1 ಏಪ್ರಿಲ್ 2023, ಮಂಗಳೂರು: ರಾಗತರಂಗ ಮಂಗಳೂರು ವತಿಯಿಂದ ಝೇಂಕಾರ -23 ಹಾಗೂ ಗುರುವಂದನೆ ಕೊಡಿಯಾಲಬೈಲ್ ಶಾರದಾ ವಿದ್ಯಾಲಯದಲ್ಲಿ ದಿನಾಂಕ 26-03-2023ರಂದು ನಡೆಯಿತು.
ಬಾಲಪ್ರತಿಭಾ ಹಾಗೂ ನಿನಾದ ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡಿತು. ಗುರುವಂದನ ಕಾರ್ಯಕ್ರಮದಲ್ಲಿ ಹಿರಿಯ ಭರತನಾಟ್ಯ ಗುರುಗಳಾದ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಟ್ಯಾಚಾರ್ಯರು “ಕಲಾವಿದರಿಗೆ ಕಲೆಗಳ ಮೂಲಕ ನೀಡುವ ಪ್ರೀತಿ ಪೂರ್ವಕ ಗೌರವವು ಅತ್ಯಮೂಲ್ಯವಾದುದು. ಶಾಸ್ತ್ರೀಯ ನೃತ್ಯದ ಬಗ್ಗೆ ಅಧ್ಯಯನ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕರನ್ನು ತಯಾರು ಮಾಡಿದ್ದೇನೆ. ರಾಜ್ಯದ ವಿವಿಧ ಭಾಗಗಳ ವಿದ್ವಾಂಸರು ದಕ್ಷಿಣ ಕನ್ನಡ ಜಿಲ್ಲೆ ಶಾಸ್ತ್ರೀಯ ನೃತ್ಯದಲ್ಲಿ ಉತ್ತಮ ಸ್ಥಾನ ಪಡೆದಿದೆ ಎಂದು ಹೇಳುವಾಗ ನನ್ನ ಜೀವನ ಸಾರ್ಥಕ ಎಂಬ ಭಾವನೆ ಬಂದಿದೆ” ಎಂದರು.
ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರಾಗತರಂಗದ ಬಗ್ಗೆ ಅಭಿಮಾನವನ್ನು ತೋರಿದರು. ಡಾ. ದೇವರಾಜ್ ಮಾತನಾಡುತ್ತಾ ರಾಗತರಂಗದ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಆಶಾ ಹೆಗ್ಡೆಯವರು “ಪ್ರತೀಯೊಂದು ಮಗುವೂ ಸಹಾ ಬೇಸಿಗೆ ಶಿಬಿರದ ಪ್ರಯೋಜನವನ್ನು ಪಡೆಯುವುದರೊಂದಿಗೆ ವೇದಿಕೆ ಮೇಲೆಯೂ ಬರಬೇಕೆಂಬುದೇ ರಾಗತರಂಗದ ಆಶಯ” ಎಂದರು. ಉಪಾಧ್ಯಕ್ಷೆ ಜಯಾ ರಾವ್, ಕೋಶಾಧಿಕಾರಿ ಪಿ.ಸಿ. ರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಶ್ರೀ ಅರವಿಂದ, ಸುಮಾ ಪ್ರಸಾದ್, ಚಂದ್ರಶೇಖರ್ ಆಚಾರ್, ಜಯಪ್ರಕಾಶ ಶೆಟ್ಟಿ, ಗೀತಾ ವಿ. ಮೈಂದನ್, ಪುಷ್ಪಾ ಜೋಗಿ ಉಪಸ್ಥಿತರಿದ್ದರು. ಬಳಿಕ ವಿದುಷಿ ರಾಜಶ್ರೀ ಉಳ್ಳಾಲ ಅವರ ಶಿಷ್ಯರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ನಿಕಟಪೂರ್ವ ಅಧ್ಯಕ್ಷ ವಾಮನ ಮೈಂದನ್ ಪ್ರಸ್ತಾವಿಕ ಮಾತುಗಳನ್ನಾಡಿದರು.
ಉಪಾಧ್ಯಕ್ಷರಾದ ಜನಾರ್ದನ ಹಂದೆ ಸ್ವಾಗತಿಸಿ, ಕಾರ್ಯದರ್ಶಿ ಸುಜಾತಾ ಅಶೋಕ್ ವಂದಿಸಿದರು. ಪೂರ್ಣಿಮಾ ರಾವ್ ಮತ್ತು ರೂಪಾ ವಾಸುದೇವ ಕಾರ್ಯಕ್ರಮ ಸಂಯೋಜಿಸಿ, ಪಲ್ಲವಿ ಪ್ರಭು ಮತ್ತು ಅಮೃತಾ ವಾಸುದೇವ್ ನಿರೂಪಿಸಿದರು.