ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಆಯೋಜಿಸಿರುವ ‘ರಾಗ ಸುಧಾರಸ -2025’ ಸಂಗೀತ ಮತ್ತು ನೃತ್ಯ ಉತ್ಸವ ಕಾರ್ಯಕ್ರಮವು ದಿನಾಂಕ 13ರಿಂದ 20 ಡಿಸೆಂಬರ್ 2025ರವರೆಗೆ ಕಾಸರಗೋಡಿನ ಶ್ರೀ ಎಡನೀರು ಮಠ ಮತ್ತು ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 13 ಡಿಸೆಂಬರ್ 2025ರಂದು ಸಂಜೆ ಗಂಟೆ 4-15ಕ್ಕೆ ಮಂಗಳೂರಿನ ವಿದುಷಿ ರಶ್ಮಿ ಸರಳಾಯ ಇವರ ಮಗಳು ಬೇಬಿ ಧ್ರುವಿ ಚಿದಾನಂದ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಲಲಿತ ಕಲಾ ಪೋಷಕ ಮಣಿ ಪ್ರಶಸ್ತಿ’ಯನ್ನು ವಿದ್ವಾನ್ ವಿಠಲರಾಮ ಮೂರ್ತಿ ಇವರಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್ ವಿಠಲರಾಮ ಮೂರ್ತಿ ಅಂತಾರಾಷ್ಟ್ರೀಯ ಪಿಟೀಲುವಾದಕ, ಉನ್ನತ ಶ್ರೇಣಿಯ ಆಕಾಶವಾಣಿ, ದೂರದರ್ಶನ ಕಲಾವಿದರಾದ ನಿಡ್ಲೆಯ ಕರುಂಬಿತ್ಲು ವಿಠಲ ರಾಮಮೂರ್ತಿಯವರು ಲಾಲ್ಗುಡಿ ಬಾನಿಯನ್ನು ಮುಂದುವರಿಸುತ್ತಿರುವ ಹೆಸರಾಂತ ಕಲಾವಿದರು. ನೂರಾರು ಶಿಷ್ಯರನ್ನು ತರಬೇತುಗೊಳಿಸಿದ ಅತ್ಯುತ್ತಮ ಸಹವಾದಕರೂ ಹಾಗೂ ಸೋಲೋ ಕಲಾವಿದರು. ಪ್ರಪಂಚದಾದ್ಯಂತ ತಮ್ಮ ವಾದನದ ಇಂಪನ್ನು ಪಸರಿಸುವ ಇವರು ತನ್ನ ಊರಾದ ನಿಡ್ಲೆಯ ಕರುಂಬಿತ್ತಿಲ್ ನಲ್ಲಿ ಪ್ರತೀ ವರ್ಷ ನಡೆಸುವ ಸಂಗೀತ ಶಿಬಿರದಲ್ಲಿ 300ಕ್ಕೂ ಅಧಿಕ ಸಂಗೀತ ವಿದ್ಯಾರ್ಥಿಗಳು ನಾಡಿನ ಹೆಸರಾಂತ ಕಲಾವಿದರಿಂದ ತರಬೇತಿ ಪಡೆಯುತ್ತಿರುವುದು ಸ್ತುತ್ಯರ್ಹ. 5-30 ಗಂಟೆಗೆ ವಿದ್ವಾನ್ ವಿಠಲರಾಮ ಮೂರ್ತಿ ಮತ್ತು ಶ್ರೀಹರಿ ವಿಠಲ್ ಇವರ ವಯೊಲಿನ್ ವಾದನಕ್ಕೆ ಬೆಂಗಳೂರಿನ ವಿ. ಪ್ರವೀಣ್ ಇವರು ಮೃದಂಗಂನಲ್ಲಿ ಹಾಗೂ ಬಿ.ಎಸ್. ರಘುನಂದನ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ.
ಸಂಗೀತ ವಿದ್ವಾನ್ ಖಂಡಿಗೆ ಜೇನುಮೂಲೆ ಕೃಷ್ಣ ಭಟ್ ಕಾಸರಗೋಡು ಜಿಲ್ಲೆಯ ನೀರ್ಚಾಲು ಗ್ರಾಮದ ಖಂಡಿಗೆ ಜೇನುಮೂಲೆ ದಿ. ಶಾಮ ಭಟ್ಟ ಮತ್ತು ಸರಸ್ವತಿ ಅಮ್ಮನವರ ಸುಪುತ್ರರು. ಇವರು ವಯೊಲಿನ್, ಹಾಡುಗಾರಿಕೆ, ಹಾಗೂ ಹಾರ್ಮೋನಿಯಮ್ ವಾದನದಲ್ಲಿ ಪರಿಣಿತರು. ಚೆಂಬೈ ವೈದ್ಯನಾಥ ಭಾಗವತರ್ ಇವರ ನೇರ ಶಿಷ್ಯರಾದ ವಿದ್ವಾನ್ ಎಮ್.ಜಿ. ಭಾಗವತರ್ ಇವರ ಶಿಷ್ಯರು. ಕೇರಳ ಮತ್ತು ಕರ್ನಾಟಕ ಹಲವೆಡೆಗಳಲ್ಲಿ ಹಾಡುಗಾರಿಕೆ ಮತ್ತು ವಯೊಲಿನ್ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕೃಷ್ಣ ಭಟ್ಟರು ‘ಮಧುಪುರನಾಥ’ ಎಂಬ ಅಂಕಿತನಾಮದೊಂದಿಗೆ ನೂರಕ್ಕೂ ಹೆಚ್ಚು ಕೃತಿ, ಕೀರ್ತನೆ, ವರ್ಣ, ತಿಲ್ಲಾನಗಳನ್ನು ರಚಿಸಿರುತ್ತಾರೆ. ಇವರಿಗೆ ‘ಹಿರಿಯ ಸಾಧಕ ಪ್ರಶಸ್ತಿ’ಯನ್ನು ಪ್ರಧಾನ ಮಾಡಲಾಗುವುದು.
ದಿನಾಂಕ 14 ಡಿಸೆಂಬರ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಶ್ರೀವರ್ಚಸ್ ಇವರ ಹಾಡುಗಾರಿಕೆಗೆ ಪುತ್ತೂರಿನ ಅನುಶ್ರೀ ಮಾಲಿ ಇವರು ವಯೊಲಿನ್ ಮತ್ತು ತಮನ್ ಅಕ್ಕಡ್ಕ ಇವರು ಮೃದಂಗಂನಲ್ಲಿ ಹಾಗೂ ಅನುಶ್ರೀ ಮಾಲಿ ಇವರ ಹಾಡುಗಾರಿಕೆಗೆ ಧರ್ಮಸ್ಥಳದ ಸುಪ್ರೀತಾ ವಯೊಲಿನ್ ಮತ್ತು ಶ್ರೀವರ್ಚಸ್ ಮೃದಂಗಂನಲ್ಲಿ ಸಹಕರಿಸಲಿದ್ದಾರೆ. 4-30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಮಾರಿ ಆತ್ರೇಯೀ ಕೃಷ್ಣಾ, ಕುಮಾರಿ ದಿವ್ಯಶ್ರೀ ಭಟ್ ಮತ್ತು ವಿದುಷಿ ಉಮಾಶಂಕರಿ ಟಿ.ಕೆ. ಇವರುಗಳಿಗೆ ‘ಯುವ ಕಲಾಮಣಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. 5-30 ಗಂಟೆಗೆ ಚೆನ್ನೈಯ ಡಾ. ರಾಜ್ ಕುಮಾರ್ ಭಾರತಿ ಇವರ ಹಾಡುಗಾರಿಕೆಗೆ ವಿದ್ವಾನ್ ವಿಠಲರಾಮ ಮೂರ್ತಿ ವಯೊಲಿನ್, ಬೆಂಗಳೂರಿನ ವಿ. ಪ್ರವೀಣ್ ಇವರು ಮೃದಂಗಂನಲ್ಲಿ ಹಾಗೂ ಬಾಲಕೃಷ್ಣ ಭಟ್ ಹೊಸಮನೆ ಇವರು ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ.
ಕುಮಾರಿ ಆತ್ರೇಯೀ ಕೃಷ್ಣಾ ಕಾರ್ಕಳ ಇವರು ಶ್ರೀಮತಿ ಪೂರ್ಣಿಮಾ ಹಾಗೂ ಡಾ. ಯಸ್.ಆರ್. ಅರುಣ್ ಕುಮಾರ್ ಇವರ ಸುಪುತ್ರಿ. ವಿದುಷಿ ಉಮಾಶಂಕರಿ ಮಣಿಪಾಲ, ವಿದ್ವಾನ್ ಯತಿರಾಜ ಆಚಾರ್ಯ ಬಿ.ಸಿ.ರೋಡು ಇವರಲ್ಲಿ ಶಿಷ್ಯ ವೃತ್ತಿ ನಡೆಸಿದ ಆತ್ರೇಯೀ ಕೃಷ್ಣಾ ಪ್ರಸ್ತುತ ಚೆನ್ನೈ ನ ವಿದ್ವಾನ್ ಆರ್.ಕೆ. ಶ್ರೀರಾಮ್ ಕುಮಾರ್ ಹಾಗೂ ವಿದುಷಿ ಅಮೃತಾ ಮುರಳಿ ಇವರಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ. ನಾಡಿನಾದ್ಯಂತ ತಮ್ಮ ಕಛೇರಿಗಳಿಂದ ರಸಿಕರ ಮನಗೆದ್ದಿರುವ ಇವರು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುತ್ತಾರೆ. ತಮ್ಮ ವಿಶೇಷ ಗಾಯನ ಶೈಲಿಯಿಂದ ಈಗಾಗಲೇ ಸಂಗೀತ ರಸಿಕರ ಮನ ಗೆದ್ದಿದ್ದಾರೆ.
ಜಯಶ್ರೀ ಹಾಗೂ ಡಾ. ಕುಮಾರಶ್ಯಾಮ ಇವರ ಪುತ್ರಿಯಾದ ಕುಮಾರಿ ದಿವ್ಯಶ್ರೀ ಭಟ್ ಮಣಿಪಾಲ ಇವರು ವಿದುಷಿ ಉಮಾಶಂಕರಿ ಮಣಿಪಾಲ ಹಾಗೂ ವಿದ್ವಾನ್ ಮಧೂರು ಪಿ. ಬಾಲಸುಬ್ರಮಣ್ಯ ಇವರ ಶಿಷ್ಯೆ. ನಾಡಿನಾದ್ಯಂತ ತಮ್ಮ ವಿದ್ಯುತ್ಪ್ಪೂರ್ಣ ಕಚೇರಿಗಳಿಂದ ಸಂಗೀತ ರಸಿಕರ ಮನೆಗೆದ್ದಿರುವ ದಿವ್ಯಶ್ರೀ ಭಟ್ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ತಮ್ಮ ಇಂಪಾದ ಶಾರೀರದಿಂದ ಜನ ಮೆಚ್ಚುಗೆ ಪಡೆದಿರುವ ಕಲಾವಿದೆ.
ವಿದುಷಿ ಉಮಾಶಂಕರಿ ತೊಟ್ಟೆತ್ತೋಡಿ ಇವರು ಕೇಶವ ಭಟ್ ಹಾಗೂ ಪ್ರೇಮಾ ಕೆ. ಭಟ್ ಇವರ ಪುತ್ರಿ. ವಿದುಷಿ ಸುಮತಿ ಶಂಕರ ಭಟ್ ಬದನಾಜೆ, ವಿದುಷಿ ಲಕ್ಷ್ಮೀ ಐಯ್ಯಂಗಾರ್ ಮಣಿಪಾಲ, ವಿದುಷಿ ಅನುಪಮ ಪೆರುಮುಂಡ ಹಾಗೂ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯ ಉಡುಪಿ ಇವರ ಶಿಷ್ಯೆಯಾದ ಇವರು ವೇದಿಕೆಯ ಕಲಾವಿದೆಯಾಗಿ ಹಾಗೂ ನೂರಾರು ಶಿಷ್ಯರನ್ನು ತರಬೇತುಗೊಳಿಸಿದ ಸಂಗೀತ ಶಿಕ್ಷಕಿ. ಸರಿಗಮ ಭಾರತಿ ಪರ್ಕಳ ಉಡುಪಿ ಇಲ್ಲಿಯ ಸಂಗೀತ ವಿದ್ಯಾಲಯದ ನಿರ್ದೇಶಕಿಯಾಗಿ 25 ವರ್ಷಗಳಿಂದ ಎಲ್ಲಾ ಸಂಗೀತ ಕಲಾವಿದರಿಗೆ ಹಾಗೂ ಇತರ ಕಲೆಗಳಿಗೆ ವೇದಿಕೆ ನೀಡಿ ಮಾದರಿ ಎನಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಉಡುಪಿಯ ರಾಗ ಧನ ಸಂಸ್ಥೆ (ರಿ.) ಕಾರ್ಯದರ್ಶಿಯಾಗಿಯೂ ‘ಸೈ’ ಎನಿಸಿಕೊಂಡಿದ್ದಾರೆ. ಸಂಗೀತ ಕಲಾವಿದೆ, ಶಿಕ್ಷಕಿ ಹಾಗೂ ತಮ್ಮ ಸಂಘಟನಾ ನಿಪುಣತೆಯಿಂದ ಸಂಗೀತ ಹಾಗೂ ಕಲಾ ಕ್ಷೇತ್ರಕ್ಕಾಗಿ ಸದಾ ದುಡಿಯುವ ನಿಸ್ವಾರ್ಥ ಸಾಧಕಿ.
ದಿನಾಂಕ 15 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಪೂರ್ವಿಕಾ ಇವರಿಂದ ಭರತನಾಟ್ಯ, 6-00 ಗಂಟೆಗೆ ಬೆಂಗಳೂರಿನ ಶುಭ ಸಂತೋಷ್ ಇವರ ವೀಣಾ ವಾದನಕ್ಕೆ ಕೃಪಾಲ್ ಸಾಯಿರಾಮ್ ಇವರು ಮೃದಂಗಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 16 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಸುರತ್ಕಲ್ ಉಮೇಶ್ ಇಡ್ಯಾ ಇವರ ಸ್ಯಾಕ್ಸೊಫೋನ್ ವಾದನಕ್ಕೆ ಮಂಗಳೂರಿನ ಅನಿಶಾ ರಾವ್ ವಯೊಲಿನ್ ಮತ್ತು ಕಟೀಲಿನ ಶೈಲೇಶ್ ರಾವ್ ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಬೆಂಗಳೂರಿನ ವಿನಯ್ ಎಸ್.ಆರ್. ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯಿ ಉಪ್ಪಂಗಳ ಇವರು ವಯೊಲಿನ್ ಮತ್ತು ಕೃಷ್ಣಾ ಪವನ್ ಕುಮಾರ್ ಇವರು ಮೃದಂಗಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 17 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ವಿಶ್ವಾಸ್ ಕೃಷ್ಣ ಮತ್ತು ಶ್ರೇಷ್ಟ ಲಕ್ಷ್ಮೀ ಇವರ ವಯೊಲಿನ್ ವಾದನಕ್ಕೆ ಪನ್ನಗ ಶರ್ಮನ್ ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಮಂಗಳೂರಿನ ಪೂರ್ವಿ ಕೃಷ್ಣ ಇವರ ಭರತನಾಟ್ಯಕ್ಕೆ ಮಂಗಳೂರಿನ ವಿದ್ಯಾಶ್ರೀ ರಾಧಾಕೃಷ್ಣ ಇವರ ಹಾಡುಗಾರಿಕೆಯಲ್ಲಿ, ನಿತೀಶ್ ಅಮ್ಮಣ್ಣಾಯ ಕೊಳಲು, ವಿನಯ್ ನಾಗರಾಜನ್ ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 18 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಅಕ್ಷರ ಬಾಲಾಜಿ ಇವರ ಹಾಡುಗಾರಿಕೆಗೆ ಮಂಗಳೂರಿನ ಶ್ರೀವರದಾ ಪಟ್ಟಾಜೆ ಇವರು ವಯೊಲಿನ್ ಮತ್ತು ಮಂಗಳೂರಿನ ಅವಿನಾಶ್ ಬೆಳ್ಳಾರೆ ಇವರು ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಸುನಿಲ್ ಧರ್ಮಸ್ಥಳ ಇವರ ಬಾನ್ಸುರಿ ವಾದನಕ್ಕೆ ಅರ್ಜುನ್ ಕಾಳಿಪ್ರಸಾದ್ ಇವರು ತಬಲಾ ಸಾಥ್ ನೀಡಲಿದ್ದಾರೆ.
ದಿನಾಂಕ 19 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಮಣಿಪಾಲದ ಸ್ವಸ್ತಿ ಎಂ. ಭಟ್ ಇವರ ಹಾಡುಗಾರಿಕೆಗೆ ಅಕ್ಷರ ಬಾಲಾಜಿ ಇವರು ವಯೊಲಿನ್ ಮತ್ತು ಉಡುಪಿಯ ಬಾಲಚಂದ್ರ ಭಾಗವತ್ ಇವರು ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಕುಮಾರಿ ಆತ್ರೇಯೀ ಕೃಷ್ಣಾ ಕಾರ್ಕಳ ಇವರ ಹಾಡುಗಾರಿಕೆಗೆ ಮೈಸೂರಿನ ಶ್ರುತಿ ಸಿ.ವಿ. ಇವರು ವಯೊಲಿನ್ ಮತ್ತು ಬೆಂಗಳೂರಿನ ಅನಿರುದ್ಧ ಎಸ್. ಭಟ್ ಇವರು ಮೃದಂಗಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಪ್ರಚೇತ್ ರಾಮ್ ಕಜೆ ಇವರ ವಯೊಲಿನ್ ವಾದನಕ್ಕೆ ಮೃಣಾಲಿನಿ ಇವರು ಸಿತಾರ್ ಮತ್ತು ಶಶಾಂಕ್ ಸುಬ್ರಹ್ಮಣ್ಯ ಇವರು ಬಾನ್ಸುರಿ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಪುತ್ತೂರಿನ ಡಾ. ಸುಚಿತ್ರಾ ಹೊಳ್ಳ ಇವರ ಹಾಡುಗಾರಿಕೆಗೆ ಕೆ.ಸಿ. ವಿವೇಕ ರಾಜ ಇವರು ವಯೊಲಿನ್, ವಿ.ಆರ್. ನಾರಾಯಣ ಪ್ರಕಾಶ್ ಇವರು ಮೃದಂಗ ಮತ್ತು ಕಾರ್ತಿಕ್ ಭಟ್ ಇನ್ನಂಜೆ ಇವರು ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ.

