ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ 135ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ‘ಸಿರಿಗನ್ನಡಂ ಗೆಲ್ಗೆ ರಾ. ಹ. ದೇಶಪಾಂಡೆ’ ಪ್ರಶಸ್ತಿ ಎಂದೇ ಪ್ರಸಿದ್ಧವಾಗಿರುವ ‘ಸಿರಿಗನ್ನಡಂ ಗೆಲ್ಗೆ ರಾಮಚಂದ್ರ ಹಣಮಂತ ರಾವ ದೇಶಪಾಂಡೆ ಪ್ರಶಸ್ತಿ’ ಪ್ರದಾನ ಸಮಾರಂಭವು 27 ಜುಲೈ2024ರಂದು ಧಾರವಾಡದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಿತು.
ಪ್ರಸಕ್ತ ಸಾಲಿನ ಪ್ರಶಸ್ತಿ ಸ್ವೀಕರಿಸಿದ ಡಾ. ನಾ. ಮೊಗಸಾಲೆ ಮಾತನಾಡಿ “ಕರ್ನಾಟಕ ವಿದ್ಯಾವರ್ಧಕ ಸಂಘ ರಾಜ್ಯದ ಎಲ್ಲಾ ಸಂಸ್ಥೆಗಳಿಗೆ ತವರು ಮನೆ. ಸಂಘ ಸ್ಥಾಪನೆ ಮಾಡಿದ ರಾ. ಹ. ದೇಶಪಾಂಡೆಯವರ ಕಾರ್ಯ ಮಾದರಿಯಾಗಿದೆ. ಡಾ. ಪಾಟೀಲ ಪುಟ್ಟಪ್ಪ ಹಾಗೂ ಹಾ. ಮಾ. ನಾಯಕ ಮಾತನಾಡಿದರೆ ಸರಕಾರ ಎಚ್ಚೆತ್ತುಕೊಳ್ಳುತ್ತಿತ್ತು. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವನ್ನು ಸರಕಾರಗಳು ಮಾಡಬೇಕು. ಕಾಸರಗೋಡಿನ ಜನತೆಯ ಬಗ್ಗೆ ಪಾಟೀಲ ಪುಟ್ಟಪ್ಪನವರಿಗೆ ವಿಶೇಷ ಕಾಳಜಿ ಇತ್ತು. ಕರಾವಳಿ ಭಾಗದಲ್ಲಿ ಕನ್ನಡ ರಕ್ಷಣೆ ಮಾಡುವ ಕೆಲಸವನ್ನು ನನ್ನ ಉಸಿರು ಇರುವ ತನಕ ಮಾಡುತ್ತೇನೆ. ಕನ್ನಡ ನಾಡು- ನುಡಿ ರಕ್ಷಣೆಗೆ ಶ್ರಮಿಸಿದವರನ್ನು ಗುರುತಿಸಿ ‘ಸಿರಿಗನ್ನಡಂ ಗೆಲ್ಗೆ ರಾ. ಹ. ದೇಶಪಾಂಡೆ ಪ್ರಶಸ್ತಿ’ ನೀಡುತ್ತಿರುವುದು ಶ್ಲಾಘನೀಯ.” ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಪ್ರಶಸ್ತಿ ಪ್ರದಾನ ಮಾಡಿದರು. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಹಾಗೂ ಸಾಹಿತಿಗಳಾದ ಡಾ. ಬಸು ಬೇವಿನಗಿಡದ ಅಭಿನಂದನಾ ನುಡಿಗಳನ್ನಾಡಿದರು. ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕರಾದ ಡಾ. ವಾಚಸ್ಪತಿಶಾಸ್ತ್ರಿ ಜೋಶಿ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ವಿಶ್ವೇಶ್ವರಿ ಹಿರೇಮಠ, ಮಾಲತಿ ಪಟ್ಟಣಶೆಟ್ಟಿ, ಶಂಕರ ಹಲಗತ್ತಿ ಉಪಸ್ಥಿತರಿದ್ದರು.