ಮಂಗಳೂರು : ಕಳೆದ 25 ವರ್ಷಗಳಿಂದ ಮಂಗಳೂರು ಕೇಂದ್ರವಾಗಿ ‘ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ, ಸದ್ವಿಚಾರ’ ಎಂಬ ನೆಲೆಯಲ್ಲಿ ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ದೇಶ ವಿದೇಶಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಕಲ್ಲಚ್ಚು ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬ ಪ್ರಯುಕ್ತ ‘ರಜತ ರಂಗು’ ಸಮಾರಂಭವು ದಿನಾಂಕ 05 ಜನವರಿ 2025ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನವಭಾರತ ಸರ್ಕಲ್ ಇಲ್ಲಿರುವ ದಿ ಓಷನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ವಿಶ್ರಾಂತ ಉಪಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಹೊರಬರುವ ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್ ಇವರ ‘ಅನೂಗೂಡುನೂ ಬಾ’ ಕೃತಿಯನ್ನು ಸಾಹಿತಿಗಳಾದ ಡಾ. ಪ್ರಭಾಕರ ನೀರ್ ಮಾರ್ಗ ಬಿಡುಗಡೆಗೊಳಿಸಲಿದ್ದು, ಕಥೆಗಾರರಾದ ಡಾ. ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು ಬೆಂಗಳೂರಿನ ಉದ್ಯಮಿ ಜಯಂತ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿರುವರು. ಕಲ್ಲಚ್ಚು ಪ್ರಕಾಶನದ ಎಲ್ಲ ಲೇಖಕ ಬಳಗ ಹಾಗೂ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರು ಗೌರವ ಆತಿಥಿಗಳಾಗಿ ಪಾಲ್ಗೊಂಡು ರಜತ ರಂಗು ಅಭಿನಂದನೆಗಳನ್ನು ಪಡೆಯಲಿದ್ದು, ಈ ವಿಶೇಷ ಸಂಧರ್ಭದಲ್ಲಿ ಸಾಹಿತ್ಯ ಹಾಗೂ ಪೂರಕ ಕ್ಷೇತ್ರದ ರಾಜ್ಯದ 25 ಪ್ರತಿಭಾವಂತರಿಗೆ ಗೌರವಾರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.