ಮಂಗಳೂರು : ನೃತ್ಯಾಭ್ಯಾಸೀ ಮಕ್ಕಳಲ್ಲಿ ಭಾರತೀಯ ಕಲೆಗಳಲ್ಲಿರುವ ಪರಸ್ಪರ ಸಂಬಂಧವನ್ನು ಪರಿಚಯಿಸುತ್ತಾ, ಸಮಕಾಲೀನವಾದ ಹತ್ತನೇ ಹಾಗೂ ಪದವಿ ಪೂರ್ವ ತರಗತಿಗಳ ಪಬ್ಲಿಕ್ ಪರೀಕ್ಷೆಗಳ ಸುತ್ತಮುತ್ತಲಿನ ವಿಚಾರಗಳನ್ನು ಕತೆ-ಕೇಳುವಿಕೆ ಹಾಗೂ ಸಂಭಾಷಣೆಗಳ ಮೂಲಕ ಚರ್ಚಿಸುವ ಅಪೂರ್ವ ಗೊಂಬೆಯಾಟ ಕಾರ್ಯಕ್ರಮವು ಮಂಗಳೂರಿನ ಹಿಂದಿ ಪ್ರಚಾರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾದನೃತ್ಯ ಕಲಾಶಾಲೆಯಲ್ಲಿ ದಿನಾಂಕ 07 ಫೆಬ್ರವರಿ 2026ರ ಸಂಜೆ ನಡೆಯಿತು. ಡಾ. ಭ್ರಮರಿ ಶಿವಪ್ರಕಾಶರ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ಘನ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಮಕ್ಕಳ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಸೃಜನಾತ್ಮಕವಾಗಿ ಗೊಂಬೆಯಾಟದ ಮೂಲಕ ಕತೆ ಹೇಳುವುದರಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಶ್ರೀಮತಿ ಉಜ್ವಲಾ ಕೃಷ್ಣರಾಜ್ ತನ್ನ ಗೊಂಬೆ ಲಲಿತಜ್ಜಿಯ ಕೈಯಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭಗೈದರು. ನಾದನೃತ್ಯದ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಶುಕೀ ರಾವ್, ಮಹಾಲಕ್ಷ್ಮೀ ಶೆಣೈ, ಶಿವಾನಿ, ವರ್ಣಿಕಾ ಆಚಾರ್ಯ, ಚಿನ್ಮಯೀ ಕೋಟ್ಯಾನ್, ಪ್ರಾಪ್ತ ಶೆಟ್ಟಿ ಹಾಗೂ ಸಮನ್ವಿತಾ ಪಿ.ಎಸ್. ಇವರುಗಳು ಹಿರಿಯ ವಾಗ್ಗೇಯಕಾರ ಊತ್ತುಕ್ಕಾಡು ವೆಂಕಟಸುಬ್ಬಯ್ಯರ್ ಅವರು ರಚಿಸಿದ ‘ಶ್ರೀ ವಿಘ್ನರಾಜಂ ಭಜೆ’ ಎಂಬ ನರ್ತನವನ್ನು ಲಲಿತಜ್ಜಿಗಾಗಿ ಪ್ರದರ್ಶಿಸಿ ವಿಘ್ನ ವಿನಾಶಕನ ಕೃಪೆಯನ್ನು ಕೋರಿದರು.


