ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಮತ್ತು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಚಂದಕ್ಕಿ ಬಾರೇ ಕಥೆ ಹೇಳೆ’ ರಜಾ ರಂಗು 2025 ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025ರಂದು ಸೇವಾಸಂಗಮದ ನಿಸರ್ಗದಲ್ಲಿ ಉದ್ಘಾಟನೆಗೊಂಡಿತು.
ಚಿಟ್ಟೆ ಬುತ್ತಿಯನ್ನು ಬಿಚ್ಚಿಡುವ ಮೂಲಕ ಈ ಶಿಬಿರವನ್ನು ಉದ್ಘಾಟಿಸಿದ ರಂಗಕರ್ಮಿ ಡಾ. ಶ್ರೀಪಾದ ಭಟ್ ಇವರು ಮಾತನಾಡಿ “ಕಥೆಯ ಮುಖೇನ ಅನೇಕ ವಿಷಯವನ್ನು ಮಂಡಿಸುವುದಕ್ಕೆ ಸಾಧ್ಯವಾಗುತ್ತದೆ. ಕಥೆಗೆ ದೇಹದ ಪ್ರತೀ ಅಂಗಾಂಗಗಳೂ ಪ್ರಾಮುಖ್ಯ. ದೇಹದ ಯಾವುದೇ ಒಂದು ಅಂಗಾಂಗಳನ್ನು ಉಪಯೋಗಿಸದೇ ಕಥೆ ಹೇಳಿದರೆ ಅದು ಅಷ್ಟು ಸ್ವಾರಸ್ಯಕರವಾಗಿ ಪರಿಣಾಮ ಬೀರುವುದಿಲ್ಲ. ಮಕ್ಕಳ ಚಲನವಲನಗಳಿಗೆ ಮಹತ್ವ ನೀಡಿ ಪರಿಣಾಮಕಾರಿಯಾಗಿ ಸಮಾಜಮುಖಿಯಾಗಿ ಸ್ಪಂದಿಸುವುದಕ್ಕೆ ಕಥೆ ಹೇಳುವ ರೀತಿಯನ್ನು ಅರಿತಿರಬೇಕು. ‘ರಜಾರಂಗು-25’ ಮಕ್ಕಳ ಬೇಸಿಗೆ ಶಿಬಿರವು ಕಥೆಗಳ ಆಧಾರಿತ ಚಿತ್ರ, ನೃತ್ಯ, ಆಟ, ಪಾಠಗಳನ್ನು ಕಲಿಸುತ್ತದೆ” ಎಂದು ಹೇಳಿದರು.
ಶಿಬಿರದ ಮೌಲ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಕಂಡುಕೊಂಡ ರಜಾರಂಗು ಶಿಬಿರ ಜನರ ದೃಷ್ಟಿಯಲ್ಲಿ ಮೌಲ್ಯಯುತವಾದ ಶಿಬಿರವಾಗಿದೆ ಎಂದು ರಂಗ ನಿರ್ದೇಶಕಿ ಸುಧಾ ಮಣೂರು ಮುಖ್ಯ ಅತಿಥಿಯಾಗಿ ಅಭಿಪ್ರಾಯಪಟ್ಟರು. ಶಿಬಿರದ ನಿರ್ದೇಶಕ ರಂಜಿತ್ ಕುಮಾರ್ ಶೆಟ್ಟಿ ಕುಕ್ಕುಡೆ, ಅಶೋಕ್ ಮೈಸೂರು, ಶೀಷ ತೆಕ್ಕಟ್ಟೆ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.