10 ಏಪ್ರಿಲ್ 2023, ಪುತ್ತೂರು: ಪುತ್ತೂರಿನ ದರ್ಬೆಯಲ್ಲಿರುವ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 05-04-2023ರಂದು ಸಂಜೆ 5-45ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿ (ರಿ.) ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಇವರ ಓಂಕಾರ ಹಾಗೂ ಶಂಖನಾದದೊಂದಿಗೆ ಕಾರ್ಯಕ್ರಮ “ನೃತ್ಯಾಂತರಂಗ 96” ಆರಂಭವಾಯಿತು. ಕಾರ್ಯಕ್ರಮದ ಬಗ್ಗೆ ನಿರ್ದೇಶಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅಭ್ಯಾಗತರಾಗಿ ಬಂದ ಶ್ರೀಮತಿ ಸಂಧ್ಯಾ ಕಜೆ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಇವರು ಖ್ಯಾತ ಆಯುರ್ವೇದಿಕ್ ವೈದ್ಯರಾದ ಶಶಿಧರ ಕಜೆಯವರ ಧರ್ಮಪತ್ನಿ. ಗೃಹಿಣಿಯಾಗಿದ್ದು ಪುತ್ತೂರಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹಳ ಮುತುವರ್ಜಿಯಿಂದ ಭಾಗವಹಿಸುವ ಇವರು ಎಲ್ಲರ ಗಮನ ಸೆಳೆಯುವಂತಹ ವ್ಯಕ್ತಿತ್ವದವರು. ರೋಟರಿ ಇನ್ನರ್ ವೀಲ್ ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಖ್ಯಾತ ಕಜೆ ಮನೆತನದ ಸೊಸೆಯಾಗಿ ಚಿರಪರಿಚಿತರಾಗಿದ್ದಾರೆ. ಮಗಳು ಕು. ಸನ್ನಿಧಿ ಕಜೆ ಎಂ.ಬಿ.ಬಿ.ಎಸ್. ಅಧ್ಯಯನ ಮಾಡುತ್ತಿದ್ದು, ಭರತನಾಟ್ಯದ ವಿದ್ಯಾರ್ಥಿಯೂ ಆಗಿದ್ದಾರೆ.
ಕಲಾವಿದೆ ನವ್ಯಾ ಮೈತ್ರಿ ಕೊಂಡ ಇವರನ್ನು ಕು. ನಿನಾದ ಮತ್ತು ಸಂಧ್ಯಾ ಕಜೆಯವರನ್ನು ಕು. ಮಾನ್ವಿ ಕಜೆ ಪರಿಚಯ ಮಾಡಿದರು. ನಂತರ ಕಾಂಭೋಜಿ ತಂಡದ ವಿದ್ಯಾರ್ಥಿಗಳಾದ ಕು. ಮಂದಿರಾ ಕಜೆ, ಕು. ಲಾಸ್ಯ ಸಂತೋಷ್, ಕು. ಆವನಿ ವೈ., ಕು. ಸೋನು ಹಾಗೂ ಕು. ವೈಭವೀಲಕ್ಷ್ಮಿ ಪ್ರೇಕ್ಷಕರಿಗೆ ದಶಾವತಾರ ಹಸ್ತಗಳ ಬಗ್ಗೆ ಮಾಹಿತಿ ನೀಡಿದರು.
ಶ್ವೇತಾ ಪ್ರಚಂಡೆಯವರ ಶಿಷ್ಯೆಯಾದ ನವ್ಯಾ ಮೈತ್ರಿ ಕೊಂಡ ಅವರಿಂದ ಅದ್ಭುತ ನೃತ್ಯ ಕಾರ್ಯಕ್ರಮ ನಡೆಯಿತು. ಬಹಳ ಅಚ್ಚುಕಟ್ಟಾದ, ಭರತನಾಟ್ಯದ ವಳವೂರು ಸಂಪ್ರದಾಯದಲ್ಲಿ ಶುದ್ಧತೆಯನ್ನು ಉಳಿಸಿಕೊಂಡು ಮಾಡಿದ ನೃತ್ಯ ಬಂಧಗಳು ಪ್ರೇಕ್ಷಕರ ಮನಸೂರೆಗೊಂಡವು.
