ಮಂಗಳೂರು : ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಮಂಗಳೂರು ಸೀನಿಯರ್ ಸಿಟಿಜನ್ಸ್ ಇದರ ಸದಸ್ಯರಾದ ಕೆ. ರಾಧಾಕೃಷ್ಣ ರಾವ್ ಇವರ ಆಯ್ದ ಕಥೆಗಳನ್ನು ಶ್ರೀಮತಿ ರೋಹಿಣಿಯವರು ಸಂಪಾದಿಸಿದ್ದು, ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ “ರಾಯರ ಕಥೆಗಳು” ಎಂಬ ಕಥಾಸಂಕಲನವಾಗಿ ದಿನಾಂಕ 28 ಡಿಸೆಂಬರ್ 2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕರ್ಣಾಟಕ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಭಟ್ ಕೃತಿ ಲೋಕಾರ್ಪಣೆಗೊಳಿಸಿದರು.
ಕೃತಿಯ ಕುರಿತಾಗಿ ಪ್ರಕಾಶಕರಾದ ಕಲ್ಲೂರು ನಾಗೇಶ ಮಾತನಾಡಿ “ರಾಧಾಕೃಷ್ಣರು ಆಳವಾದ ಜೀವನಾನುಭವ ಉಳ್ಳವರು. ಅವರ ಕಥೆಗಳನ್ನು ಗಮನಿಸಿದರೆ ಅವರು ಕೇವಲ ಕಥೆಗಾಗಿ ಕಥೆ ಬರೆಯದೆ, ಅವರು ಕಂಡುಂಡ ಅನುಭವಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಬರೆದಿದ್ದಾರೆ. ಅವರ ಕಥೆಗಳು ಹೆಚ್ಚಾಗಿ ಕುಟುಂಬ ಜೀವನದ ಆಗುಹೋಗುಗಳು, ಸಂಸಾರ ನಿರ್ವಹಣೆ, ಸಾಮಾಜಿಕ ಸಂಬಂಧಗಳು ಗಂಡು ಹೆಣ್ಣಿನ ಸಾಮರಸ್ಯ, ವೈರುಧ್ಯ, ಹೀಗೆ ಮಾನವೀಯ ಮೌಲ್ಯಗಳನ್ನು ತಿಳಿಹೇಳುವ ರೀತಿಯಲ್ಲೇ ಸಾಗುತ್ತವೆ. ವಿಜ್ಞಾನ ಪದವೀಧರರಾದರೂ ಅವರು ಸಾಹಿತ್ಯ, ಭಾಷಾ ಶಾಸ್ತ್ರ, ಶಿಕ್ಷಣ, ಸಂಗೀತ, ಕ್ರೀಡೆ ಹೀಗೆ ಬಹುಮುಖಿ ಪ್ರತಿಭಾವಂತರಾಗಿದ್ದರು. ಇವರ ಕಥೆಗಳು ಹಳೆಯದಾದರೂ ಅವುಗಳಲ್ಲಡಗಿದ ಮೌಲ್ಯಗಳು ಮಾತ್ರ ಸಾರ್ವಕಾಲಿಕವಾದುದು. ಕಥಾರೂಪದಲ್ಲಿ ಕೊಟ್ಟಿರುವ ಕೆಲವು ಘಟನೆಗಳು ಇಲ್ಲಿ ನೈಜವಾಗಿ ಘಟಿಸಿದಂತೆಯೂ ಭಾಸವಾಗುತ್ತದೆ. ಆದ್ದರಿಂದ ಕಥೆಗಳು ನಮ್ಮಲ್ಲಿ ಲವಲವಿಕೆ ಮೂಡಿಸುತ್ತವೆ, ನಮ್ಮನ್ನು ಚಿಂತನೆಗೆ ಹಚ್ಚುತ್ತವೆ, ಉಪನಿಷತ್ತುಗಳ ಮೌಲ್ಯಗಳನ್ನು ನೆನಪಿಸುತ್ತದೆ.” ಎಂದರು.
ಕರ್ಣಾಟಕ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಮಹಾಬಲೇಶ್ವರ ಭಟ್ ಮಾತಾಡಿ “ಕೆ ರಾಧಾಕೃಷ್ಣ ರಾಯರು ಕರ್ಣಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಅವರು ವೃತ್ತಿ ಬದ್ಧತೆಯಿಂದ ಕೆಲಸ ಮಾಡುವುದನ್ನು ಕಂಡಿದ್ದೆ. ಆದರೆ ಅವರೊಳಗೊಬ್ಬ ತತ್ವಜ್ಞಾನಿ ಇದ್ದರೆಂಬುದು ಅವರ ಕಥೆಗಳನ್ನು ಓದಿದಾಗಲೇ ಗೊತ್ತಾಯಿತು, ಅವರ ಕಥೆಗಳನ್ನು, ಅದು ಸಾರುವ ಸಂದೇಶಗಳನ್ನು ನಾವು ತಿಳಿಯಬೇಕು, ಅದಕ್ಕಾಗಿ ಅವರ ಕೃತಿಯನ್ನು ಓದುವುದು ಮಾತ್ರ ಅಲ್ಲ ಸಮಾಜದಲ್ಲಿ ಜನಪ್ರಿಯ ವಾಗುವಂತೆಯೂ ನೋಡುವುದು ನಮ್ಮ ಜವಾಬ್ದಾರಿ.” ಎಂದರು. ಅವರ ಕೃತಿ ಪ್ರಕಟಣೆಗೊಳ್ಳುವಂತೆ ಮುತುವರ್ಜಿ ವಹಿಸಿದ ಅವರ ಮಕ್ಕಳು, ಸೊಸೆಯಂದಿರು ಮತ್ತು ಕುಟುಂಬದ ಪ್ರೋತ್ಸಾಹವನ್ನು ಕೊಂಡಾಡಿದರು.
ಕೃತಿ ಲೋಕಾರ್ಪಣೆಯ ಮೊದಲು ಡಾ. ಸುರಬ್ಜಿತ್ ಚಕ್ರವರ್ತಿ ಇವರಿಂದ ಆರೋಗ್ಯ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಆಧುನಿಕ ರೋಗಗಳ ಕಾರಣ, ಪರಿಹಾರ ಮತ್ತು ಅವು ಬರದಂತೆ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
‘ರಾಯರ ಕಥೆಗಳು’ ಕೃತಿಯ ಸಂಪಾದಕಿ ಶ್ರೀಮತಿ ರೋಹಿಣಿಯವರು ಉಪಸ್ಥಿತರಿದ್ದರು. ಮಂಗಳೂರು ಸೀನಿಯರ್ ಸಿಟಿಜನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಶಶಿಧರ್ ಕಾರ್ಯಕ್ರಮ ನಿರ್ವಹಿಸಿ, ರಾಧಾಕೃಷ್ಣ ರಾವ್ ಅವರ ಮಗಳು ಸುಮಂಗಳಾ ಧನ್ಯವಾದ ಅರ್ಪಿಸಿ ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.