ಬೆಂಗಳೂರು : ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರ ವತಿಯಿಂದ ‘ರೂಪಾಂತರ’ ತಂಡದವರಿಂದ ಸಂತ ಕವಿ ಕನಕದಾಸರ ಅನನ್ಯ ಕಾವ್ಯ ಆಧಾರಿತ ‘ರಾಮಧಾನ್ಯ’ ನಾಟಕ ಪ್ರದರ್ಶನವನ್ನು ದಿನಾಂಕ 17 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಡಾ. ರಾಮಕೃಷ್ಣ ಮರಾಠೆ ಇವರು ರಚನೆ ಮಾಡಿದ್ದು, ದೇಸಿ ಮೋಹನ್ ಇವರು ಸಂಗೀತ ನೀಡಿದ್ದು, ಕೆ.ಎಸ್.ಡಿ.ಎಲ್. ಚಂದ್ರು ಇವರು ನಿರ್ದೇಶನ ಮಾಡಿರುತ್ತಾರೆ.
ರೂಪಾಂತರ……..
ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ರಂಗ ತಂಡ. ‘ರೂಪಾಂತರ’ ವಿಶೇಷವಾಗಿ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರ ಕಥೆ, ಕಾವ್ಯ, ಆಧಾರಿತ ಕಾದಂಬರಿಗಳ ರಂಗ ಪ್ರಯೋಗಗಳನ್ನು ಈ ನಾಡಿನಾದ್ಯಂತ ಮತ್ತು ಹೊರ ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮತ್ತು ವಿಮರ್ಷಕರ ಮೆಚ್ಚುಗೆ ಗಳಿಸಿದೆ. ಲಂಕೇಶರ ರೊಟ್ಟಿ, ಮುಸ್ಸಂಜೆ ಕಥಾಪ್ರಸಂಗ, ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು, ಕರ್ವಾಲೋ, ಕುಂ.ವಿಯವರ ಕತ್ತಲನ್ನು ತ್ರಿಶೂಲ ಹಿಡಿದ ಕಥೆ, ಡಾ.ಶಾಂತರಸರ ಬಡೇಸಾಬು ಪುರಾಣ, ಖುಷ್ವಂತ್ ಸಿಂಗ್ ರವರ ಟ್ರೈನ್ ಟು ಪಾಕಿಸ್ತಾನ್, ವಸುಧೇಂದ್ರರವರ ಮೋಹನ ಸ್ವಾಮಿ, ಡಾ. ಕೆ.ವೈ.ಎನ್. ನಾರಾಯಣ ಸ್ವಾಮಿ, ಡಾ. ಕೆ. ಶಿವರಾಮ ಕಾರಂತರ ಮೈ ಮನಗಳ ಸುಳಿಯಲ್ಲಿ, ಚೋಮನ ದುಡಿ, ಶ್ರೀ ಕೃಷ್ಣ ಆಲನಹಳ್ಳಿಯವರ ಪರಸಂಗದ ಗೆಂಡೆತಿಮ್ಮ ರೂಪಾಂತರ ಪ್ರಯೋಗಿಸಿದ ಕೆಲವು ಮಹತ್ವದ ರಂಗ ಪ್ರಯೋಗಗಳು. ರೂಪಾಂತರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಪ್ರದರ್ಶಿಸಿದ ಮತ್ತೊಂದು ಮಹತ್ವದ ರಂಗ ಪ್ರಯೋಗ ಸಂತ ಕವಿ ಶ್ರೀ ಕನಕದಾಸರ ಅನನ್ಯ ಕಾವ್ಯ ಆಧಾರಿತ ರಾಮಧಾನ್ಯ.ರಾಮಧಾನ್ಯ ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶಕರ ಮುಕ್ತ ಪ್ರಶಂಸೆಗೆ ಪಾತ್ರವಾದ ಹಾಗೂ ಇಂದಿಗೂ ಪ್ರಸ್ತುತವಾಗಿರುವ ಮೇಲು ಕೀಳುಗಳನ್ನು ಕುರಿತು ಧಾನ್ಯಗಳನ್ನು ರೂಪಕವಾಗಿ ಬಳಸಿ ಚಿತ್ರಿಸುವ ಕೃತಿಯ ಆಧಾರಿತ ಈ ನಾಟಕ ಸುಮಾರು 76 ಪ್ರದರ್ಶನಗಳನ್ನು ಕಂಡಿರುವುದು ವಿಶೇಷ.