ರಾಯಚೂರು : ಸಮುದಾಯ ರಾಯಚೂರು ಪ್ರಸ್ತುತ ಪಡಿಸುವ ನೂತನ ನಾಟಕ ‘ರಕ್ತ ವಿಲಾಪ’ ಇದರ ಪ್ರಥಮ ಪ್ರದರ್ಶನವು ದಿನಾಂಕ 19-05-2024ರ ಭಾನುವಾರದಂದು ರಾಯಚೂರಿನ ಸಿದ್ದರಾಮ ಜಂಬಲದನ್ನಿ ರಂಗಮಂದಿರದಲ್ಲಿ ಸಂಜೆ ಘಂಟೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ.
ಡಾ. ವಿಕ್ರಮ ವಿಸಾಜಿ ವಿರಚಿತ ಈ ನಾಟಕದ ನಿರ್ದೇಶನವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ಮಾಡಿದ್ದು, ಸಹ ನಿರ್ದೇಶನದಲ್ಲಿ ನಿರ್ಮಲಾ ವೇಣುಗೋಪಾಲ್ ಸಹಕರಿಸಿದ್ದಾರೆ. ಇನ್ಸಾಫ್ ಹೊಸಪೇಟೆ ನಾಟಕಕ್ಕೆ ಸಂಗೀತ ನೀಡಲಿದ್ದು, ಲಕ್ಷ್ಮಣ್ ಮಂಡಲಗೇರ ಬೆಳಕಿನ ವಿನ್ಯಾಸ ಮಾಡಲಿದ್ದಾರೆ. ವೆಂಕಟ ನಾರಸಿಂಹಲು ಕಲಾವಿದರಿಗೆ ಪ್ರಸಾದನ ಮಾಡಲಿದ್ದು, ಎಂ. ಸುರೇಶ್ ಚಿಕ್ಕಸೂಗೂರು ಹಾಗೂ ಎನ್. ನಾಗರಾಜ್ ಸಿರಿವಾರ ರಂಜಸಜ್ಜಿಕೆ ನಿರ್ವಹಿಸಲಿದ್ದಾರೆ.
‘ರಕ್ತ ವಿಲಾಪ’ :
ಕಾಲಗರ್ಭದಿಂದ ಸತ್ಯವನ್ನು ಹೆಕ್ಕಿ ತೆಗೆಯಲು ಹಂಬಲಿಸುವ ಸಂಶೋಧಕನ ತಳಮಳಗಳನ್ನು ‘’ರಕ್ತ ವಿಲಾಪ ನಾಟಕ ಅನನ್ಯವಾಗಿ ಅಭಿವ್ಯಕ್ತಿಸಿದೆ. ಸತ್ಯವೆಂಬ ಅಗ್ನಿದಿವ್ಯವನ್ನು ಹಿಡಿಯಲು ಯತ್ನಿಸಿ ಮೈ ಸುಟ್ಟುಕೊಂಡ ಜ್ಞಾನಿಗಳ ಪರಂಪರೆಯೇ ಲೋಕದಲ್ಲಿದೆ. ಲೋಕವು ತಾನು ಕಟ್ಟಿಕೊಂಡು ಬಂದ ನಂಬಿಕೆಗಳ ಗುಳ್ಳೆಯೊಡೆಯುವುದನ್ನು ಸಹಿಸದು. ಸತ್ಯದ ಸೂಜಿಮೊನೆ ಸುಮ್ಮನಿರುವುದನ್ನು ಅರಿಯದು. ಸತ್ಯವನ್ನು ಕಾಣಲು ಮನಸ್ಸು ಮೊದಲು ಸುಳ್ಳುಗಳಿಂದ ಬಿಡುಗಡೆ ಹೊಂದಬೇಕು. ಸತ್ಯವು ಸ್ವತಃ ಚಲನಶೀಲವಾದಾಗ ಮಾತ್ರ ನಮ್ಮನ್ನು ಜಂಗಮಗೊಳಿಸಬಲ್ಲದು. ಆದರೆ ಅರಿವನ್ನು ತೊರೆದು ಕುರುಹಿನ ಬೆನ್ನು ಹಿಡಿದ ಜನ ಅದನ್ನು ಉಳಿಸಿಕೊಳ್ಳಲು ಹಿಂಸೆಗೆ ಇಳಿದಿದ್ದಾರೆ. ಧರ್ಮ ರಾಜಕಾರಣಗಳ ವಿಕೃತ ಸಂಲಗ್ನದಲ್ಲಿ ದೇವರು ಅವಶೇಷಗಳಡಿಯಲ್ಲಿ ಅಪ್ಪಚ್ಚಿಯಾಗಿದ್ದಾನೆ. ಭಕ್ತರ ಹೆಸರಲ್ಲಿ ವೀರಾವೇಶ ತಾಳಿ ಅಸ್ತ್ರ ಹಿಡಿದವರ ಮೆದುಳು ಕತ್ತಲಾಗಿದ್ದರೆ, ಬೆಳಕನ್ನು ಹುಡುಕುತ್ತಾ ಕಾಲದ ಸುರಂಗ ಮಾರ್ಗದಲ್ಲಿ ಏಕಾಂಗಿ ಅಲೆವ ಸತ್ಯಶೋಧಕ ಸಾವಿನಲ್ಲಿ ಮೌನ ತಾಳಿದ್ದಾನೆ. ಸಮಕಾಲೀನ ಸಂದರ್ಭದ ಸಂವಾದರಾಹಿತ್ಯ ಹಾಗು ಜ್ಞಾನವಲಯದ ಅಂತರ್ವಿರೋಧಗಳನ್ನು ಬಹುಸೂಕ್ಷ್ಮ ಒಳನೋಟದಲ್ಲಿ ಹಿಡಿದಿಡುವ ಸಾಹಸವನ್ನು ಪ್ರಸ್ತುತ ನಾಟಕದಲ್ಲಿ ಮಾಡಲಾಗಿದೆ. ಈ ನಾಟಕ ಹಲವು ಪ್ರಶ್ನೆಗಳೊಂದಿಗೆ ತೀವ್ರವಾಗಿ ಆಲುಗಾಡಿಸುತ್ತ ನಮ್ಮನ್ನು ವಿಹ್ವಲಗೊಳಿಸುತ್ತದೆ.
ಸಮುದಾಯ ರಾಯಚೂರು :
ಕಳೆದ ಸುಮಾರು 40 ವರ್ಷಗಳಿಂದ ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲಿ ಸಮುದಾಯ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜಾಗತೀಕರಣ, ಖಾಸಗೀಕರಣ ಹಾಗೂ ಕೋಮುವಾದದಂತಹ ದುಷ್ಟ ಶಕ್ತಿಗಳು ನಮ್ಮ ಜೀವನದ ಮೌಲ್ಯಗಳನ್ನೇ ಬುಡಮೇಲುಗೊಳಿಸುವ ಹಿನ್ನಲೆಯಲ್ಲಿ ಜನಪರ ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಅವಶ್ಯಕತೆಯಿಂದಾಗಿ ಪುನಃ ಸಂಘಟಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲಿದೆ. ಕಲೆಗಾಗಿ ಕಲೆ ಅಲ್ಲ, ಬದುಕಿಗಾಗಿ ಕಲೆ ಎನ್ನುವ ಧ್ಯೇಯದೊಂದಿಗೆ ರಂಗಭೂಮಿಯನ್ನು ಪ್ರಮುಖ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಿರುವ ಸಮುದಾಯ ಅನೇಕ ಬೀದಿನಾಟಕ, ರಂಗಪ್ರಯೋಗ, ವಿಚಾರ ಸಂಕಿರಣಗಳನ್ನು ರೂಪಿಸುವುದರ ಮೂಲಕ ಜನಸಮುದಾಯದ ಕಷ್ಟಕ್ಕೆ ದನಿಯಾಗಿ ನಿಂತಿದೆ.
ಕನ್ನಡದ ಪ್ರತಿಭಾವಂತ ಯುವ ಬರಹಗಾರರಾದ ವೀರಣ್ಣ ಮಡಿವಾಳ, ರಮೇಶ್ ಆರೋಲಿ ಹಾಗೂ ವಿಕ್ರಮ ವಿಸಾಜಿಯವರ ಚೊಚ್ಚಲ ಕೃತಿಗಳನ್ನು ಹಾಗೂ ರೋಹಿತ್ ವೇಮುಲ ಬದುಕನ್ನಾಧರಿಸಿದ ‘ನಕ್ಷತ್ರದ ಧೂಳು’, ಏನ್. ಕೆ. ಹನುಮಂತಯ್ಯ ಅವರ ಕವಿತೆಗಳನ್ನಾಧರಿಸಿದ ‘ಈ ಕರಿಯ ಬೆನ್ನಲ್ಲಿ’ ಮುಂತಾದ ನಾಟಕಗಳನ್ನು ಈಗಾಗಲೇ ಯಶಸ್ವಿಯಾಗಿ ರಂಗಕ್ಕೆ ತಂದ ರಾಯಚೂರಿನ ಸಮುದಾಯ ತಂಡವು ಈಗ ಡಾ. ವಿಕ್ರಮ ವಿಸಾಜಿಯವರ ಎರಡನೇ ನಾಟಕ ‘ರಕ್ತ ವಿಲಾಪ’ವನ್ನು ರಂಗಪ್ರಯೋಗಕ್ಕೆ ಸಿದ್ಧಪಡಿಸಿ ನಿಮ್ಮೆದುರು ಪ್ರದರ್ಶಿಸಲು ಸಿದ್ಧವಾಗಿದೆ.