ಕುಂದಾಪುರ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಚಿಣ್ಣರ ತಾಳಮದ್ದಳೆ ‘ಸಿನ್ಸ್ 1999 ಶ್ವೇತಯಾನ-85’ ಕಾರ್ಯಕ್ರಮ ದಿನಾಂಕ 16 ಡಿಸೆಂಬರ್ 2024ರಂದು ಕುಂದಾಪುರದ ಕುಂದೇಶ್ವರ ದೇಗುಲದಲ್ಲಿ ನಡೆಯಿತು.
ಶ್ರೀಮತಿ ಶ್ಯಾಮಲ ಶ್ರೀ ಲಕ್ಷ್ಮೀಶ ವರ್ಣ ಪ್ರಾಯೋಜಕತ್ವದಲ್ಲಿ ಬೀಜಾಡಿ ರಾಮಚಂದ್ರ ತೌಳ ಸಂಸ್ಮರಣೆ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಕುಂದೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ ಮಾತನಾಡಿ “ಯಕ್ಷಗಾನ ಕಲೆಯನ್ನು ಮಕ್ಕಳ ಮೂಲಕ ಬೆಳೆಸುವುದು ಅತ್ಯಂತ ಸೂಕ್ತ. ಪರಿಶುದ್ಧ ಕನ್ನಡ ಭಾಷೆಯ ಸಾಂಸ್ಕೃತಿಕವಾದ ಈ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಯಶಸ್ವೀ ಕಲಾವೃಂದದ ಕಾರ್ಯ ಶ್ಲಾಘನೀಯವಾದದ್ದು. ಅವಿರತ ಪ್ರಯತ್ನದಿಂದ ಸದಾ ಸಾಗಿ ಬಂದು ಬೆಳ್ಳಿ ಹಬ್ಬವನ್ನು ಆಚರಿಸುವುದು ಸಣ್ಣ ವಿಷಯವಲ್ಲ. ಸಂಸ್ಥೆ ಮಕ್ಕಳ ತಂಡದಿಂದ ಬೆಳವಣಿಗೆ ಸಾಧಿಸಿದೆ. ಸಾಧನೆಗೈದ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರುವಲ್ಲಿ ಸಮಾಜದ ಹೊಣೆಗಾರಿಕೆ ಬಹಳಷ್ಟು ಇದೆ. ಬೀಳದಂತೆ ಪೋಷಿಸಬೇಕಾದದ್ದು ಕಲಾಭಿಮಾನಿಗಳ ಕರ್ತವ್ಯ.” ಎಂದರು.
ಆಡಳಿತ ಮಂಡಳಿಯ ಸದಸ್ಯ ಜಿ. ಎಸ್. ಭಟ್, ಯಕ್ಷಾಭಿಮಾನಿ ಕೇಶವ ಪೈ, ಉದ್ಯಮಿ ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಸುಧನ್ವಾರ್ಜುನ ಕಾಳಗ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.