ಒಂದು ಸಂಗೀತ ಕಾರ್ಯಕ್ರಮ ಅತಿಯಾದ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದ್ದರೆ ಕೇಳುವವರಿಗೆ ಒಂದು ಮಟ್ಟದ
ರಂಜನೆಯನ್ನು ಕೊಟ್ಟೀತು. ಆದರೆ ಅದರಿಂದ ಮೆದುಳಿಗೆ ಯಾವುದೇ ಆಹಾರ ದಕ್ಕಲಾರದು. ಕೆಲವು ಬಾರಿ ಅತಿಯಾದ ಬೌದ್ಧಿಕ
ವ್ಯಾಪಾರವಿದ್ದರೆ ಶೋತೃ ವರ್ಗ ರಂಜನೆಗೆ ಒಳಗಾಗುವ ಬದಲು ಕೇಳಿ ದಣಿಯುತ್ತದೆ. ಬುದ್ಧಿ ಮತ್ತು ಭಾವ ಎರಡೂ ನೆಲೆಗಳಿಗೂ
ಕೂಡ ಸರಿಯಾದ ಆಹಾರವಿದ್ದರೆ ಕೇಳುಗನು ಆನಂದ ಪಡುವಂತೆ ಆಗುತ್ತದೆ. ದಿನಾಂಕ 17 ಜೂನ್ 2023ರಂದು ಪರ್ಕಳದ ಡಾ.
ಕೃಷ್ಣಮೂರ್ತಿ ಭಟ್ ಅವರ ಮನೆಯಲ್ಲಿ ನಡೆದ ರಾಗಧನ ಗೃಹ ಸಂಗೀತ ಮಾಲಿಕೆಯ ಸಂಗೀತ ಕಚೇರಿಯಲ್ಲಿ ಇಂಥದೊಂದು
ಸೊಗಸಾದ ಕಾರ್ಯಕ್ರಮವನ್ನು ಸವಿಯುವ ಅವಕಾಶ ಕೇಳುಗರಿಗೆ ಒದಗಿತು. ಶ್ರೀಮತಿ ಕಾಂಚನ ಶ್ರೀರಂಜಿನಿ ಹಾಗೂ ಶ್ರೀಮತಿ ಕಾಂಚನ ಶ್ರುತಿರಂಜನಿ ಇವರ ದ್ವಂದ್ವ ಕರ್ನಾಟಕ ಸಂಗೀತ ಕಾರ್ಯಕ್ರಮ ಒಂದು ಸೊಗಸಾದ ಅನುಭವವನ್ನು ಕೊಟ್ಟಿತು.
ಕಳೆದ ಶತಮಾನದ ಪ್ರಾರಂಭದಿಂದಲೂ ಕಾಂಚನ ಎನ್ನುವುದು ಕರ್ನಾಟಕದ ತಿರುವಯ್ಯಾರು ಎಂದೇ ಪ್ರಸಿದ್ಧ. ಖ್ಯಾತ
ಪಿಟೀಲು ವಾದಕ ಕಾಂಚನ ಸುಬ್ಬರತ್ನಂ ಅವರ ಮಕ್ಕಳಾದ ಇವರು ಅವಧಾನ ಪಲ್ಲವಿಯಲ್ಲಿಯೂ ಸಿದ್ಧಹಸ್ತರು. ಗೌಳರಾಗದ ‘ಶ್ರೀ ಮಹಾಗಣಪತಿ ರವತುಮಾಂ’ ಕೃತಿಯಿಂದ ಕಾರ್ಯಕ್ರಮವು ಪ್ರಾರಂಭಗೊಂಡಿತು. ತುಸು ಸ್ವರಪ್ರಸ್ತಾರ, ಸ್ವಲ್ಪ ನೆರವಲ್ ಇವುಗಳ ಮೂಲಕವೇ ಕೃತಿಗಳನ್ನು ನಿರೂಪಿಸುತ್ತಿದ್ದುದು ಕುತೂಹಲಕಾರಿಯಾಗಿತ್ತು. ಕಾನಡ ರಾಗದ ‘ಮಾಮವ ಸದಾ ಜನನಿ’ ಸಣ್ಣಮಟ್ಟದಲ್ಲಿ ಮತ್ತು ಖಮಾಸ್ ರಾಗದ ‘ಸೀತಾಪತೀ’ ತುಸು ವಿಸ್ತಾರವಾಗಿ ನಿರೂಪಿತಗೊಂಡಿತು. ಹಂಸಾನಂದಿ ರಾಗದ ‘ಪಾವನ ಮಾಳ್ಪುದು’ ಕೀರ್ತನೆ ಆಕರ್ಷಣೀಯವಾಗಿತ್ತು. ಇವರು ವಿಸ್ತಾರವಾಗಿ ನಿರೂಪಿಸಲು ಆಯ್ದುಕೊಂಡದ್ದು ಮೋಹನ ರಾಗವನ್ನು. ಆಲಾಪನೆಯಲ್ಲಿ ಗ್ರಹ ಭೇದವನ್ನು ತೋರಿಸಿ ಹಿಂದೋಳ ರಾಗವನ್ನು ಸ್ವಲ್ಪ ಮಟ್ಟಿಗೆ ಹಾಡಿದ್ದು ಮುಖ್ಯವಾಗಿತ್ತು. ಇವರು ಆಯ್ದುಕೊಂಡದ್ದು ‘ನನ್ನು ಪಾಲಿಂಪ’ ಕೃತಿಯನ್ನು. ನಂತರ ತನಿಯಲ್ಲಿ ಜಿಎಸ್ ರಾಮಾನುಜಂ ಮೃದಂಗದಲ್ಲಿ ಹಾಗೂ ಕೌಶಿಕ್ ಘಟಂನಲ್ಲಿ ಮಿಂಚಿದರು.
