ಉಪ್ಪಿನಂಗಡಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ನೇತೃತ್ವದಲ್ಲಿ ಪುಸ್ತಕ ಹಬ್ಬ, ಪುಸ್ತಕದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 29-09-2023, 30-09-2023 ಮತ್ತು 01-10-2023ರವರೆಗೆ ಮೂರು ದಿನ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಗ್ರಾಮ ಪಂಚಾಯತ್ ಉಪ್ಪಿನಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸತ್ಯಶಾಂತ ಪ್ರತಿಷ್ಠಾನ ನೆಕ್ಕಿಲಾಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಈ ಸಂಘಟನೆಗಳ ಸಹಕಾರದಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ನಡೆಯುತ್ತದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪುಸ್ತಕ ಮೇಳ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ್ ಕುಮಾರ್ ಪ್ರಥಮ ಪುಸ್ತಕ ದಾನ ಮಾಡಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ನಿಕಟಪೂರ್ವ ಅಧ್ಯಕ್ಷೆ ಉಷಾ ಮುಳಿಯ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಉಚಿತ ಪುಸ್ತಕ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹಾಗೂ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಹಾಯ ವಾಗುತ್ತದೆ ಎಂಬ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬರುವ ಸರ್ವರಿಗೂ ಉಚಿತ ಪುಸ್ತಕವನ್ನು ಜ್ಞಾನ ಗಂಗಾ ಪುಸ್ತಕ ಮಳಿಗೆಯ ವತಿಯಿಂದ ಉಡುಗೊರೆಯಾಗಿ ನೀಡಲಿದ್ದಾರೆ. ಪುಸ್ತಕದಾನಿಗಳ ಸಮಾವೇಶ ಪ್ರಸ್ತಕ ಪ್ರೇಮಿಗಳ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ದಾನ ರೂಪದಲ್ಲಿ ನೀಡುವವರಿಗೆ ‘ಪುಸ್ತಕ ಮಹಾದಾನಿ’ ಎಂಬ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಪುಸ್ತಕದಾನ ಮಾಡುವ ದಾನಿಗಳು ಶಂಕರಿ ಶರ್ಮ (9449856033) ಹಾಗೂ ಶಾಂತಾ ಪ್ರತ್ತೂರು (8277591731) ಅವರನ್ನು ಸಂಪರ್ಕಿಸಬಹುದು.
ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್, ಚಲನಚಿತ ನಿರ್ದೇಶಕ ಎಂ.ಕೆ.ಮಠ, ಹಿರಿಯ ಸಾಹಿತಿಗಳಾದ ಗೋಪಾಲಕೃಷ್ಣ ಕುಂಟಿನಿ, ಜಲೀಲ್ ಮುಕ್ರಿ, ಹವ್ಯಾಸಿ ಯಕ್ಷಗಾನ ಕಲಾವಿದ ತಲೆಂಗಳ ಕೃಷ್ಣ ಭಟ್, ಹಿರಿಯ ಛಾಯಾಚಿತ್ರಗ್ರಾಹಕ ಬಾಲಕೃಷ್ಣ ರೈ, ಕಿರು ಚಲನಚಿತ್ರ ನಿರ್ಮಾಪಕ ಅಚಲ್ ಉಬರಡ್ಕ, ದಿ. ಕಜೆ ಈಶ್ವರ ಭಟ್ ಪ್ರಾರಂಭಿಸಿದ ‘ಕನ್ನಡ ಸಂಗಮ’ ಹಾಗೂ ‘ಅಮಲು’ ಕಿರುಚಿತ್ರ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಅಭಿನಂದಿಸಲಿದ್ದಾರೆ.
ದಿನಾಂಕ 29-09-2023ರಂದು ಐಎಎಸ್-ಐಪಿಎಸ್ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಹೆಚ್ಚಿನ ಕನ್ನಡಿಗರು ಸರಕಾರದ ಕಾರ್ಯಾಂಗದಲ್ಲಿ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಐಎಎಸ್- ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಬಹುದೆಂಬ ಅಭಿಯಾನದ 56ನೇ ಸರಣಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ದೀಪಕ್ ಪೈ ಹಾಗೂ ರಘುರಾಮ ಉಪ್ಪಿನಂಗಡಿ ಬಳಗದವರಿಂದ ಕನ್ನಡ ಗಾನ ವೈಭವ ಕಾರ್ಯಕ್ರಮ ನಡೆಯಲಿದೆ. ದಿನಾಂಕ 30-09-2023ರಂದು ಕಥಾಗೋಷ್ಟಿ ಮತ್ತು ಕವಿಗೋಷ್ಠಿ ಹಾಗೂ ಸಂಜೆ 4 ಗಂಟೆಗೆ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಸದಸ್ಯರಿಂದ ಶ್ರೀ ಮಹಾಭಾರತ ತಾಳ ಮದ್ದಳೆ ಸರಣಿ ಕಾರ್ಯಕ್ರಮ ‘ಶರಸೇತು ಬಂಧ’ ನಡೆಯಲಿದೆ. ದಿನಾಂಕ 01-10-2023ರಂದು ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಲಿದೆ.
ದಿನಾಂಕ 01-10-2023ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯಕ್ಕೆ ‘ಉಪ್ಪಿನಂಗಡಿ ಗ್ರಾಮದ ಕೊಡುಗೆ’ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಗೋವಿಂದ ಪ್ರಸಾದ್ ಕಜೆ ನಡೆಸಿಕೊಡಲಿದ್ದಾರೆ. ಶ್ರೀರಾಮ ಶಾಲೆ ಉಪ್ಪಿನಂಗಡಿಯ ಸಂಚಾಲಕ ಯು.ಜಿ. ರಾಧಾ ಇವರಿಂದ ಸಮಾರೋಪ ಭಾಷಣ, ಮಾಜಿ ಶಾಸಕ ಸಂಜೀವ ಮಠಂದೂರು ಇವರಿಂದ ಬಹುಮಾನ ವಿತರಣೆ ಮತ್ತು ಕರುಣಾಕರ ಸುವರ್ಣ ಪುಸ್ತಕ ಮಹಾದಾನಿಗಳನ್ನು ಅಭಿನಂದಿಸಲಿದ್ದಾರೆ. ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಡಾ.ರಾಜಾರಾಮ್ ಕೆ.ಬಿ., ಪ್ರಶಾಂತ ಡಿಕೋಸ್ಟ, ಸಿದ್ದೀಕ್ ನಿರಾಜೆ, ಯುವ ಉದ್ಯಮಿ ಕರಾಯ ರಾಘವೇಂದ್ರ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಈ ಕಾರ್ಯಕ್ರಮವು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ.