕ್ಷ್ಮೀಶ ತೋಳ್ಪಾಡಿ ಇವರ ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ‘ಸಾರ್ವಜನಿಕ ಅಭಿನಂದನಾ ಸಮಾರಂಭ’ವನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಲಕ್ಷ್ಮೀಶ ತೋಲ್ಪಾಡಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ದಿನಾಂಕ 17-03-2024ರ ಆದಿತ್ಯವಾರ ಸಂಜೆ 4:00 ಗಂಟೆಗೆ ಪುತ್ತೂರಿನ ಶ್ರೀ ರಾಧಾಕೃಷ್ಣ ಮಂದಿರ ರಸ್ತೆಯಲ್ಲಿರುವ ಅನುರಾಗ ವಠಾರದಲ್ಲಿ ಆಯೋಜನೆ ಮಾಡಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ವಹಿಸಲಿದ್ದು, ಪ್ರಾಧ್ಯಾಪಕರು ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ನರೇಂದ್ರ ರೈ ದೇರ್ಲ ಇವರು ಉದ್ಘಾಟಿಸಲಿರುವರು. ಹಿರಿಯ ವಿದ್ವಾಂಸರು, ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರು ಶ್ರೀ ಲಕ್ಷ್ಮೀಶ ತೋಲ್ಪಾಡಿಯವರನ್ನು ಅಭಿನಂದಿಸಿ ಸನ್ಮಾನಿಸಲಿದ್ದು, ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿಯ ಕುರಿತು ಪ್ರಾಧ್ಯಾಪಕರು ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ವರದರಾಜ ಚಂದ್ರಗಿರಿ ಇವರು ಮಾತನಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರ ಗೌರವ ಉಪಸ್ಥಿತಿಯಲ್ಲಿ ಹಿರಿಯ ಸಾಹಿತಿ ಹಾಗೂ ಕಲಾವಿದರಾದ ಶ್ರೀ ಗುರುರಾಜ ಮಾರ್ಪಳ್ಳಿಯವರು ಅಭಿನಂದನೆಯ ನುಡಿಗಳನ್ನಾಡಲಿರುವರು.
ಇದೇ ಸಂದರ್ಭದಲ್ಲಿ ಮಧ್ಯಾಹ್ನ 3 ಗಂಟೆಯಿಂದ 4 ಗಂಟೆ ತನಕ ಡಾ. ಶೋಭಿತಾ ಸತೀಶ್ ಮತ್ತು ಬಳಗದವರಿಂದ ‘ಸುಗಮ ಸಂಗೀತ’ ಕಾರ್ಯಕ್ರಮ ನಡೆಯಲಿದೆ. ಈ ಪ್ರಶಸ್ತಿಯು ಕೇವಲ ಪುತ್ತೂರಿಗೆ ಮಾತ್ರವಲ್ಲದೆ ಸಮಸ್ತ ಕನ್ನಡಿಗರಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಸಂದ ಗೌರವವಾಗಿದೆ. ಆದ್ದರಿಂದ ಈ ಅಭಿನಂದನಾ ಸಮಾರಂಭವನ್ನು ಯಶಸ್ವಿಯಾಗಿರಿಸುವ ನಿಟ್ಟಿನಲ್ಲಿ ಕನ್ನಡ ಅಭಿಮಾನಿಗಳು, ಸಾಹಿತ್ಯ ಅಭಿಮಾನಿಗಳು, ಶ್ರೀ ಲಕ್ಷ್ಮೀಶ ತೋಳ್ಪಾಡಿ ಅಭಿಮಾನಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ಗೌರವಪೂರ್ವಕ ಸ್ವಾಗತ.