ಬೆಳ್ತಂಗಡಿ : ಧರ್ಮಸ್ಥಳದಲ್ಲಿ ದಿನಾಂಕ 16-07-2024 ರಿಂದ 17-08-2024ರ ವರೆಗೆ ನಡೆಯಲಿರುವ 53ನೇ ವರ್ಷದ ‘ಪುರಾಣ ಕಾವ್ಯ ವಾಚನ – ಪ್ರವಚನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 16-07-2024ರ ಮಂಗಳವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ‘ಜೈಮಿನಿ ಭಾರತ’ ಮತ್ತು ‘ತುರಂಗ ಭಾರತ’ ಪುರಾಣ ಕಾವ್ಯ ವಾಚನ ಹಾಗೂ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿದ್ವಾಂಸ ಪ್ರೊ. ಎಮ್. ಪ್ರಭಾಕರ ಜೋಶಿ ಮಾತನಾಡಿ “ಪುರಾಣಕ್ಕೆ ಹಲವಾರು ಅರ್ಥಗಳಿವೆ. ಭಾರತ ಮತ್ತು ಚೀನಾ ದೇಶದಲ್ಲಿ ಅತೀ ಹೆಚ್ಚು ಪುರಾಣಗಳಿದ್ದು ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ಪುರಾಣ ವಾಚನ – ಪ್ರವಚನದಿಂದ ಪ್ರತಿ ಕಲೆಯೂ, ಕಲಾವಿದರೂ ಬೆಳೆಯಬೇಕು. ದೇವರ ಕಲ್ಪನೆಯನ್ನು ಜನಮನಕ್ಕೆ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ವಿಷ್ಣುಪುರಾಣ, ಭಾಗವತ, ರಾಮಾಯಣ, ಮಹಾಭಾರತ ಮೊದಲಾದ ಅನೇಕ ಪುರಾಣಗಳಿವೆ. ರಾಮಾಯಣದಲ್ಲಿಯೂ ಬೇರೆ ಬೇರೆ ಭಾಷೆಗಳಲ್ಲಿ ಹಲವು ರೀತಿಯ ರಾಮಾಯಣಗಳು ರಚನೆಯಾಗಿವೆ. ನಮ್ಮ ಸನಾತನ ಧಾರ್ಮಿಕ ಪರಂಪರೆಯನ್ನು ವಿಸ್ತರಿಸಿ ಸೃಜನಶೀಲತೆಯೊಂದಿಗೆ ಜನರಿಗೆ ತಲುಪಿಸುವ ಕಾಯಕವನ್ನು ಪುರಾಣಗಳು ಮಾಡುತ್ತವೆ. ಪುರಾಣಗಳಲ್ಲಿ ಜ್ಞಾನ, ವಿಜ್ಞಾನ, ಸಾಹಿತ್ಯ, ಕಲೆ, ಸಂಗೀತ, ಮಾನವೀಯ ಮೌಲ್ಯಗಳು – ಎಲ್ಲವೂ ಅಡಕವಾಗಿವೆ.” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ಪುರಾಣ ವಾಚನ ಹಾಗೂ ಪ್ರವಚನದಿಂದ ಸಮಯದ ಸದುಪಯೋಗದೊಂದಿಗೆ ವಿಶಿಷ್ಟ ಮಾಹಿತಿ ಮತ್ತು ಮಾರ್ಗದರ್ಶನ ದೊರಕುತ್ತದೆ ಹಾಗೂ ನಮ್ಮ ಜ್ಞಾನ ಕ್ಷಿತಿಜ ವಿಸ್ತರಣೆಯಾಗುತ್ತದೆ. ಪ್ರಸ್ತುತ ಜನರಲ್ಲಿ ಮಾತನಾಡುವ ಚಟ ಹೆಚ್ಚಾಗಿದೆ. ಕೇಳುವ ವ್ಯವಧಾನ ಯಾರಲ್ಲೂ ಇರುವುದಿಲ್ಲ. ಎಲ್ಲರೂ ಉತ್ತಮ ಶ್ರೋತೃಗಳಾಗಿ ಜೀವನಶೈಲಿ ಸುಧಾರಣೆ ಮಾಡಿಕೊಳ್ಳಬೇಕು.” ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಕೊನೆಯಲ್ಲಿ ಧನ್ಯವಾದವಿತ್ತರು.
ಈ ಪ್ರವಚನ ಕಾರ್ಯಕ್ರಮವು ಪ್ರತಿ ದಿನ ಸಂಜೆ ಗಂಟೆ 6.30ರಿಂದ 8.00ರವರೆಗೆ ನಡೆಯಲಿದೆ.