ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 12-05-2023ರಂದು ‘ರಾಗರತ್ನ ಮಾಲಿಕೆ -12’ ಶೀರ್ಷಿಕೆಯಡಿಯಲ್ಲಿ ಉತ್ತಮ ಸಂಗೀತ ಕಾರ್ಯಕ್ರಮವೊಂದು ಸಂಪನ್ನಗೊಂಡಿತು. ಮೈಸೂರು ಎ. ಚಂದನ್ ಕುಮಾರ್ ಅವರ ಕೊಳಲು ವಾದನ ಕಛೇರಿಯು ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ ಇವರ ಆತಿಥ್ಯ ಹಾಗೂ ಪ್ರಾಯೋಜಕತ್ವದಲ್ಲಿ ಉಡುಪಿಯ ‘ಉಷಾ ನಿಲಯ’ದಲ್ಲಿ ನಡೆಯಿತು. ಆರಂಭದಲ್ಲಿ ಪುಟಾಣಿ ಕು. ಸ್ತುತಿ ಧೀಮಹಿ ಇವಳಿಂದ ಶ್ರುತಿ ಶುದ್ಧವಾಗಿ ಆತ್ಮವಿಶ್ವಾಸದಿಂದ ಮಾಡಿದ ದೇವರ ಸುತ್ತಿಯ ಬಳಿಕ ರಾಗ ಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀ ಕಿರಣ್ ಹೆಬ್ಬಾರ್ ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ, ಶ್ರೀ ನಿತೀಶ್ ಅಮ್ಮಣ್ಣಾಯ, ಕಲಾವಿದರಾದ ಮೈಸೂರು ಎ. ಚಂದನ್ ಕುಮಾರ್ ಡಾ. ಉದಯ ಶಂಕರ್ ಎಲ್ಲರೂ ಜತೆಗೂಡಿಕೊಂಡು ದೀಪ ಪ್ರಜ್ವಲನೆ ಮಾಡಿದರು.
ವಿದ್ವಾನ್ ಮೈಸೂರು ಎ.ಚಂದನ್ ಕುಮಾರ್ _ಕೊಳಲುವಾದನ, ವಯೊಲಿನ್ _ವಿದ್ವಾನ್ ಮತ್ತೂರು ಆರ್.ಶ್ರೀನಿಧಿ ಬೆಂಗಳೂರು, ಮೃದಂಗ _ಶ್ರೀ ಅನಿರುದ್ಧ್ ಯಸ್.ಭಟ್ ಬೆಂಗಳೂರು, ಖಂಜೀರ _ಶ್ರೀ ಸುನಾದ ಆನೂರು ಬೆಂಗಳೂರು
ಪ್ರಾರ್ಥನೆ:ಕು.ಸ್ತುತಿ ಧೀಮಹಿ
ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿಯವರು ಬಂದಂತಹ ಕಲಾರಸಿಕರನ್ನು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದ ಬಳಿಕ ಕಾರ್ಯಕ್ರಮವು ಆರಂಭಗೊಂಡಿತು. ಮೂರು ಗಂಟೆಗಳ ಕಾಲ ಕೊಳಲು ವಾದನ ಕಛೇರಿಯು ನಡೆದದ್ದು ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು ಮಾತ್ರವಲ್ಲ ವಿದ್ವತ್ ಪೂರ್ಣ ಕಛೇರಿ ಇದಾಗಿತ್ತು.
ರಾಗ ಧನ ಸಂಸ್ಥೆಯು ದಿನಾಂಕ 26-06-2022ರಲ್ಲಿ ‘ರಾಗರತ್ನ ಮಾಲಿಕೆ’ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮವು ದಿನಾಂಕ 12-05-2023ರಂದು ನಡೆದ ಹನ್ನೆರಡನೆಯ ಸಂಗೀತ ಕಛೇರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಧನ್ಯತಾ ಭಾವವನ್ನು ಮೂಡಿಸಿತ್ತು. ಬೇರೆ ಬೇರೆ ಕಲಾವಿದರು, ವೈವಿಧ್ಯಮಯ ರಾಗಗಳು ಪ್ರಮುಖ ರಾಗವೂ ಬೇರೆ ಬೇರೆಯೇ ಆಗಿತ್ತು. ಕಲಾರಸಿಕರೂ, ಹೊಸಬರು, ವಿವಿಧ ಜಾಗಗಳು ಹೀಗೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆದದ್ದು ಈ ಸಂಸ್ಥೆಯ ವಿಶೇಷತೆ. ಸ್ಥಳೀಯರು, ಹಿರಿಯರು, ಪುಟಾಣಿಗಳು ಊರಿನವರು, ಪರ ಊರಿನವರು, ಕರ್ನಾಟಕ ಸಂಗೀತ ಹಿಂದೂಸ್ಥಾನೀ ಗಾಯನ, ವಾದನ – ಹೀಗೇ ಎಲ್ಲಾ ಕಲಾ ಪ್ರಕಾರಗಳನ್ನು ಹಮ್ಮಿಕೊಂಡಿರುವುದು ರಾಗ ಧನ ಸಂಸ್ಥೆಯ ಹೆಗ್ಗಳಿಕೆ. ಆತಿಥ್ಯ, ಪ್ರಯೋಜಕತ್ವ ಹಾಗೂ ಸಹ ಪ್ರಯೋಜಕತ್ವವನ್ನು ವಹಿಸಿಕೊಂಡಿರುವ ಎಲ್ಲಾ ಕಲಾ ಪ್ರೇಮಿಗಳನ್ನು ರಾಗ ಧನ ಸಂಸ್ಥೆಯು ಈ ಸಂದರ್ಭದಲ್ಲಿ ಮನಸಾರೆ ಸ್ಮರಿಸುತ್ತದೆ.
- ಉಮಾಶಂಕರಿ, ಕಾರ್ಯದರ್ಶಿ, ರಾಗಧನ ಉಡುಪಿ