ಅವಧಾನ ಪಲ್ಲವಿಯ ಒಂದು ತುಣುಕನ್ನು ಇವರು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಎಡಗೈಯಲ್ಲಿ 16 ಮಾತ್ರೆ ಸರಿಹೊಂದಿಸಲು ಅವರು ಎರಡು ತಾಳಗಳನ್ನು ಸೇರಿಸಿದ್ದಾರೆ. ಮೊದಲು ರೂಪಕ ನಂತರ ಮಿಶ್ರಝಂಪೆ ಬಲ ಕೈಯಲ್ಲಿ ವಿಳಂಬ ಆದಿತಾಳ ಎರಡರ
ನಡೆಯಲ್ಲಿ ವಾಚಸ್ಪತಿರಾಗದ ಪಲ್ಲವಿಯನ್ನು ಪ್ರಸ್ತುತಪಡಿಸಿ, ನಂತರ ರಾಗ ಮಾಲಿಕೆಯಲ್ಲಿ ಮುಂದುವರೆಸಿದರು. ಅವಧಾನ
ಪಲ್ಲವಿ ಅಪಾರವಾದ ಏಕಾಗ್ರತೆ, ಭೌದ್ಧಿಕ ಕೌಶಲ್ಯ, ಹಾಗೂ ನಿರೂಪಣಾ ವೈವಿಧ್ಯವನ್ನು ಬಯಸುತ್ತದೆ. ಕಲಾವಿದ ಒಂದನ್ನು
ಕಳಕೊಂಡರೂ ಕಾರ್ಯಕ್ರಮ ಏಕತಾನತೆಯಿಂದ ಸೊರಗಬಹುದು. ಆದರೆ ಈ ಕಾರ್ಯಕ್ರಮದಲ್ಲಿ ಹಾಗೆ ಆಗಲಿಲ್ಲ. ಪ್ರಾರಂಭದಿಂದ
ಕೊನೆಯವರೆಗೂ ಕೂಡ ಕಾಂಚನ ಸಹೋದರಿಯರು ಸರಿಯಾದ ಹೋವರ್ಕ್ ಮಾಡಿಕೊಂಡೇ ಕಾರ್ಯಕ್ರಮಕ್ಕೆ ಸಿದ್ಧರಾಗಿದ್ದರು
ಎಂಬುದು ಕಂಡು ಬರುತ್ತಿತ್ತು. ತಮ್ಮ ಪ್ರತಿಭೆಯ ಎಲ್ಲಾ ಮಗ್ಗುಲುಗಳನ್ನು ಸ್ವಲ್ಪ ಸ್ವಲ್ಪವೇ ಸ್ಯಾಂಪಲ್ ತೋರಿಸಿದಂತೆ
ಪ್ರಸ್ತುತಪಡಿಸಿದ್ದು ಕುತೂಹಲಕಾರಿ ಅಂಶ. ಇವರಿಗೆ ವಯೋಲಿನ್ ನಲ್ಲಿ ಉಡುಪಿ ಶ್ರೀಜಿತ್ ಉತ್ತಮ ಸಹಕಾರವನ್ನು ನೀಡಿದ್ದರು.
ಡಾ. ಪಿ.ಬಿ. ಪ್ರಸನ್ನ
ಸಹಪ್ರಾಧ್ಯಾಪಕರು ಕನ್ನಡ
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಅಜ್ಜರಕಾಡು ಉಡುಪಿ -576101.