ಮಂಗಳೂರು: ‘ನಾದಸ್ವರ ಸೆಲ್ವಂ’ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರಿಗೆ ಆಕಾಶವಾಣಿಯ ಅತ್ಯುನ್ನತ ಶ್ರೇಣಿ ಲಭಿಸಿದ ಹಿನ್ನೆಲೆಯಲ್ಲಿ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಅಭಿನಂದನ ಸಮಿತಿ ವತಿಯಿಂದ ಸಾರ್ವಜನಿಕ ಅಭಿನಂದನಾ ಸಮಾರಂಭ ದಿನಾಂಕ 24 ನವೆಂಬರ್ 2024ರ ರವಿವಾರ ಹಂಪನಕಟ್ಟೆ ವಿ.ವಿ. ಕಾಲೇಜಿನ ರವೀಂದ್ರ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ “ನಾಗೇಶ್ ಬಪ್ಪನಾಡು ಇವರು ಶ್ರೇಷ್ಟ ಕಲಾವಿದರಾಗಿದ್ದು, ಇವರಿಗೆ ಅರ್ಹವಾಗಿಯೇ ಆಕಾಶವಾಣಿಯ ಅತ್ಯುನ್ನತ ಶ್ರೇಣಿ ಲಭಿಸಿದೆ. ಮಂಗಳವಾದ್ಯ ಕ್ಷೇತ್ರದಲ್ಲಿ ಅವರ ಸಾಧನೆ ನಾಡಿಗೆ ಕೀರ್ತಿ ತಂದಿದೆ. ಅವಿಭಜಿತ ಜಿಲ್ಲೆಯ ದೇಗುಲಗಳಲ್ಲಿ ನಾದಸ್ವರಕ್ಕೆ ಅದರದ್ದೇ ಆದ ಮಹತ್ವದ ಸ್ಥಾನವಿದೆ. ಅಯೋಧ್ಯೆಯಲ್ಲಿ ನಾದಸ್ವರವನ್ನು ನುಡಿಸುವ ಅವಕಾಶವನ್ನೂ ಅವರು ಪಡೆದಿದ್ದಾರೆ. ಇಂತಹ ಅವಕಾಶಗಳು ಅವರಿಗೆ ಮುಂದೆಯೂ ಲಭಿಸಲಿ.” ಎಂದರು.
ಅಭಿನಂದನಾ ಸಮಿತಿ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಗೇಶ್ ಎಂ. ಬಪ್ಪನಾಡು ಇವರನ್ನು ಪತ್ನಿ ಶ್ರೀ ಲತಾ, ಪುತ್ರ ವಿಶ್ಲೇಶ್, ಪುತ್ರಿ ವೈಷ್ಣವಿ ಸಹಿತವಾಗಿ ಸಮ್ಮಾನಿಸಲಾಯಿತು. ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣ, ವೇ. ಮೂ. ವಾದಿರಾಜ ಉಪಾಧ್ಯಾಯ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ “ನಾಗೇಶ್ ಬಪ್ಪನಾಡು ಒಬ್ಬ ಮಹಾನ್ ತಪಸ್ವಿ, ಶ್ರೇಷ್ಟ ಕಲಾವಿದ. ಆಕಾಶವಾಣಿಯ ಗ್ರೇಡ್ ಪಡೆಯಲು ಅವರ ಮಹಾನ್ ಸಾಧನೆಯೇ ಕಾರಣ.” ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕೆ. ಪಿ. ಸಿ. ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಕೆ. ಅಣ್ಣಯ್ಯ ಶೇರಿಗಾರ್ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಪ್ರಸ್ತಾವಿಕವಾಗಿ ಮಾತನಾಡಿ, ವಿದುಷಿ ಗೀತಾ ಸರಳಾಯ ಸಮ್ಮಾನ ಪತ್ರ ವಾಚಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು.