17 ಏಪ್ರಿಲ್ 2023, ಉಡುಪಿ: ಉಡುಪಿಯ ರಾಗ ಧನ ಸಂಸ್ಥೆಯು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾಗರತ್ನಮಾಲಿಕೆ” 11ನೆಯ ಗೃಹ ಸಂಗೀತ ಮಾಲಿಕೆ ಮಣಿಪಾಲದ ಶ್ರೀ ನಾರಾಯಣ ಭಟ್ ಕಿನಿಲ ಹಾಗೂ ಶ್ರೀಮತಿ ಲೀಲಾ ಭಟ್ ಇವರ ಆತಿಥ್ಯ ಹಾಗೂ ಸಹ ಪ್ರಯೋಜಕತ್ವದಲ್ಲಿ ದಿನಾಂಕ 09-04-2023ರಂದು ಅವರ ಸ್ವಗೃಹ ‘ದೇವೀ ಕೃಪಾ’ದಲ್ಲಿ ನಡೆಯಿತು.
ಪ್ರಧಾನ ಕಚೇರಿಯ ಪೂರ್ವದಲ್ಲಿ ಕೆಲವು ಎಳೆಯರಿಂದ ಅವರಿಗೆ ವೇದಿಕೆಯ ಅನುಭವ ಆಗಲೆಂಬ ಸದಾಶಯದಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು. ಕು. ಸಿಯಾ ಎ. ಬಲ್ಲಾಳ್, ಕು. ಪ್ರಣತಿ ಎಸ್. ಭಟ್, ಕು. ಧೃತಿ ಎಸ್. ಭಟ್, ಕು. ಸ್ವಸ್ತಿ ಎಂ. ಭಟ್, ಕು. ಅಚಲ ಎ. ರಾವ್, ಮಾಸ್ಟರ್ ತೀಕ್ಷಣ್ ಮತ್ತು ಕು. ರೋಶ್ನಿ ಎಸ್. ಶೆಟ್ಟಿ, ಕ್ರಮ ಪ್ರಕಾರವಾಗಿ ಒಂದು ವರ್ಣ, ಒಂದು ಕೃತಿ, ಒಂದು ದೇವರನಾಮ ಪಕ್ಕ ವಾದ್ಯಗಳೊಂದಿಗೆ ಅಚ್ಚುಕಟ್ಟಾಗಿ ಹಾಡಿ ಶ್ರೋತೃಗಳ ಮೆಚ್ಚುಗೆ ಪಡೆದರು.
ಆರಂಭದಲ್ಲಿ ಪ್ರಾರ್ಥನೆಯನ್ನು ಡಾ. ರಶ್ಮಿ ನಾಯಕ್ ಇವರು ಗಜಾನನಯುತಂ ಕೃತಿಯನ್ನು ಅಚ್ಚುಕಟ್ಟಾಗಿ ಹಾಡಿದರು. ರಾಗಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀ ಕಿರಣ್ ಹೆಬ್ಬಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆತಿಥ್ಯ ಮತ್ತು ಸಹಪ್ರಾಯೋಜಕತ್ವ ವಹಿಸಿದ ಶ್ರೀ ನಾರಾಯಣ ಭಟ್ ಕಿನಿಲ, ಶ್ರೀಮತಿ ಲೀಲಾ ಭಟ್, ಡಾ.ಶಿವಶಂಕರ್, ಶ್ರೀಮತಿ ಸುಧಾ, ಕಾರ್ಯದರ್ಶಿ ಉಮಾಶಂಕರಿ ಜೊತೆಗೂಡಿದರು
ಪ್ರಧಾನ ಕಛೇರಿಯನ್ನು ನೀಡಿದವರು ಶ್ರೀಮತಿ ರೋಶ್ನಿ ಉಪಧ್ಯಾಯ ತುಸುವೇ ಘನವಾದ ಉತ್ತಮವಾದ ಕಂಠ ಸಿರಿ. ನಾಯಕಿ ವರ್ಣದ ನಂತರ ಬಹುದಾರಿ ರಾಗದಲ್ಲಿ ಪ್ರಣವ ಖಮಾಚ್ ರಾಗದಲ್ಲಿ ಬ್ರೋಚೇವಾರೆವರುರಾ, ಗೌರಿ ಮನೋಹರಿ ರಾಗದಲ್ಲಿ ಗುರುಲೇಖ ನೇರ ಪ್ರಸ್ತುತಿಗಳಲ್ಲದೆ ಹಿಂದೋಳ ರಾಗದಲ್ಲಿ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ರಚನೆ ಓಂ ನಮೋ ಭಗವತಿ ಶ್ರೀರಂಜನಿ ರಾಗದಲ್ಲಿ ಸೊಗಸುಗಾಮೃದಂಗತಾಳಮು ಕೃತಿಗಳು ಆಲಾಪನೆ, ನೆರವಲ್, ಸ್ವರ ಪ್ರಸ್ತಾರಗಳಿಂದ ಕೂಡಿದ್ದವು.
