ಮೂಲ್ಕಿ: ಪಾವಂಜೆಯ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಇವರು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಸುವ ‘ರಜತ ಪರ್ವ ಸರಣಿ ಯಕ್ಷಗಾನ ತಾಳಮದ್ದಳೆ ಸಂಧಾನ ಸಪ್ತಕ’ದ ಉದ್ಘಾಟನಾ ಸಮಾರಂಭ ದಿನಾಂಕ 19-07-2023ರಂದು ನಡೆಯಿತು.
ಶ್ರೀಯುತ ಪ.ರಾ.ಶಾಸ್ತ್ರಿಗಳು ಭಾಗವತ ಬಲಿಪ ಶಿವಶಂಕರ ಭಟ್ಟರಿಗೆ ವೀಳ್ಯವನ್ನು ಕೊಡುವ ಮೂಲಕ ಈ ಸಪ್ತಕವನ್ನು ಉದ್ಘಾಟಿಸಿದರು.
ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ರಜತಪರ್ವ ಸರಣಿ ಅಭಿಯಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಶುಭ ಹಾರೈಸಿದರು. ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್ ಕಲಾವಿದರನ್ನು ಗೌರವಿಸಿದರು. ಪ್ರತಿಷ್ಠಾನದ ಸರಣಿ ರಜತ ಪರ್ವದ 98ನೇ ಯಕ್ಷಗಾನ ತಾಳಮದ್ದಳೆ ‘ಸುಗ್ರೀವ ಕೌಶಿಕೆ’ ಪ್ರಸ್ತುತಗೊಂಡಿತು. ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಟ್, ನೆಕ್ಕರೆಮೂಲೆ ಗಣೇಶ್ ಭಟ್ ಹಾಗೂ ಕೌಶಿಕ್ ರಾವ್ ಪುತ್ತಿಗೆ, ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಸುಣ್ಣಂಬಳ ವಿಶ್ವೇಶರ ಭಟ್, ಪವನ್ ಕಿರಣಕೆರೆ, ಹಾಗೂ ದಿನೇಶ್ ಕಾವಳಕಟ್ಟೆ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಯಕ್ಷಧ್ರುವ ಭಾಗವತ ಪಟ್ಲ ಸತೀಶ ಶೆಟ್ಟಿಯವರಿಗೆ “ಯಕ್ಷಗಾನ ಉನ್ನತೀಕರಣ ನೇತಾರ”ಪುರಸ್ಕಾರ ನೀಡಿ ಗೌರವಿಸಲಾಯಿತು.