ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ‘ರಜಾರಂಗು-24’ ಮಕ್ಕಳ ಬೇಸಿಗೆ ಶಿಬಿರದ 17ನೇ ದಿನದ ಕಾರ್ಯಕ್ರಮವು ದಿನಾಂಕ 27-04-2024ರಂದು ಕುಂದಾಪುರ ಕೋಡಿಯ ಲೈಟ್ ಹೌಸ್ ಬಳಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಲ ವೀರ ತಂಡದ ಮತ್ಸ್ಯೋದ್ಯಮಿ ಗೋಪಾಲ್ ಕೋಡಿ “ಮರಳು ಶಿಲ್ಪ ವಿಭಿನ್ನ ಕಲೆ. ಸುಂದರ ಸಮುದ್ರ ಸನಿಹದಲ್ಲಿ ಅರಳುವ, ಉರಿ ಬಿಸಿಲಲ್ಲಿದ್ದರೂ ಬಿಸಿಲನ್ನು ನೆನಪಿಸದ ರೀತಿಯಲ್ಲಿ ತನ್ಮಯತೆಗೊಳಪಡಿಸುವ, ಎಷ್ಟೇ ಬಿಸಿಲಿದ್ದರೂ ಗೋಚರಿಸದಂತೆ ತಮ್ಮನ್ನು ಕಲಾ ಲೋಕಕ್ಕೆ ಕೊಂಡೊಯ್ಯುವ ಕಲೆಯಾಗಿದೆ. ಮರಳನ್ನು ಗುಡ್ಡೆ ಮಾಡಿ ಮತ್ಸ್ಯವನ್ನು ಬಿಡಿಸುತ್ತಿದ್ದಂತೆಯೇ ಮಕ್ಕಳು ಹೇಳದೇ ಕೇಳದೇ ತಮ್ಮೊಳಗಿನ ಕಲ್ಪನೆಯನ್ನು ಮರಳ ರಾಶಿಯಲ್ಲಿ ತಮಗೆ ತೋಚಿದಂತೆ ಬಿಡಿಸುತ್ತಾ ಬಿಡಿಸುತ್ತಾ, ಆಮೆ, ಮೀನು, ಹಾವು, ಮಡಿಕೆ ಹೀಗೆ ಹಲವನ್ನು ಮರಳಿಂದ ಅರಳಿಸಿದ ಮಕ್ಕಳ ಉತ್ಸಾಹ ನಿಜಕ್ಕೂ ನಮ್ಮಂತಹ ಹಿರಿಯರಿಗೂ ಸ್ಪೂರ್ತಿ ತರುತ್ತದೆ” ಎಂದು ಅಭಿಪ್ರಾಯಪಟ್ಟರು.
ಮರಳು ಶಿಲ್ಪ ರಚನಾಕಾರ ರವಿ ಹಿರೇಬೆಟ್ಟು, ರಂಗ ನಿರ್ದೇಶಕ ನಾಗೇಶ ಕೆದೂರು, ಅಶೋಕ್ ಮೈಸೂರು, ನಾಗೇಶ ಕೆದೂರು, ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು.