ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಾರ್ವಜನಿಕ ವಾಚನಾಲಯದಲ್ಲಿ ‘ಪುಸ್ತಕ ವಾರಾಚರಣೆ’ ಪ್ರಾರಂಭವಾಯಿತು. ಬಿ.ಇ.ಎಂ. ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಹಬಾಗಿತ್ವದಲ್ಲಿ ದಿನಾಂಕ 19-06-2024ರಂದು ಈ ಕಾರ್ಯಕ್ರಮವು ಜರಗಿತು.
ಬಿ.ಇ.ಎಂ. ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ರಾಜೇಶ್ ಚಂದ್ರ ಕೆ.ಪಿ. ಕಾರ್ಯಕ್ರಮ ಉದ್ಘಾಟಿಸಿ “ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಅಂಕ ಪಡೆಯುವ ಯಾಂತ್ರಿಕ ಸಾಗಟದೊಂದಿಗೆ, ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಗ್ರಂಥಾಲಯ, ಸ್ಮಾರಕ, ಚಾರಿತ್ರಿಕ ಸ್ಥಳ ಸಂದರ್ಶನ, ಸಾಹಿತ್ಯ ಕೂಟ ಇವುಗಳೆಲ್ಲ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ನಾಂದಿಯಾಗುತ್ತದೆ. ಅಂತಹ ಒಂದು ತಾಣ ಕನ್ನಡ ಭವನ. ಇಲ್ಲಿ ಪ್ರಾಚ್ಯ ವಸ್ತು ಸಂಗ್ರಹ, ಪುರಾತನ ನಾಣ್ಯ ಸಂಗ್ರಹ, ಅಪಾರ ಮಹತ್ವದ ಪುಸ್ತಕ ಸಂಗ್ರಹ ವಿದ್ಯಾರ್ಥಿಗಳಿಗೆ ಸಂದರ್ಶನ ಯೋಗ್ಯ” ಎಂದರು.
ಈ ಕಾರ್ಯಕ್ರಮದಲ್ಲಿ 25 ಶಾಲಾ ವಿದ್ಯಾರ್ಥಿಗಳೊಂದಿಗೆ ಹೈಸ್ಕೂಲ್ ಅದ್ಯಾಪಿಕೆ ರಕ್ಷಿತಾ ಬಿ.ಎಂ., ಗ್ರಂಥಾಲಯ ಸಂಚಾಲಕಿ ಸಂದ್ಯಾರಾಣಿ ಟೀಚರ್ ಪ್ರಾತ್ಯಕ್ಷಿಕೆ ನೀಡಿದರು. ಹೈಯರ್ ಸೆಕೆಂಡರಿ ಪ್ರಾಧ್ಯಾಪಕ ಶಿಜಿನ್ ವಿದ್ಯಾರ್ಥಿಗಳಿಗೆ ಪುಸ್ತಕ ವಾರಾಚರಣೆಯ ಮಹತ್ವ ತಿಳಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳು ತಮ್ಮ ಅನಿಸಿಕೆಯನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ಕನ್ನಡ ಭವನ ಪ್ರಕಾಶನದ ಸಮಾಜ ಸಂಪದ ಪುಸ್ತಕ ನೀಡಲಾಯಿತು. ಚೈತಾಲಿ ಅನಂಗೂರ್ ಸ್ವಾಗತಿಸಿ, ಮನೀಶ್ ರಾಜ್ ವಂದಿಸಿ, ಸಂಧ್ಯಾರಾಣಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.