ಪ್ರಧಾನ ರಾಗ ಶುಭಪಂತೂವರಾಳಿ, ಟಿ. ಚೌಡಯ್ಯ ಅವರ ರಚನೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದರು. ಗಾಯಕಿ ಶಾರೀರಕ್ಕೆ ಅನುಗುಣವಾಗಿ ಮತ್ತು ಅವರ ಬಾನಿಗೆ ನಯವಾಗಿ ಹೊಂದಿಕೊಂಡಿದ್ದು, ಸಾಕಷ್ಟು ವಿರಾಮಗಳಿಂದ ಕೂಡಿದ್ದು ಹಾಡಲಾದ ಆಲಾಪನೆ, ಕೃತಿ ಪ್ರಸ್ತುತಿ, ನೆರವಲ್ ಮತ್ತು ಸ್ವರ ಎನಿಕೆಗಳು ಸಭಿಕರ ಮುಕ್ತ ಪ್ರಶಂಸೆಗೆ ಪಾತ್ರವಾದವು. ಕೆಲವು ಲಘು ಪ್ರಸ್ತುತಿಗಳು ಮತ್ತು ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಕಲಾವಿದೆ ತಮ್ಮ ಆಲಾಪನೆ ಮತ್ತು ನೆರವಲ್ ನ್ನು ಇನ್ನೂ ಸಾವಕಾಶವಾಗಿ ವಿಸ್ತರಿಸಿದರೆ ರಾಗ ಮಾಧುರ್ಯ ಇನ್ನಷ್ಟು ವ್ಯಕ್ತವಾಗುತ್ತಿತ್ತು ಎನಿಸಿತು. ಈಗಾಗಲೇ ಹಲವಾರು ಶ್ರೇಷ್ಟ ಗಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವ ವಯೊಲಿನ್ ಕಲಾವಿದೆ ಕು. ತನ್ಮಯಿ ಉಪ್ಪಂಗಳ ಮತ್ತು ಮೃದಂಗ ಕಲಾವಿದರಾದ ಶ್ರೀ ಬಾಲಚಂದ್ರ ಭಾಗವತ್ ಈ ಕಛೇರಿಗೆ ಹೆಚ್ಚಿನ ಕಳೆಯನ್ನು ನೀಡಿದ್ದಾರೆ ಮತ್ತು ಅದರ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ.
ರಾಗ ಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀ ಕಿರಣ್ ಹೆಬ್ಬಾರ್ ಅವರು ಕಚೇರಿಯ ಒಟ್ಟಂದದ ಬಗ್ಗೆ ಆಪ್ಯಾಯಮಾನವಾಗಿ ಮಾತನಾಡಿದರು. ವಿದುಷಿ ಶ್ರೀಮತಿ ಸರೋಜ ಆರ್. ಆಚಾರ್ಯ, ಶ್ರೀ ಕೆ.ಆರ್. ರಾಘವೇಂದ್ರ ಆಚಾರ್ಯರು, ಖಜಾಂಜಿಯವರಾದ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಆತಿಥ್ಯ ಮತ್ತು ಸಹ ಪ್ರಯೋಜಕತ್ವವನ್ನು ವಹಿಸಿರುವ ಶ್ರೀ ನಾರಾಯಣ ಭಟ್ ಕಿನಿಲ ಇವರ ಸುಪುತ್ರ ಡಾ. ಶಿವಶಂಕರ ಹಾಗೂ ಶ್ರೀಮತಿ ಸುಧಾ ಶಿವಶಂಕರ ಉಪಸ್ಥಿತರಿದ್ದರು. ಸಮಯಕ್ಕೆ ಸರಿಯಾಗಿ ಹೊಂದಾಣಿಸಿಕೊಂಡು ಕಾರ್ಯಕ್ರಮವನ್ನು ನಿರೂಪಣೆ ಮಾಡಿರುವ ರಾಗ ಧನ ಸಂಸ್ಥೆಯ ಕಾರ್ಯದರ್ಶಿ ವಿದುಷಿ ಶ್ರೀಮತಿ ಉಮಾಶಂಕರಿ ಅವರನ್ನು ಹಾಗೂ ಅವರ ಪತಿ ಡಾ. ಉದಯಶಂಕರ್ ಅವರನ್ನು ಶ್ರೀ ನಾರಾಯಣ ಭಟ್ ದಂಪತಿಗಳು ಗೌರವಿಸಿದರು. ಬಾಲ ಕಲಾವಿದರ ಗಾಯನ ಪ್ರಸ್ತುತಿಯನ್ನು ಸ್ಪರ್ಧಾ ರೂಪದಲ್ಲಿ ನಡೆಸಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವು ಕು. ಪ್ರಣತಿ ಎಸ್. ಭಟ್ ಇವಳ ಪಾಲಿನದ್ದಾದರೆ, ದ್ವಿತೀಯ ಬಹುಮಾನವು ಕು. ಸ್ವಸ್ತಿ ಎಂ. ಭಟ್ ಇವಳು ಪಡೆದಿರುತ್ತಾಳೆ. ತೃತೀಯ ಬಹುಮಾನವು ಕು. ಸಿಯಾ ಪಡೆದಿರುತ್ತಾಳೆ. ಈ ಸ್ಪರ್ಧೆಗೆ ತೀರ್ಪುಗಾರಗಾಗಿ ವಿದುಷಿ ಶ್ರೀಮತಿ ಸರೋಜ ಆರ್. ಆಚಾರ್ಯ, ಶ್ರೀ. ಕೆ.ಆರ್. ರಾಘವೇಂದ್ರ ಆಚಾರ್ಯ, ಶ್ರೀ ಅವಿನಾಶ್ ಮಳಿ ಸಹಕರಿಸಿದರು.
- ಸರೋಜ ಆರ್. ಆಚಾರ್ಯ ಉಡುಪಿ.