ಜುಲೈ 16ರಂದು N.R. ಕಾಲೋನಿಯ ರಾಮ ಮಂದಿರದಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಸಂಗೀತದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೆ ಅಪರೂಪದ ರಸಪ್ರಶ್ನೆ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಬೆಳಗ್ಗೆ 10 ಗಂಟೆಗೆ ಪರಿಷತ್ ನ ಅಧ್ಯಕ್ಷರಾದ ಗಾನಕಲಾ ಭೂಷಣ ವಿ| ಡಾ| R.K. ಪದ್ಮನಾಭ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ ಜೂನಿಯರ್ ವಿಭಾಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು ಇದರಲ್ಲಿ ತಲಾ ಇಬ್ಬರ 26 ತಂಡಗಳು ಭಾಗವಹಿಸಿದ್ದವು, ನಂತರ ಸೀನಿಯರ್ ವಿಭಾಗದಲ್ಲಿ 20 ಸಂಗೀತಾರ್ಥಿಗಳು ಭಾಗವಹಿಸಿದ್ದರು. ಇಡೀ ರಸ ಪ್ರಶ್ನೆ ಕಾರ್ಯಕ್ರಮ ಪರಿಪೂರ್ಣವಾಗಿ ಶಾಸ್ತ್ರ ಬದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಲೆ ರೂಪುಗೊಂಡಿದ್ದು ಅತ್ಯಂತ ವಿಶೇಷವಾಗಿತ್ತು, ಅಂತ್ಯಾಕ್ಷರಿ, ರಾಗ – ತಾಳಗಳ ಜ್ಞಾನ, ವಾಗ್ಗೇಯಕಾರರು, ರಚನೆಕಾರರು, ಕೃತಿಗಳು, ವರ್ಣ, ವಾದಕರು ಹಾಗೂ ವಾದ್ಯಗಳು ಹೀಗೆ ಸ್ಪರ್ಧಿಗಳ ಸಂಪೂರ್ಣ ಸಂಗೀತ ಜ್ಞಾನಕ್ಕೇ ಒರೆ ಹಚ್ಚಲಾಯಿತು. ಪ್ರೇಕ್ಷಕರನ್ನು ಒಳಗೊಂಡಂತೆ ಬಂದಿದ್ದ ಎಲ್ಲಾ ಮಕ್ಕಳು ಅಪಾರ ಸಂಗೀತ ಜ್ಞಾನವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಇದನ್ನೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡು ರಸಪ್ರಶ್ನೆ ಯ ಪರಿಕಲ್ಪನೆ ಮಾಡಿದ R.K. ಪದ್ಮನಾಭ ಅವರು ಎಲ್ಲರ ಮೆಚ್ಚುಗೆ ಪಡೆದರು. ಜೊತೆಗೆ ಈ ಕಾರ್ಯಕ್ರಮಕ್ಕೆ ಅವಿರತವಾಗಿ ಶ್ರಮಿಸಿದ ಶಿಷ್ಯ ತಂಡವು ಗುರುಗಳ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯಾಹ್ನದ ಕಾರ್ಯಕ್ರಮವಾಗಿ ಪುಟಾಣಿಗಳಿಂದ ಲಯವಾದ್ಯಗಳ ರಸದೌತಣ ನೆಡೆಯಿತು. ಮೊದಲಿಗೆ ಕೊನ್ನ ಕೋಲು, ನಂತರದಲ್ಲಿ ಮೋರ್ಚಿಂಗ್, ಡೋಲು, ಮೃದಂಗ ಹಾಗೂ ಘಟ ಹೀಗೆ ಎಲ್ಲ ರೀತಿಯ ಲಯವಾದ್ಯಾಗಳನ್ನು ಮಕ್ಕಳು ನುಡಿಸಿದರು.
ಸಂಜೆ ರಸಪ್ರಶ್ನೆ ವಿಜೇತರಿಗೆ ದೊಡ್ಡ ದೊಡ್ಡ ಟ್ರೋಫಿ ಗಳೊಂದಿಗೆ ನಗದು ಬಹುಮಾನವನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು. ಅಥಿತಿಗಳಿಂದ ಬಹುಮಾನ ವಿತರಣೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶಾರದಾ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಕನ್ನಡ ದೇವರನಾಮಗಳ ಗಾಯನ ನಡೆದರೆ ಜೊತೆ ಜೊತೆಯಲ್ಲೇ ಅದಕ್ಕೆ ಪೂರಕವಾದ ಮ್ಯಾಜಿಕ್ ಶೋ ವನ್ನು M.D. ಕೌಶಿಕ್ ಅವರು ನಡೆಸಿಕೊಟ್ಟರು. ಒಟ್ಟಿನಲ್ಲಿ ಭಾನುವಾರ ಇಡೀ ದಿನ ಸಂಗೀತಾಭಿಮಾನಿಗಳು ಅಪರೂಪದ ಕಾರ್ಯಕ್ರಮಗಳಿಂದ ಹೊಸರೀತಿಯ ಅನುಭವವನ್ನು ಸವಿದರು.
- ಅರ್ಚನಾ ಶಂಕರ್