ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ 4 ಸೆಪ್ಟೆಂಬರ್ 2024ರಂದು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ದಾಮೋದರ ನಿಸರ್ಗರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡಿ “ದಾಮೋದರ ನಿಸರ್ಗ ಅವರು ತುಳು ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದವರು. ಅವರು ತುಳು ಜೀವನದ ದರ್ಪಣವಿದ್ದಂತೆ. ಸಾಮಾಜಿಕ, ಸಾಂಸ್ಕೃತಿಕ ಮುಖಂಡ ದಿ. ದಾಮೋದರ ನಿಸರ್ಗ ಅವರು ತುಳುಕೂಟದ ಮೂಲಕ ಸಾಕಷ್ಟು ತುಳು ಭಾಷೆಗೆ ದುಡಿದವರು. ತುಳು ಸಂಸ್ಕೃತಿಯನ್ನು ಕಟ್ಟಿಕೊಂಡು ದೃಢವಾಗಿ ಮುಂದೆ ಸಾಗಿದವರು. ತುಳು ಭಾಷೆಯ ಅಭಿವೃದ್ಧಿಗೆ ಬದುಕಿನ ಕೊನೆಯ ತನಕವೂ ದುಡಿದವರು” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಮಾತನಾಡಿ “ತುಳುವಿನ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಿಸರ್ಗ ಬರುತ್ತಿದ್ದರು. ತುಳು ಸಂಘಟನೆಯಲ್ಲೂ ಅವರು ತೊಡಗಿಸಿಕೊಂಡು ತುಳುಕೂಟದ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಾ ಸಾಗಿದವರು. ಅವರ ಕೊಡುಗೆ ಮರೆಯಲಾಗದ್ದು” ಎಂದರು.
ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, “ದಾಮೋದರ ನಿಸರ್ಗ ಅವರಲ್ಲಿ ಅವರ ಸಹೋದರ ವಿಶುಕುಮಾರ್ ಅವರನ್ನು ಕಾಣುತ್ತಿದ್ದೆವು. ವಿಶು ಕುಮಾರ್ ಕೋಟಿ ಚೆನ್ನಯ್ಯದ ಮೂಲಕ ತುಳು ಸಿನಿಮಾಕ್ಕೆ ಹೊಸ ದಿಶೆಯನ್ನು ತೋರಿಸಿದವರು” ಎಂದರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಜಾನಪದ ವಿದ್ವಾಂಸ ಡಾ. ಗಣೇಶ ಅಮೀನ್ ಸಂಕಮಾರ್, ಪ್ರಮುಖರಾದ ತಾರನಾಥ ಶೆಟ್ಟಿ ಬೋಳಾರ್, ಭಾಸ್ಕರ ರೈ ಕುಕ್ಕುವಳ್ಳಿ, ತೋನ್ಸೆ ಪುಷ್ಕಳ್ ಕುಮಾರ್, ದಯಾನಂದ ಕಟೀಲ್, ಯಕ್ಷಗುರು ರವಿ ಅಲೆವೂರಾಯ, ರತ್ನಾವತಿ ಜೆ. ಬೈಕಾಡಿ, ನಿಸರ್ಗ ಅವರ ಕುಟುಂಬದ ಸದಸ್ಯರು ಹಾಗೂ ಅವರ ಸ್ನೇಹಿತ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.