ಬೆಂಗಳೂರು : ವೀರಕಪುತ್ರ ಶ್ರೀನಿವಾಸ ಸಾರಥ್ಯದಲ್ಲಿ ವೀರಲೋಕ ಇದರ ಆಶ್ರಯದಲ್ಲಿ ‘ಪುಸ್ತಕ ಸಂತೆ -3’ ಕಾರ್ಯಕ್ರಮವು ದಿನಾಂಕ 14, 15 ಮತ್ತು 16 ನವೆಂಬರ್ 2025ರಂದು ಬೆಳಿಗ್ಗೆ ಗಂಟೆ 10-00ರಿಂದ ಬೆಂಗಳೂರಿನ ಜಯನಗರ ಶಾಲಿನಿ ಗ್ರೌಂಡ್ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ನಡೆಯಲಿದೆ.
ಈ ಬಾರಿಯ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹೊಸ ತಲೆಮಾರಿನ ಲೇಖಕರುಗಳ ಜೊತೆಗೆ ಜನಪ್ರಿಯ ಲೇಖಕರ, ಸಾಹಿತಿಗಳ ಪುಸ್ತಕಗಳ ಜೊತೆಗೆ ಹಳೆಯ ತಲೆಮಾರಿನ ಅಪರೂಪದ ಕೃತಿಗಳು ಸೇರಿದಂತೆ ಲಕ್ಷಾಂತರ ಪುಸ್ತಕಗಳು ಓದುಗರನ್ನು ಸ್ವಾಗತಿಸಲು ವೇದಿಕೆಗಳು ಸಜ್ಜಾಗುತ್ತಿವೆ. 300ಕ್ಕೂ ಹೆಚ್ಚು ಜನಪ್ರಿಯ ಲೇಖಕರು, ಸಾಹಿತಿಗಳು ಈ ಮೂರು ದಿನದ ಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ಈ ಸಂತೆಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಆಟದ ಸಂತೆ, ಹಾರ್ಟ್ ಅಂಡ್ ಕ್ರಾಫ್ಟ್ ಚಟುವಟಿಕೆಗಳು, ನಾಟಕ, ಯಕ್ಷಗಾನ, ಸಂಗೀತ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ನೆಚ್ಚಿನ ಲೇಖಕನ ಜೊತೆಗೆ ಮೆಚ್ಚಿದ ಓದುಗನ ಮುಖಾಮುಖಿಯ ಅಪರೂಪದ ‘ಓಲೇ : ಓದುಗ – ಲೇಖಕ’ನಲ್ಲಿ ನೂರಕ್ಕೂ ಹೆಚ್ಚು ಓದುಗರು ತಮ್ಮ ನೆಚ್ಚಿನ ಲೇಖಕರ ಜೊತೆಯಲ್ಲಿ ಸಾಹಿತ್ಯದ ಮುಕ್ತ ಚರ್ಚೆಯನ್ನು ನಡೆಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಪ್ರವೇಶ ಉಚಿತವಾಗಿರುತ್ತದೆ. ಇದೇ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಹೊಸ ಕೃತಿಗಳು ‘ವೀರಲೋಕ ಪ್ರತಿಷ್ಠಾನ’ ದ ವತಿಯಿಂದ ಲೋಕಾರ್ಪಣೆಗೊಳ್ಳುತ್ತಿದೆ. ಇದರಲ್ಲಿ ನಾಡಿನ ಹಿರಿಯ ಸಾಹಿತಿಗಳ ಜೊತೆಗೆ ಹೊಸ ಚಿಂತನೆಯ ಯುವ ಸಾಹಿತಿಗಳ ಪುಸ್ತಕಗಳು ಸಹ ಒಳಗೊಂಡಿದೆ. ಪ್ರತಿ ಕನ್ನಡದ ಮನಸ್ಸು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಇದೊಂದು ಅಪರೂಪದ ಸಾಂಸ್ಕೃತಿಕ ಹಾಗೂ ಕನ್ನಡದ ಕಟ್ಟುವಿಕೆಯ ಕಾರ್ಯವಾಗಿದೆ.

