ಮಡಿಕೇರಿ: ಡಾ.ವಾಮನ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊಡಗು ಜಿಲ್ಲಾ ಕನ್ನಡ ಭವನ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಅಗ್ರಗಣ್ಯ ಸಾಹಿತಿ, ಇತಿಹಾಸ ಶಿಕ್ಷಕ ಮತ್ತು ಸಂಶೋಧಕರಾದ ಬೇಕಲ ರಾಮ ನಾಯಕರ ಬದುಕು ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮ ದಿನಾಂಕ 27 ಏಪ್ರಿಲ್ 2025ರಂದು ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಚಂದ್ರಹಾಸ ಎಂ. ಬಿ. ಚಿತ್ತಾರಿ ಮಾತನಾಡಿ “ಬೇಕಲ ರಾಮ ನಾಯಕರದ್ದು, ಸಾಹಿತ್ಯ ಸರಸ್ವತಿಯ ಮನಸ್ಸು. ಅವರ ನಿಸ್ವಾರ್ಥ ಸಾಹಿತ್ಯ ಸೇವೆಯು ಸಾರ್ವಕಾಲಿಕ ಆದರ್ಶ, ಸರ್ವರೂ ಒಂದಾಗಿ, ಸಹಬಾಳ್ವೆ ನಡೆಸಬೇಕೆಂಬ ಅರ್ಪಣಾ ಮನೋಭಾವ ಅವರ ಕೃತಿಗಳಲ್ಲಿವೆ. ಈ ಎಲ್ಲಾ ಕೃತಿಗಳೂ ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ವರದಾನ” ಎಂದು ಹೇಳಿದರು. ಸಾಮಾಜಿಕ ಮುಖಂಡ ಡಾ. ಕೆ. ಎನ್.ವೆಂಕಟ್ರಮಣ ಹೊಳ್ಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಡಾ.ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಸಹಿತ ಅನೇಕ ಮಂದಿ ಪುಷ್ಪಾರ್ಚನೆ ಮಾಡಿದರು. ನಿವೃತ್ತ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಪತ್ತಿನ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾದ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಮಾತನಾಡಿ “ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ಜತೆಗೆ ದುಪ್ಪಟ್ಟು ವೇಗದಲ್ಲಿ ಕನ್ನಡವನ್ನು ಬೆಳಸಬೇಕಾದ ಅಗತ್ಯವಿದೆ. ಹೊಸ ಜನಾಂಗದಲ್ಲಿ ಕನ್ನಡದ ಭಾಷಾ ಪ್ರೇಮ ಅರಳಿಸುವ ನಿಟ್ಟಿನಲ್ಲಿ ನಂಘಟನೆಯು ಯಶಸ್ವೀ ಹೆಜ್ಜೆಯನ್ನು ಇರಿಸಿದೆ. ಬಹಳಷ್ಟು ಮಂದಿ ಕನ್ನಡದ ಯುವ ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಹೇಳಿದರು.
ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ನೋಮು ಎನ್. ಹಿಪ್ಪರಗಿ, ಕೊಡಗು ಕನ್ನಡ ಭವನದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ, ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಎಂ. ಎ. ರುಬೀನಾ, ಮುಖಂಡರಾದ ಚಂದನ್ ನಂದರಬೆಟ್ಟು, ಅರುಣ್, ಲೋಹಿತ್ ಎಂ. ಆರ್., ಗಿರೀಶ್ ಪಿ. ಎಂ ಚಿತ್ತಾರಿ, ಪ್ರಕಾಶಕಿ ನಂದ್ಯಾರಾಣಿ ಟೇಚರ್, ಕಾಸರಗೋಡು ಜಿಲ್ಲಾ ಘಟಕದ ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲ್, ವಸಂತ ಕೆರೆಮನೆ, ರಾಜೇಶ್ ಕೋಟೆಕಣಿ ಇದ್ದರು. ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿ ಸಯ್ಯದ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ನಂತರ ಹಿರಿಯ ಸಾಹಿತಿ ಕೆ. ನರಸಿಂಹ ಭಟ್ ಎತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ವನಂತ ಚುಟುಕು ಕವಿಗೋಷ್ಠಿಯಲ್ಲಿ ಕಾಸರಗೋಡು ಹಾಗೂ ಕೊಡಗು ಜಿಲ್ಲೆಯ ಸುಮಾರು 20 ಕವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪ್ರಥಮ ಚುಟುಕು ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅವನಿ ಎಂ. ಬೆಳ್ಳೂರು, ಪೂಜ ಸಿ. ಹೆಚ್ ದೇಲಂಪಾಡಿ, ಕಾವ್ಯ ರಾವ್ ಕಾಸರಗೋಡು, ಗಾಯತ್ರಿ ಪಳ್ಳತ್ತಡ್ಕ, ವೈಶಾಲಿನಿ ಟಿ. ಇವರಿಗೆ ‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು. ಹಿರಿಯ ವತ್ರಕರ್ತ ಪ್ರದೀಪ್ ಬೇಕಲ್ ಇವರಿಗೆ ‘ಬೇಕಲ ರಾಮ ನಾಯಕ ಸಾಹಿತ್ಯ ಪ್ರಶಸ್ತಿ’ ಹಾಗೂ ಸಂಘಟಕ ಮಂಗಳೂರಿನ ಡಾ. ರವೀಂದ್ರ ಜೆಪ್ಪು ಇವರಿಗೆ ‘ಬೇಕಲ ರಾಮ ನಾಯಕ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಧ್ಯಾರಾಣಿ ಟೀಚರ್ ನೇತೃತ್ವದ ಕನ್ನಡ ಭವನ ಪ್ರಕಾಶನದ 7ನೇ ಕೃತಿಯಾದ, ಕವಯತ್ರಿ ಮೇಘಾ ಶಿವರಾಜ್ ಕಾಸರಗೋಡು ಅವರ ‘ಮೌನ ಮಾತಾದಾಗ’ ಕವನ ಸಂಕಲನವನ್ನು ಡಾ. ರವೀಂದ್ರ ಜೆಪ್ಪುಲೋಕಾರ್ಪಣೆ ಮಾಡಿದರು.
ಡಾ. ಕೊಳ್ಚಪ್ಪೆ ಗೋವಿಂದ ಭಟ್ ಕೃತಿ ಪರಿಚಯಿಸಿ, ಸುಭಾಷಿಣಿ ಚಂದ್ರ ಕನ್ನಟಿದ್ವಾರ ಪ್ರಾರ್ಥಿಸಿ, ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು ಸ್ವಾಗತಿಸಿ, ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿ, ಸಂಘಟನೆಯ ಸ್ಥಾಪಕ ಸಂಚಾಲಕರಾದ ಡಾ.ವಾಮನ್ ರಾವ್ ಬೇಕಲ್ ವಂದಿಸಿದದರು.