‘ಟೆನ್ತ್ ಬೋರ್ಡ್ಸ್ ಎಂಡ್ ಬಿಯಾಂಡ್’ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪಬ್ಲಿಕ್ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗಾಗಿ 2018ರಲ್ಲಿ ಆರಂಭಿಸಿದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಸೃಜನಾತ್ಮಕ ಮುಂಚಾಚು ಎಂದು ನಾದನೃತ್ಯದ ಸದಸ್ಯೆ ಪ್ರೊ. ಸ್ಮಿತಾ ಶೆಣೈ ಗುರುತಿಸಿದರು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಗೊಂಬೆ ಲಲಿತಜ್ಜಿಯು ತನ್ನ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮೊಮ್ಮಗಳು ಪೊಲ್ಲಿ ಪಾವಂಜೆ ಎಂಬವಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ಎದುರಿಸುವಲ್ಲಿ ಅಗತ್ಯವಿರುವ ಮನಸ್ಥಿತಿಗಳು, ಕಲಿಕಾ ಕೌಶಲ್ಯಗಳು ಹಾಗೂ ಪರೀಕ್ಷೆಗಳನ್ನು ಆಯೋಜಿಸುವ ಹಿಂದಿರುವ ತತ್ತ್ವಗಳನ್ನು ವೇದಗಳಿಂದ, ಭಗವದ್ಗೀತೆಯಿಂದ ಹಾಗೂ ಪತಂಜಲಿಯ ಯೋಗ ಸೂತ್ರದಿಂದ ಆಯ್ದು ಸಮಕಾಲೀನ ಅರ್ಥೈಸುವಿಕೆಗೆ ಅನುಕೂಲವಾಗುವಂತೆ ಕಥಾ ನಿರೂಪಣೆ ಹಾಗೂ ಸಂಭಾಷಣೆಯ ಶೈಲಿಗಳಿಂದ ವಿವರಿಸುತ್ತಾ ನಾದನೃತ್ಯದ ವಿದ್ಯಾರ್ಥಿನಿಯರನ್ನು ಸುಮಾರು ಒಂದು ಗಂಟೆಯ ಕಾಲ ತೊಡಗಿಸಿಕೊಂಡರು. ಜೀವನದಲ್ಲಿ ನಾವು ಆಯ್ಕೆ ಮಾಡುವ ದಾರಿಗಳು ಹಾಗೂ ರೀತಿ ನೀತಿಗಳು ಒಂದೊಂಮ್ಮೆ ಸಮರ್ಪಕವಾಗಿರದಿದ್ದರೂ ಅವುಗಳನ್ನು ತಿದ್ದಿಕೊಳ್ಳುವುದಕ್ಕೆ ಹಾಗೂ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶವಿದೆ ಎಂಬ ಅಂಶವನ್ನು ಸರಳವಾದ ಅಡುಗೆಯ ಚಟುವಟಿಕೆಯೊಂದಿಗೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡರು. ಲಲಿತಜ್ಜಿಯ ಗಂಡ ಗೊಂಬೆ ರಾಮಜ್ಜ ಮಂಡಿ ನೋವಿನಿಂದ ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ತನ್ನ ಅಶರೀರ ಸಂದೇಶದ ಮೂಲಕ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಹಾಗೂ ಕೊನೆಯಲ್ಲಿ ಲಲಿತಜ್ಜಿಯು ವಿವಿಧ ಕಲಿಕಾ ವಿಧಾನಗಳಾದ ಮೆಮೊರಿ ಮ್ಯಾಪಿಂಗ್, ನ್ಯುಮೊನಿಕ್ಸ್, ಹಾಡುಗಳ ಮೂಲಕ ವಿದ್ಯಾರ್ಥಿಗಳಿಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು.


ಕೊನೆಯಲ್ಲಿ ಡಾ. ಭ್ರಮರಿಯವರು ಗೊಂಬೆಯಾಟದ ವೀಕ್ಷಣೆಯಿಂದ ನೃತ್ಯ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನವನ್ನು ಸಂತ ಪುರಂದರ ದಾಸರ ‘ಮಲಗಿ ಪಾಡಿದರೆ ಕುಳಿತು ಕೇಳುವನು. . . ‘ ಎಂಬ ಪ್ರಸಿದ್ಧ ದೇವರನಾಮದ ಉದಾಹರಣೆಯೊಂದಿಗೆ, ಸಾಹಿತ್ಯ, ಚಿತ್ರ, ಸಂಗೀತ, ನೃತ್ಯ ಕಲೆಗಳನ್ನು ನಲಿ-ಕಲಿಯೆಂಬ ಪರಿಕಲ್ಪನೆಗೆ ಹೊಂದಿಸಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ವಿಚಾರವನ್ನು ಹಂಚಿಕೊಳ್ಳುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ನಾದನೃತ್ಯದ ಸದಸ್ಯರಾದ ವಿದ್ವಾನ್ ಕೃಷ್ಣಪವನ್ ಕುಮಾರ್ ಉಪಸ್ಥಿತರಿದ್ದರು ಹಾಗೂ ನಾದನೃತ್ಯದ ವಿದ್ಯಾರ್ಥಿ ಸಮೂಹದೊಂದಿಗೆ, ಅವರ ಹೆತ್ತವರು ಹಾಗೂ ಸಹೃದಯರ ಸಮ್ಮಖದಲ್ಲಿ ಈ ಕಾರ್ಯಕ್ರಮವು ಜರಗಿತು.

