13 ಏಪ್ರಿಲ್ 2023, ಧಾರವಾಡ: ಧಾರವಾಡ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ರಾಘವೇಂದ್ರ ಪಾಟೀಲ – 72 ಮತ್ತು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ -2022’ ಪ್ರದಾನ ಸಮಾರಂಭವು ಭಾನುವಾರ ದಿನಾಂಕ 16 ಏಪ್ರಿಲ್ 2023ರಂದು ಧಾರವಾಡದ ಸಂಸ್ಕೃತಿ ಸಮುಚ್ಚಯ ಕಟ್ಟಡ, ರಂಗಾಯಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರವಾಢದ ಪ್ರಸಿದ್ಧ ಕಾದಂಬರಿಕಾರರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ವಹಿಸಲಿದ್ದಾರೆ.
ಅಂದು ಪೂರ್ವಾಹ್ನ ಗಂಟೆ 10.15ಕ್ಕೆ ಮೊದಲ ಘಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಪಾಟೀಲರ ‘ತೇರು’ ಕಾದಂಬರಿ ರಚನೆಯಾಗಿ ಇಪ್ಪತ್ತು ವರ್ಷಗಳು ಸಂದಿದ್ದು, ಆ ಕೃತಿಯ ಬಗ್ಗೆ ಎಂ.ಆರ್. ದತ್ತಾತ್ರಿ, ಮತ್ತು ಇಪ್ಪತ್ತೈದು ವರ್ಷಗಳ ಹಿಂದೆ ರಚನೆಯಾದ ‘ಮಾಯಿಯ ಮುಖಗಳು’ ಎಂಬ ಕಥಾ ಸಂಕಲನದ ಬಗ್ಗೆ ಧಾರವಾಡದ ಪ್ರಸಿದ್ಧ ಕನ್ನಡ ಕವಿಗಳಾದ ಆನಂದ ಝುಂಜರವಾಡ ಮಾತನಾಡುತ್ತಾರೆ.
ಪಾಟೀಲರ ಶಿಷ್ಯರೂ, ಪ್ರಸಿದ್ಧ ಉದ್ಯಮಿಗಳೂ ಆದ ಡಾ.ಪ್ರಭಾಕರ ಬಿ.ಸಿ. ಇವರು ‘ನನ್ನ ಮೇಷ್ಟ್ರು ಆರ್.ಬಿ.ಪಿ.’ ಕೃತಿಯ ಬಗ್ಗೆ ಮಾತನಾಡುತ್ತಾರೆ. ಪಾಟೀಲರ ‘ದೇಸಗತಿ’ ಸಂಕಲನದ ಕತೆಗಳನ್ನು ಆಂಗ್ಲ ಭಾಷೆಗೆ ಪಾಟೀಲರೇ ಅನುವಾದ ಮಾಡಿದ ‘ಇನ್ ದ ಡೋಮೇನ್ ಆಫ್ ವೈಟ್ ಹೆರಾನ್ಸ್’ ಕೃತಿಯ ಲೋಕಾರ್ಪಣೆಯಾಗಲಿದೆ ಮತ್ತು ಶ್ರೇಷ್ಟ ವಿಮರ್ಶಕರಾದ ಕುಮಟಾದ ಡಾ. ಎಂ.ಜಿ. ಹೆಗಡೆ ಇವರು ಕೃತಿಯ ಅವಲೋಕನ ಮಾಡಲಿದ್ದಾರೆ.
ಕಾರ್ಯಕ್ರಮದ ಎರಡನೆಯ ಘಟ್ಟ ನಾಟಕ. ಪ್ರಸಿದ್ಧ ರಂಗಕರ್ಮಿ ಶ್ರೀ ಮಹಾದೇವ ಹಡಪದ ಅವರ ಆಟ–ಮಾಟ ತಂಡ ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಕಥಾನಕದ 116ನೆಯ ರಂಗರೂಪದ ಪ್ರಯೋಗವನ್ನು ರಂಗದ ಮೇಲೆ ಆಡಿ ತೋರಿಸಲಿದ್ದಾರೆ.
ಮಧ್ಯಾಹ್ನ ಭೋಜನ ವಿರಾಮದ ನಂತರ ಮೂರನೇ ಘಟ್ಟ ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ – 2022’ರ ಪ್ರದಾನ. ಪ್ರಶಸ್ತಿ ಪುರಸ್ಕೃತರು ಶ್ರೀ ಮಹಾಂತೇಶ ನವಲಕಲ್ಲ, ಕಲಬುರ್ಗಿ ಮತ್ತು ಶ್ರೀ ಶ್ರೀಲೋಲ ಸೋಮಯಾಜಿ, ಕೋಟ, ಉಡುಪಿ. ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
ರಾಘವೇಂದ್ರ ಪಾಟೀಲರ ಬಗ್ಗೆ :
ಕನ್ನಡದ ಅಗ್ರಗಣ್ಯ ಬರಹಗಾರರಲ್ಲಿ ಒಬ್ಬರಾದ ಇವರು 16-04-1951ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮಲ್ಲಾಡಿ ಹಳ್ಳಿಯ ಅನಾಥ ಸೇವಾಶ್ರಮ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾಗಿ 38 ವರ್ಷಗಳು ಮತ್ತು ಅದೇ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಪಾಟೀಲರಿಗಿದೆ.
‘ಒಡಪುಗಳು’, ‘ಪ್ರತಿಮೆಗಳು’, ‘ದೇಸಗತಿ’, ‘ಮಾಯಿಯ ಮುಖಗಳು’, ‘ಎಷ್ಟು ಕಾಡತಾವ ಕಬ್ಬಕ್ಕೀ’ ಇವು ಕಥಾಸಂಕಲನಗಳು.
‘ಬಾಳವ್ವನ ಕನಸುಗಳು’, ‘ಅಮೃತ ವಾಹಿನಿ’ ಇವು ಕಿರುಕಾದಂಬರಿಗಳು,
‘ತೇರು’, ‘ಗೈರ ಸಮಜೂತಿ’ : ಕಾದಂಬರಿಗಳು.
‘ಎದೆಗೆ ಎದೆ ಮಿಡಿತ’, ‘ಮಧ್ಯಸ್ಥ’, ಮತ್ತು ‘ಮಾತು ಮಾತು ಮಥಿಸಿ’: ವಿಮರ್ಶಾ ಸಂಕಲನಗಳು.
‘ಮಾಯಿಯ ಮುಖಗಳು’, ‘ತೇರು’, ‘ಎದೆಗೆ ಎದೆ ಮಿಡಿತ’ ಎಂಬ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ಅದೇ ‘ತೇರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ‘ತೇರು’ ಕಾದಂಬರಿ ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ‘ಸಂವಾದ’ ಮತ್ತು ‘ಸಮಾಹಿತ’ ಎಂಬ ಪತ್ರಿಕೆಯ ಸಂಪಾದಕರಾಗಿ ಕನ್ನಡದಲ್ಲಿ ಉಪಯುಕ್ತ ಸಾಹಿತ್ಯ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.