ನವ್ಯಾ ಮೈತ್ರಿ ಕೊಂಡ:
ನವ್ಯಾ ಮೈತ್ರಿ ಕೊಂಡ ಇವರು ಭರತನಾಟ್ಯದ ಕ್ರಮಬದ್ಧವಾದ ಕಲಿಕೆಯನ್ನು ಶ್ರೀಮತಿ ದೀಪಾ ಮಹಾದೇವನ್ ಇವರಿಂದ ಮತ್ತು ಅದರಲ್ಲಿ ಉನ್ನತ ಶಿಕ್ಷಣವನ್ನು ಚೆನ್ನೈ ಯ ಶ್ವೇತಾ ಪ್ರಚಂಡೆ ಇವರಿಂದ ಪಡೆಯುತ್ತಿದ್ದಾರೆ. ಜೊತೆಗೆ ಅನೇಕ ಕಾರ್ಯಾಗಾರಗಳಲ್ಲಿ ವಿಶ್ವ ಶ್ರೇಷ್ಟ ಮಟ್ಟದ ಕಲಾವಿದರಿಂದ ತರಬೇತಿಯನ್ನು ಪಡೆದುಕೊಂಡಿರುವ ಇವರು ವಿಶೇಷವಾಗಿ ಶ್ರೀಮತಿ ಪ್ರಿಯದರ್ಶಿನಿ ಗೋವಿಂದ ಅವರಿಂದ ಏಕ ವ್ಯಕ್ತಿ ಹಾಗೂ ಸಮೂಹ ನೃತ್ಯ ಪ್ರಸ್ತುತಿಗಳಲ್ಲಿ ಪಳಗಿದ್ದಾರೆ. ಇವರು ಯುನೆಸ್ಕೋದ ಅಂತರಾಷ್ಟ್ರೀಯ ನೃತ್ಯ ಕೌನ್ಸಿಲ್ ನ ಸದಸ್ಯೆಯಾಗಿದ್ದು, ತಮ್ಮ ನರ್ತನರಂಗ ಪ್ರಸ್ತುತಿಗಳನ್ನು ವಿಶ್ವದ ಆರು ದೇಶಗಳಲ್ಲಿ ಮಾತ್ರವಲ್ಲದೆ ತಮ್ಮ ಜನ್ಮ ಭೂಮಿಯಾದ ಯು.ಎಸ್.ಎ. ಯ ಜನರಲ್ ಅಸಂಬ್ಲಿಯಲ್ಲಿ ಮತ್ತು ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅವರು 2022ನೇ ವರ್ಷದ ನಾರದ ಗಾನ ಸಭಾದ ನಾಟ್ಯ ಸಂಗ್ರಹಂ ಇಲ್ಲಿಯ ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿಶೇಷ ವಿದ್ಯಾರ್ಥಿನಿಯಾಗಿದ್ದು, ಕಲಾ ಕೇಂದ್ರ ಪ್ರಸ್ತುತ ಪಡಿಸಿದ ಗುರು ಪ್ರಿಯದರ್ಶಿನಿ ಗೋವಿಂದ್ ಅವರ ಲರ್ನಿಂಗ್ ಲ್ಯಾಡರ್ (ಹಂತಾನುಹಂತದ ಅಭಿನಯ ಕಲಿಕಾ ಸರಣಿ) ನಲ್ಲಿ ತಮ್ಮ ವೈಶಿಷ್ಟ್ಯತೆಯನ್ನು ಮೆರೆದಿದ್ದಾರೆ. ಅಭಿನಯದಲ್ಲಿ ಹೆಚ್ಚಿನ ಪ್ರೌಢಿಮೆಯನ್ನು ಪಡೆಯುತ್ತಿರುವ ಇವರು ಭರತನಾಟ್ಯದಲ್ಲಿ ಪ್ರಮಾಣಪತ್ರವನ್ನು ಅಲಗಪ್ಪ ಆರ್ಟ್ ಆಕಾಡೆಮಿಯಿಂದ ಪಡೆದಿದ್ದಾರೆ. ನೃತ್ಯಕ್ಕೆ ಹೊರತಾಗಿ ಅಮೇರಿಕಾದ ಸ್ಟಾನ್ ಫೋರ್ಡ್ ಯುನಿವರ್ಸಿಟಿಯಿಂದ ಪದವಿಯನ್ನು ಪಡೆದಿದ್ದಾರೆ. ಇವರು ಚೆನ್ನೈ ಯ ಪ್ರತಿಷ್ಠಿತ ಸಭಾಗಳಲ್ಲಿ ಪ್ರಮುಖವಾದ ಶ್ರೀ ತ್ಯಾಗರಾಜ ಬ್ರಹ್ಮಗಾನ ಸಭಾದ ನೃತ್ಯಾಂಜಲಿ, ಅನುಷಂ ಆರ್ಟ್ಸ್ ಅಕಾಡೆಮಿ ನಡೆಸುವ ಉತ್ಸವ ಇತ್ಯಾದಿ ಅನೇಕ ಸಭಾ ವೇದಿಕೆಗಳಲ್ಲಿ, ಅಮೇರಿಕಾದ ರಿಚ್ ಮಂಡ್, ಕ್ಯಾಲಿಫೋರ್ನಿಯಾ ಇತ್ಯಾದಿ ಪ್ರತಿಷ್ಠಿತ ವೇದಿಕೆಗಳಲ್ಲಿ ನಡೆದ ವಿವಿಧ ಉತ್ಸವಗಳಲ್ಲಿ ಏಕವ್ಯಕ್ತಿ ಕಾರ್ಯಕ್ರಮ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿದವರು. ಅಲ್ಲದೆ ಮೆಕ್ಸಿಕೋ, ಇಟೆಲಿ, ಸ್ವಿಜರ್ ಲ್ಯಾಂಡ್, ಪ್ಯಾರಿಸ್ ಹಾಗೂ ಭಾರತದಲ್ಲೂ ಇವರ ನೃತ್ಯ ಪ್ರಸ್ತುತಿಗಳು ಜರಗಿವೆ. ಇವರ ನೃತ್ಯ ಪ್ರಸ್ತುತಿಗಳೆಲ್ಲ ವಿಮರ್ಶಕರ ತುಂಬು ಮೆಚ್ಚುಗೆ ಪಡೆದಿದೆ. ಅಮೇರಿಕಾದಲ್ಲಿ ಜನಿಸಿ ಭಾರತದ ಚೆನ್ನೈಯಲ್ಲಿ ವರ್ಷದ ಆರು ತಿಂಗಳುಗಳನ್ನು ನೃತ್ಯಕ್ಕಾಗಿ ಮೀಸಲಿಟ್ಟ ಅಧ್ಯಯನಶೀಲ ಪ್ರವೃತ್ತಿಯ ಕಲಾವಿದೆ ನವ್ಯಾ ಮೈತ್ರಿ ಕೊಂಡ.
ಕಾರ್ಯಕ್ರಮದಲ್ಲಿ ಎಲ್ಲರ ಪರವಾಗಿ ಭಗವಂತನನ್ನು ಪ್ರಾರ್ಥಿಸಿದವರು ಲಹರಿ, ಇಶಿಕಾ, ಅಭಿಜ್ಞಾ, ಮನಿಹ ಮತ್ತು ಪಾವನಿ. ಕು. ವಿಭಾಶ್ರೀ ಗೌಡ ಮತ್ತು ಕು. ಶಮಾಚಂದ್ರ ಕೂಡ್ಲು ನಿರೂಪಿಸಿದರು. ಕು. ವರ್ಷಿಣಿ ಬಂಗೇರ ಮತ್ತು ಶ್ರೀಮತಿ ಆಶ್ರಿತಾ ನವೀನ್ ಸರಳಾಯ ಇವರು ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಮಂಡನೆ ಮಾಡಿದರು.