ಧಾರವಾಡ : ಮನೋಹರ ಗ್ರಂಥ ಮಾಲಾ ಧಾರವಾಡ ಇದರ ವತಿಯಿಂದ ದಿನಾಂಕ 14 ಜುಲೈ 2025ರಂದು ಮನೋಹರ ಗ್ರಂಥ ಮಾಲಾಅಟ್ಟದ ಮೇಲೆ ‘ರಂ. ಶಾ. ಲೋಕಾಪುರ ಇವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲೇಖಕ ಡಾ. ಕೃಷ್ಣ ಕಟ್ಟಿ “ರಂ. ಶಾ. ಲೋಕಾಪುರ ಅವರು ಪ್ರಸಿದ್ಧಿ, ಪ್ರಚಾರ ಮತ್ತು ಪ್ರಶಸ್ತಿಗಳನ್ನು ಬಯಸಿ ಕೆಲಸ ಮಾಡಲಿಲ್ಲ. ತಮ್ಮದೇ ಆದ ಶಿಸ್ತು ಮತ್ತು ಬದ್ಧತೆಯನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು. ಅವರು ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಅಪಾರವಾದ ಪಾಂಡಿತ್ಯವನ್ನು ಪಡೆದವರಾಗಿದ್ದರು. ಹೀಗಾಗಿ ಅವರ ‘ಜ್ಞಾನೇಶ್ವರಿ’ ಅನುವಾದ ಮತ್ತು ‘ಜ್ಞಾನೇಶ್ವರಿ ಕಾಲದ ಮರಾಠಿ ಭಾಷೆಯ ಮೇಲೆ ಕನ್ನಡದ ಪ್ರಭಾವ’ ಎರಡೂ ಭಾಷೆಯ ವಿದ್ವಾಂಸರ ಮನ್ನಣೆಗೆ ಪಾತ್ರವಾದವು. ಜ್ಞಾನೇಶ್ವರಿ ಅವರ ಮೂವತ್ತು ವರ್ಷ ಶ್ರಮದ ಫಲ. ಬೇಂದ್ರೆಯವರ ಆಶೀರ್ವಾದ ಪಡೆದು, ಕುರ್ತಕೋಟಿ ಅವರ ಜತೆ ಪ್ರತಿ ಹೆಜ್ಜೆಯಲ್ಲೂ ಚರ್ಚಿಸಿದ ಅನುವಾದಿತ ಗ್ರಂಥ.” ಎಂದು ಹೇಳಿದರು.
ಡಾ. ಹ. ವೆಂ. ಕಾಖಂಡಿಕಿ ಅವರು ಮಾತನಾಡುತ್ತಾ “ರಂ. ಶಾ. ಓರ್ವ ತಲಸ್ಪರ್ಶಿ ಅಧ್ಯಯನಶೀಲ ಸಂಶೋಧಕರಾಗಿದ್ದರು. ಅವರ ‘ಜ್ಞಾನೇಶ್ವರಿ’ ಅನುವಾದ ಬರೀ ಅನುವಾದವಾಗದೇ ಹಲವಾರು ಮಹತ್ವದ ಟಿಪ್ಪಣಿಗಳು ಸಹಿತ ಕೂಡಿಕೊಂಡಿವೆ. ಅವರ ‘ಸಾವಿತ್ರಿ’, ‘ತಾಯಿ ಸಾಹೇಬ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಪ್ರಶಸ್ತಿ ಪಡೆದವು. ಕನ್ನಡದಿಂದ ಮರಾಠಿ ಭಾಷೆಗೆ ಮತ್ತು ಮರಾಠಿಯಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ಮನೋಹರ ಗ್ರಂಥಮಾಲೆ ಸಹ ಅವರ ಹಲವು ಕೃತಿಗಳನ್ನು ಪ್ರಕಟಿಸಿದೆ” ಎಂದರು.
ಡಾ. ಶಶಿಧರ ನರೇಂದ್ರ ಮಾತನಾಡಿ “ಅವರು ಪ್ರಚಾರ ಬಯಸಲಿಲ್ಲ ಎನ್ನುವುದು ನಿಜವಾದರೂ ಅವರ ಸಮಗ್ರ ಸಾಹಿತ್ಯವನ್ನು ನಾವು ಸಂವಾದ, ಗೋಷ್ಠಿಗಳ ಮೂಲಕ ಅಧ್ಯಯನ ಮಾಡಬೇಕು” ಎಂದು ಹೇಳಿದರು. ವಿಶ್ವನಾಥ ಕೋಳಿವಾಡ, ಸಮೀರ ಜೋಶಿ, ಆನಂದ ಭಟ್, ವಿ.ಎಮ್. ಮುನವಳ್ಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.