ಒಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ‘ರಾಣಿ ಅಬ್ಬಕ್ಕ ಬಹುಮುಖಿ ಚಿಂತನೆ’ ಎಂಬ ವಿಷಯದ ಕುರಿತು ಒಂದು ದಿನ ಪೂರ್ತಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ದಿನಾಂಕ 18 ಏಪ್ರಿಲ್ 2025ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ರಾಣಿ ಅಬ್ಬಕ್ಕ ಈ ಮಣ್ಣಿನವಳಾಗಿದ್ದು ಸ್ವಾತಂತ್ರ್ಯಕ್ಕಾಗಿ ಧಾರೆ ಎರೆದಿದ್ದವಳಾಗಿದ್ದರೂ ಕಥೆ, ಕಾವ್ಯ ಗಳಲ್ಲಿ ಬಿಂಬಿತವಾದದ್ದು ಅತೀ ಕಡಿಮೆ. 1995 ರಲ್ಲಿ ಬಿ. ಸಿ. ರೋಡಿನ ಸಂಚಯಗಿರಿಯಲ್ಲಿ ಆರಂಭಗೊಂಡ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಿಂದ ಅಬ್ಬಕ್ಕ ಹೆಚ್ಚು ಪ್ರಚಾರಕ್ಕೆ ಬಂದಿದ್ದಾಳೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
ವಿದ್ವಾಂಸ ಡಾ. ರುಡೊಲ್ಫ್ ನೊರೊನ್ ಇವರು ಪೋರ್ಚುಗೀಸ್ ದಾಖಲೆಯಲ್ಲಿ ಅಬ್ಬಕ್ಕ ಹೇಗೆ ಪ್ರತಿಬಿಂಬಿತವಾಗಿದ್ದಾಳೆ ಎನ್ನುವುದನ್ನು ಪೊರ್ಚುಗೀಸ್ ಬರವಣಿಗೆ ಗಳ ಮುಖಾಂತರ ತಿಳಿಸಿದರು.
ಸಂಸ್ಕೃತಿಕ ಚಿಂತಕ ರಾಜಗೋಪಾಲ್ ಕನ್ಯಾನ ಅವರು ಅಬ್ಬಕ್ಕ ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡ ಬಗೆಯನ್ನು ವಿವರಿಸಿದರೆ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿಯವರು ‘ಬಿಡಿ ಲೇಖನಗಳಲ್ಲಿ ಅಬ್ಬಕ್ಕನ ದಾಖಲಾತಿ’ ಕುರಿತು ಚರ್ಚಿಸಿದರು. ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಇದರ ಸಹಾಯಕ ಪ್ರಾಧ್ಯಾಪಕರಾದ ಚೇತನ್ ಮುಂಡಾಜೆ ಮಾತನಾಡಿದರು. ಪ್ರೊ. ಅಕ್ಷಯ ಕುಮಾರ್ ಮಣೇಲ್ ಇವರು ಅಬ್ಬಕ್ಕನ ಎರಡನೇಯ ರಾಜಧಾನಿ ಮಣೇಲ್‌ನಲ್ಲಿ ಅಳಿದಿರುವ ದಾಖಲೆಗಳ ಕುರಿತು ಚರ್ಚಿಸಿದರೆ, ಚಂದ್ರಹಾಸ ಕಣಂತೂರು ಜಾನಪದದಲ್ಲಿ ಕಾಣಿಸುವ ಅಬ್ಬಕ್ಕನ ಕುರಿತು ಮಾಹಿತಿ ನೀಡಿದರು. ಹೀಗೆ ಅಬ್ಬಕ್ಕನ ಕುರಿತ ಬಹುಮುಖ ವಿಚಾರಗಳು ಸಂವಾದದಲ್ಲಿ ಚರ್ಚೆಗೆ ಬಂದವು. ಇದಕ್ಕೂ ಮುನ್ನ ನಡೆದ ವಿಚಾರಗೋಷ್ಟಿಯಲ್ಲಿ ‘ಉಳ್ಳಾಲದ ಅಬ್ಬಕ್ಕರಾಣಿಯರು, ಐತಿಹಾಸಿಕ ನೆಲೆ’ ಎಂಬ ವಿಚಾರದಲ್ಲಿ ಉಡುಪಿ ಎಂ .ಜಿ. ಎಂ. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮಾಲತಿ ಕೃಷ್ಣಮೂರ್ತಿ ವಿಷಯ – ಮಂಡಿಸಿದರು.
‘ಕಾದಂಬರಿಗಳಲ್ಲಿ ಅಬ್ಬಕ್ಕ ಎಂಬ ವಿಷಯದ ಬಗ್ಗೆ ವಿಶ್ರಾಂತ ಉಪನ್ಯಾಸಕ ಡಾ. ವಿ. ಕೆ. ಯಾದವ ಸಸಿಹಿತ್ಲು, ರಂಗಭೂಮಿಯಲ್ಲಿ ರಾಣಿ ಅಬ್ಬಕ್ಕ ವಿಷಯದಲ್ಲಿ ಐ.ಕೆ. ಬೊಳುವಾರ್, ‘ಜನಮಾನಸದಲ್ಲಿ ರಾಣಿ ಅಬ್ಬಕ್ಕ ಎಂಬ ವಿಷಯದ ಬಗ್ಗೆ ಮಂಗಳೂರು ಎಸ್. ಜಿ. ಸಿ. ಇದರ ವಿಶ್ರಾಂತ ಪ್ರಾಂಶುಪಾಲೆ ಡಾ. ಆಶಾಲತಾ ಸುವರ್ಣ ವಿಷಯ ಮಂಡಿಸಿದರು. ಕೇಂದ್ರದ ಅಧ್ಯಕ್ಷಡಾ.ಪ್ರೊ. ತುಕರಾಮ್ ಪೂಜಾರಿ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ . ವಿಜಯಲಕ್ಷ್ಮೀ ನೇರಳಕೋಡಿ ನಿರೂಪಿಸಿದರು.