ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು – ಹಾಸನ ತಾಲೂಕು ಘಟಕದ ವತಿಯಿಂದ ದಿನಾಂಕ 16 ನವೆಂಬರ್ 2025ರ ಭಾನುವಾರದಂದು ಹಾಸನದ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಹತ್ತು ಮಂದಿ ಗಣ್ಯ ಸಾಧಕರಿಗೆ ‘ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿ “ಕನ್ನಡದಲ್ಲಿ ಅಗಾದವಾದ ಸಾಹಿತ್ಯದ ಭಂಡಾರವಿದೆ. ಇಡೀ ವಿಶ್ವದ ಯಾವುದೇ ಭಾಷೆಯಲ್ಲೂ ಕನ್ನಡಕ್ಕೆ ಸರಿಸಾಟಿ ಕಂಡುಬರುವುದಿಲ್ಲ. ಪರಂಪರೆ, ಇತಿಹಾಸ, ಜ್ಞಾನಸಂಪತ್ತಿನ ಮಹಾ ಹೊಳೆ ನಮ್ಮ ಕನ್ನಡ. ಆದರೆ ಈ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ದುರಂತವೆಂದರೆ ಸಾಹಿತ್ಯ ಪರಂಪರೆ, ಮೌಲ್ಯಗಳ ಅರಿವು ಇಲ್ಲದ ಕೆಲವರನ್ನು ನೇತೃತ್ವಕ್ಕೆ ತಂದುಕೊಳ್ಳುವುದು ಮತ್ತು ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆಯ ರಾಜ್ಯಾಧ್ಯಕ್ಷನೇ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವುದು ಬಹುದೊಡ್ಡ ದುರಂತ. ನಾವು ನಡೆಸುತ್ತಿರುವ ಸಾಹಿತ್ಯ ಸೇವೆಗೆ ಸಮುದಾಯವೇ ಶಕ್ತಿ ತುಂಬುತ್ತಾ ಬಂದಿದೆ. ಆದರೆ ಸಾಹಿತ್ಯ ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದಲೇ ನಾವು ನಿಂತಿದ್ದೇವೆ. ಆಸಕ್ತಿ ಮತ್ತು ಮನಸ್ಸು ಇದ್ದರೆ ಸಾಹಿತ್ಯ ಸೇವೆ ಸಾಧ್ಯ” ಎಂದು ಹೇಳಿದರು.

ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್ ಪ್ರಧಾನವಾಗಿ ಮಾತನಾಡಿ “ಕನ್ನಡ ನಾಡಿನಲ್ಲಿ ಕನ್ನಡ ಅನ್ನದ ಭಾಷೆಯಾಗಬೇಕು. ಕನ್ನಡ ಸಾಹಿತ್ಯ ಪರಂಪರೆ ಭವ್ಯತೆಯಿಂದ ಕೂಡಿದೆ. ಕನ್ನಡ ರಾಜ್ಯೋತ್ಸವ ಅನ್ನುವುದಕ್ಕಿಂತಲೂ ಕರ್ನಾಟಕ ರಾಜ್ಯೋತ್ಸವ ಎನ್ನುವುದು ಹೆಚ್ಚು ಅರ್ಥಪೂರ್ಣವಾಗಿದೆ. ಕರ್ನಾಟಕ ಎಂಬ ಭೌಗೋಳಿಕ ಚೌಕಟ್ಟಿನ ಉತ್ಸವದ ಸಂಭ್ರಮಕ್ಕೆ ಕಾಲಮಿತಿಯಿದೆಯೇ ಹೊರತು, ಕನ್ನಡಕ್ಕಲ್ಲ. ಏಕೆಂದರೆ ಕನ್ನಡ ಜಗತ್ತಿನ ಅತಿ ಪುರಾತನ ಭಾಷೆಗಳಲ್ಲಿ ಅಂದಾಗಿದೆ. ಬರೆದಂತೆ ನುಡಿಯುವ, ನುಡಿಯುವಂತೆ ಬರೆಯುವ ಭಾಷೆ ಎಂದರೆ ಅದು ಕನ್ನಡ ಭಾಷೆ. ಅಶೋಕನ ಶಾಸನಗಳಿಂದಲೂ ಕನ್ನಡದ ಬಳಕೆಯಾಗಿರುವುದು ತಿಳಿದು ಬಂದಿದೆ, ಹಲ್ಮಿಡಿ ಶಾಸನ ಪುರಾತನ ಶಾಸನವಾಗಿದೆ. ತಾಳಗುಂದ ಶಾಸನ ಇದಕ್ಕೂ ಮುಂಚೆಯೇ ಇತ್ತು ಎಂಬುದು ಕನ್ನಡಿಗರ ಹಿರಿಮೆಯನ್ನು ಇನ್ನೂ ಹೆಚ್ಚಿಸಿದೆ” ಎಂದರು.
ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ನಾಗರಾಜು ಹೆತ್ತೂರ್, “ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ವರ್ಷವಿಡೀ ಕನ್ನಡ ಚೇತನ ಜೀವಂತವಾಗಿರಬೇಕು. ರಾಜ್ಯೋತ್ಸವ ಅವಾರ್ಡುಗಳು ನಿಜವಾಗಿಯೂ ಅರ್ಹರಿಗೆ, ಸಾಧಕರಿಗೆ ಸಿಗಬೇಕು” ಎಂದು ಅಭಿಪ್ರಾಯಪಟ್ಟರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜು ದೊಡ್ಡಮನಿ ಪ್ರಾಸ್ತಾವಿಕ ಭಾಷಣದಲ್ಲಿ “ಕನ್ನಡಕ್ಕೆ 2300 ವರ್ಷಗಳ ಇತಿಹಾಸವಿದೆ. ಇಂತಹ ಹಿರಿಮೆ ಹೊಂದಿದ ಭಾಷೆಗೆ ಗೌರವ ತರುವ ಕಾರ್ಯಗಳು ಮುಂದುವರಿಯಬೇಕು. ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಉಳಿಯಲು ನಮ್ಮ ವೇದಿಕೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ” ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮವು ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ದೃಷ್ಟಿಯಿಂದ ಮಹತ್ವದ ವೇದಿಕೆಯಾಗಿ ಪರಿಣಮಿಸಿತು. ವೇದಿಕೆಯಲ್ಲಿ ಸಾಹಿತಿ ಶೈಲಜಾ ಹಾಸನ್, ಕವಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರು, ವೇದಿಕೆಯ ರಾಜ್ಯ ಜಂಟಿ ಕಾರ್ಯದಶಿ ನಾಗರಾಜ್ ದೊಡ್ಡಮನಿ, ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್, ಸಮಾಜ ಸೇವಕ ಡಾ. ವಿಜಯಕುಮಾರ್, ಹಾಸನ ತಾಲೂಕಾಧ್ಯಕ್ಷೆ ಕೆ.ಸಿ. ಗೀತಾ, ಆಲೂರು ತಾಲೂಕಾಧ್ಯಕ್ಷ ಕೃಷ್ಣೇಗೌಡ ಮಣಿಪುರ, ಅರಕಲಗೂಡು ತಾಲೂಕಾಧ್ಯಕ್ಷ ಗಂಗೇಶ್ ಬಸವನಹಳ್ಳಿ, ಹೊಳೆನರಸೀಪುರ ತಾಲೂಕಾಧ್ಯಕ್ಷೆ ಕಾವ್ಯಶ್ರೀ ಕೃಷ್ಣ, ಬೇಲೂರು ತಾಲೂಕಾಧ್ಯಕ್ಷ ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮತ್ತು ಹಲವಾರು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ವೇದಿಕೆಯ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್ ನಿರೂಪಿಸಿ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಪ್ರಾರ್ಥಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸ್ವಾಗತಿಸಿ, ವಂದಿಸಿದರು.
