ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಮೇ 14ರಂದು ಬೆಳಿಗ್ಗೆ ‘ರಜಾರಂಗು-ರಂಗ ಮಂಚ’ ಜ್ಞಾನರಂಜನಾ ಶಿಬಿರವನ್ನು ಗುರುಗಳಾದ ಕೊಯಿಕೂರು ಸೀತಾರಾಮ ಶೆಟ್ಟಿ ರಜಾರಂಗು ರಂಗ ಮಂಚ ಗೋಡೆಗೆ ಮಕ್ಕಳೊಂದಿಗೆ ಚಿಟ್ಟೆ ಅಂಟಿಸುವ ಮುಖೇನ ಉದ್ಘಾಟಿಸಿದರು. “ರಜಾರಂಗು ಶಿರೋನಾಮೆಯಡಿಯಲ್ಲಿ ಅನೇಕಾನೇಕ ಸಂಪನ್ಮೂಲ ವ್ಯಕ್ತಿಗಳು ಸಂಪರ್ಕಿಸಿ ದಾಖಲೆಯನ್ನು ಸಾಧಿಸಿದ ಶಿಬಿರವಿದು. ರೋಹಿತ್ ಎಸ್. ಬೈಕಾಡಿ ನೇತೃತ್ವದ ಶಿಬಿರ ಪಕ್ವತೆಯನ್ನು ಸಾಧಿಸುವುದು ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಚಿಣ್ಣರಿಗೆ ಆಟದ ಮೂಲಕ ಪಠ್ಯೇತರ ಚಟುವಟಿಕೆಗಳ ಪಾಠವನ್ನು ಅರಿವಿಲ್ಲದಂತೆಯೇ ಬೋಧಿಸುತ್ತಾ ಮುನ್ನಡೆದು ರಂಗವನ್ನು ಕಲ್ಪಿಸುವ ಕಾರ್ಯವೇ ರಂಗ ಮಂಚವಾಗಿರುತ್ತದೆ. 15 ದಿನಗಳ ನಿರಂತರ ದಿನ ಪೂರ್ತಿ ಮೈಮರೆತು ಒಂದಿಷ್ಟು ಕಲಿತು ಹೊರನಡೆದರೆ ಸಂಸ್ಥೆಯ ಕೆಲಸ ಸಾರ್ಥಕವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ಬದುಕನ್ನು ಕಲಿಸುವ ಶಿಬಿರ ಬೆಳೆದು ಬೆಳೆದು ಇತಿಹಾಸವನ್ನು ಸೃಷ್ಟಿಸಿದೆ. ಹಿಂದಿನ ಅನೇಕ ಶಿಬಿರದಲ್ಲೂ ಹೊಸ ಹೊಸ ಪರಿಕಲ್ಪನೆಯಲ್ಲಿ ಮೈದಳೆದು ಮಕ್ಕಳ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಲ್ಲಿಯ ಸಂಸ್ಥೆ ಆದರ್ಶಪ್ರಾಯವಾಗಿದೆ. ಪೋಷಕರು ಕೆಲವರು ಒತ್ತಾಯಿಸಿದ ಕಾರಣ ತಡವಾಗಿ ಶಿಬಿರ ಆರಂಭಿಸಿದ ಸಂಸ್ಥೆ ಮುಂದಿನ ವರ್ಷ ಅದ್ದೂರಿಯ ಸಡಗರದ ಶಿಬಿರವನ್ನು ಆಯೋಜಿಸುವ ಯೋಜನೆ ಹೊಂದಿದ್ದು ಶಿಬಿರಾರ್ಥಿಗಳಿಗೆ ಸುವರ್ಣಾವಕಾಶವಾಗಲಿದೆ” ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ರೊ. ಸುಧಾಕರ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಗುರುಗಳಾದ ಲಂಬೋದರ ಹೆಗಡೆ, ಶಿಬಿರದ ನಿರ್ದೇಶಕರಾದ ರೋಹಿತ್ ಎಸ್. ಬೈಕಾಡಿ, ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಕು. ಪರಿಣಿತ ವೈದ್ಯ ಪ್ರಾರ್ಥಿಸಿ, ಕು. ಪೂಜಾ ಆಚಾರ್ ಸ್ವಾಗತಿಸಿ, ಕು. ಪಂಚಮಿ ವೈದ್ಯ ವಂದಿಸಿದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಂಗ ನಿರ್ದೇಶಕ ನಾಗೇಶ್ ಕೆದೂರು, ರಂಗ ನಟ ಪುನೀತ್ ಶೆಟ್ಟಿ ಕೋಟ ರಂಗದ ಆಟಗಳನ್ನು ಚಿಣ್ಣರಿಗೆ ಕಲಿಸಿಕೊಟ್ಟರು.