23 ಮಾರ್ಚ್ 2023, ಪುತ್ತೂರು: 2023 ಮಾರ್ಚ್ 6 ಮತ್ತು 7ನೇ ತಾರೀಕಿನಂದು ದರ್ಬೆಯಲ್ಲಿರುವ ಸಂಸ್ಥೆಯ ”ಶಶಿಶಂಕರ ಸಭಾಂಗಣ”ದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರೆಂಜಿತ್ ಬಾಬು ಹಾಗೂ ಶ್ರೀಮತಿ ವಿಜ್ಞಾ ವಾಸುದೇವನ್ ದಂಪತಿಗಳಿಂದ ಆಸಕ್ತ ನೃತ್ಯ ವಿದ್ಯಾರ್ಥಿಗಳಿಗೆ ಎರಡು ದಿನಗಳ ಭರತನಾಟ್ಯ ಕಾರ್ಯಾಗಾರದ ಆಯೋಜನೆಯನ್ನು ಸಂಸ್ಥೆ ಮಾಡಿತ್ತು. ಈ ಎರಡೂ ದಿನಗಳ ಕಾಲ ಶ್ರೀ ರೆಂಜಿತ್ ಮಾತು ಶ್ರೀಮತಿ ವಿಜ್ಞಾ ದಂಪತಿಗಳು ಶರೀರದ ಸುದೃಢತೆ, ಆರೋಗ್ಯವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕೆಲವು ಆಸನಗಳು, ವ್ಯಾಯಾಮಗಳು, ಅವುಗಳ ಅಗತ್ಯತೆ, ನೃತ್ಯ ಕಾರ್ಯಕ್ರಮದ ಮೊದಲು ಮತ್ತೆ ನಂತರ ಮಾಡುವ ಅಂಗ ಪ್ರಕ್ರಿಯೆಗಳು ಮತ್ತು ಕಾರ್ಯಕ್ರಮದ ನಂತರ ಶರೀರ ಸುಸ್ಥಿತಿಯಲ್ಲಿಡಲು ಹಾಗೂ ಸಹಜ ಸ್ಥಿತಿಗೆ ಬರಲು ಮಾಡಬೇಕಾದ ಸೆಳೆತಗಳು ಹೇಗೆ ಸಹಾಯಕ ಆಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಬಹಳ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿ ತರಬೇತಿಗೊಳಿಸಿದರು. ಅಡವುಗಳ ಬಹಳಷ್ಟು ತಿದ್ದುಪಡಿಯೊಂದಿಗೆ ಒಂದು ರೀತಿಯ ಶಿಸ್ತು ಬರುವಂತೆ ಮಾಡಿ ಒಂದು ವಿಶಿಷ್ಟ ರೀತಿಯ ಅಲರಿಪು ಮಕ್ಕಳಿಗೆ ಕಲಿಸಿದರು. ಒಂದು ಜತಿ ಹಾಗೂ ಸಾಹಿತ್ಯವನ್ನು ಮಕ್ಕಳಿಗೆ ಮೊದಲೇ ನೀಡಿ, ಇದಕ್ಕೆ ಶಿಬಿರಾರ್ಥಿಗಳು ತಾವೇ ಸಂಯೋಜನೆ ಮಾಡಿದ ನೃತ್ಯವನ್ನು ಅವರ ಮುಂದೆ ಪ್ರಸ್ತುತ ಪಡಿಸಿದಾಗ ಜತಿ ಸಂಯೋಜನೆಗೆ ಇರುವ ನಿಯಮಗಳನ್ನು ತಿಳಿಸಿ, ಸಂಯೋಜನೆ ಮಾಡಿದ ನೃತ್ಯವನ್ನು ತಿದ್ದಿ, ಅಭಿನಯ ಸಂಯೋಜನೆಗೆ ಮಾಡಬೇಕಾದ ಪೂರ್ವ ತಯಾರಿ ಮತ್ತು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡಿದರು ವಿದ್ಯಾರ್ಥಿಗಳು ನಾಟ್ಯ ದಂಪತಿಗಳಿಂದ ಪಡೆದರು. ಶ್ರೀ ರೆಂಜಿತ್ ಹಾಗೂ ಶ್ರೀಮತಿ ವಿಜ್ಞಾರವರ ಶಿಬಿರದ ಉದ್ದೇಶ ಬರೇ ಒಂದು ನೃತ್ಯವನ್ನು ಮಾತ್ರಾ ಕಲಿಸುವುದಲ್ಲ, ಮೊದಲು ಹಲವು ನೃತ್ಯಗಳನ್ನು ಮತ್ತು ನೃತ್ಯಬಂಧಗಳನ್ನು ತಮ್ಮ ಸ್ವಂತ ಪ್ರತಿಭೆಯಿಂದ ರಚನೆ ಮಾಡಲು ಆಗುವಂತಹ ಪರಿಕರಗಳನ್ನು ಶಿಬಿರಾರ್ಥಿಗಳಿಗೆ ನೀಡುವುದಾಗಿತ್ತು. ಭರತನಾಟ್ಯದ ಮೂಲ ಅಡವುಗಳು ಮತ್ತು ಅದಕ್ಕಿರುವ ಅಂಗಶುದ್ಧಿಯ ಬಗ್ಗೆ ಬಹಳಷ್ಟು ತಿದ್ದುಪಡಿಗಳನ್ನು ಮಾಡಿ ಅದು ಬಹಳ ಕಾಲ ನೆನಪಿನಲ್ಲಿರುವಂತೆ ಮಾಡಿದ್ದು ಶ್ಲಾಘನೀಯ.
ಪ್ರತೀ ವರ್ಷ ಭರತ ನಾಟ್ಯ ಕ್ಷೇತ್ರಕ್ಕೆ ಏನಾದರೂ ಕೊಡುಗೆಯನ್ನು ನೀಡಿ ಅದು ಬೆಳೆಯಲು ಸಹಕಾರ ಮಾಡುತ್ತಿರುವುದು ಈ ಸಂಸ್ಥೆಯ ಉದ್ದೇಶ. ನಾವು ಗಮನಿಸಿದ ಹಾಗೆ ಹಲವು ವರ್ಷಗಳಿಂದ ಕರ್ನಾಟಕ ಮತ್ತು ಕರ್ನಾಟಕದ ಹೊರಗಿನಿಂದ ಉತ್ತಮ ಸಂಪನ್ಮೂಲ ಕಲಾವಿದರನ್ನು ಬರಮಾಡಿಸಿಕೊಂಡು ತಮ್ಮ ವಿದ್ಯಾರ್ಥಿಗಳೊಂದಿಗೆ ನೃತ್ಯಾಸಕ್ತರಿಗೂ ನಾಟ್ಯ ಕಲೆಯಲ್ಲಿ ಹೆಚ್ಚಿನ ಅನುಭವ ಪಡೆಯಲು ಸಹಕರಿಸುತ್ತಿರುವುದು ಈ ಸಂಸ್ಥೆಯ ವಿಶೇಷತೆ. ಕಲಾಶ್ರಯ ಪ್ರಶಸ್ತಿಯನ್ನು ನೀಡುತ್ತಾ ಬಂದ ಈ ಸಂಸ್ಥೆ ಇನ್ನೂ ಹೆಚ್ಚಿನ ಜ್ಞಾನವಂತ ವಿದ್ಯಾರ್ಥಿಗಳನ್ನು ನೃತ್ಯ ಕ್ಷೇತ್ರಕ್ಕೆ ನೀಡುವುದರೊಂದಿಗೆ ಪ್ರಸಿದ್ದಿಯನ್ನು ಹೊಂದಲಿ.